ಸುದೀಪ್ 'ಮ್ಯಾಕ್ಸ್' ಆರ್ಭಟದ ಬಗ್ಗೆ ಬುಕ್‌ಮೈ ಶೋ ಏನು ಹೇಳುತ್ತಿದೆ? ಹೇಗಿದೆ ರಿಪೋರ್ಟ್
ಎಲ್ಲಾ ಅಡೆತಡೆ ಮೀರಿ 'ಮ್ಯಾಕ್ಸ್' ಸಿನಿಮಾ ಗೆದ್ದಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಭಾನುವಾರ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಗಳಿಕೆ 20 ಕೋಟಿ ರೂ. ಗಡಿ ದಾಟಿದೆ. ಆದರೆ ಅಧಿಕೃತವಾಗಿ ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.
ಮೊದಲ 3 ದಿನಕ್ಕೆ 3000ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿತ್ತು ಎಂದು ಚಿತ್ರತಂಡವೇ ಮಾಹಿತಿ ನೀಡಿದೆ. 'ಮ್ಯಾಕ್ಸ್' ಆರ್ಭಟ ಹೇಗಿದೆ ಎನ್ನುವುದಕ್ಕೆ ಇದು ನಿದರ್ಶನ. ಡಿಸೆಂಬರ್ 25 ಕ್ರಿಸ್‌ಮಸ್ ಹಾಗೂ 28ರ ಸರ್ಕಾರಿ ರಜೆ ಚಿತ್ರಕ್ಕೆ ಪ್ಲಸ್ ಆಗಿತ್ತು. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಚಿತ್ರದ ಕ್ರೇಜ್ ಹೇಗಿದೆ ಎನ್ನವುದನ್ನು ಬುಕ್‌ಮೈ ಶೋ ಟ್ರೆಂಡ್ ಸಾರಿ ಹೇಳುತ್ತಿದೆ.

ಬುಕ್‌ಮೈ ಶೋನಲ್ಲಿ ಪ್ರತಿ ಗಂಟೆಗೆ ಪ್ರತಿ ದಿನಕ್ಕೆ ಎಷ್ಟು ಟಿಕೆಟ್ ಬುಕ್ ಆಗುತ್ತಿದೆ ಎನ್ನುವ ಲೆಕ್ಕ ಸಿಗುತ್ತಿದೆ. ಇನ್ನು ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ವೀಕೆಂಡ್‌ನಲ್ಲಿ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ. ಸಂಜೆ ಹಾಗೂ ರಾತ್ರಿ ಶೋಗಳು ಹೌಸ್‌ಫುಲ್ ಆಗುತ್ತಿದೆ. ಬಹಳ ವೇಗವಾಗಿ ಸಾಗುವ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ.
'ಮ್ಯಾಕ್ಸ್' ದರ್ಬಾರ್ ನೋಡಿದವರೆಲ್ಲಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಒಟ್ಟಾರೆ ನಿರ್ಮಾಪಕರು, ವಿತರಕರು ಖುಷಿಯಾಗಿದ್ದಾರೆ. ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಅಬ್ಬರದ ನಡುವೆಯೂ 'ಮ್ಯಾಕ್ಸ್' ಸೌಂಡ್ ಜೋರಾಗಿದೆ. ಭಾನುವಾರ ಬೆಂಗಳೂರಿನಲ್ಲಿ 100ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಚೆನ್ನೈನಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಆಗುತ್ತಿದೆ. ತಮಿಳಿನ ಕಲೈಪುಲಿ ತನು ಚಿತ್ರ ನಿರ್ಮಿಸಿದ್ದಾರೆ. ಹಾಗಾಗಿ ತಮಿಳುನಾಡಿನಲ್ಲಿ ಸಿನಿಮಾ ದೊಡ್ಡದಾಗಿ ತೆರೆಗೆ ಬಂದಿದೆ.
ಕಳೆದ ಭಾನುವಾರ(ಡಿಸೆಂಬರ್ 22) 'ಮ್ಯಾಕ್ಸ್' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ಬುಧವಾರ ಬೆಳಗ್ಗೆ ಮೊದಲ ಶೋ ಆರಂಭವಾಗುವ ಮುನ್ನ 1 ಲಕ್ಷದ 8 ಸಾವಿರ ಟಿಕೆಟ್ ಬುಕ್ ಆಗಿತ್ತು. ಬಳಿಕ ಮೊದಲ 1 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಅಲ್ಲಿ ಮೊದಲ ದಿನವೇ 1 ಲಕ್ಷ 8 ಸಾವಿರ ಟಿಕೆಟ್ ಬುಕ್‌ಮೈಶೋನಲ್ಲಿ ಬುಕ್ ಆಗಿ ಪ್ರೇಕ್ಷಕರು ಸಿನಿಮಾ ನೋಡಿದ್ದರು.
ಎರಡನೇ ದಿನ 65 ಸಾವಿರ ಟಿಕೆಟ್ ಬುಕ್ ಆಗಿದ್ದರೆ 3ನೇ ದಿನ 79 ಸಾವಿರ ಟಿಕೆಟ್ ಕಾಯ್ದಿರಿಸಲಾಗಿತ್ತು. ಶುಕ್ರವಾರ ರಜಾ ದಿನ ಆಗಿದ್ದರೆ ಬುಕ್ಕಿಂಗ್ ಕೊಂಚ ಡಲ್ಲಾಗಿತ್ತು. 4ನೇ ದಿನ 84 ಸಾವಿರ ಟಿಕೆಟ್ ಬುಕ್ ಆಗಿ ಸದ್ದು ಮಾಡಿತ್ತು. ಒಟ್ಟಾರೆ ಮೊದಲ ನಾಲ್ಕು ದಿನಕ್ಕೆ ಬರೀ ಬುಕ್‌ಮೈ ಶೋನಲ್ಲಿ 4 ಲಕ್ಷದ 36 ಸಾವಿರ ಟಿಕೆಟ್ ಬುಕ್ ಮಾಡಿ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಈ ಮೂಲಕ ಈ ವರ್ಷ 'ಮ್ಯಾಕ್ಸ್' ಹೊಸ ದಾಖಲೆ ಬರೆದಿದೆ.
ಕಳೆದ ಒಂದೂವರೆ ವರ್ಷದಿಂದ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಲೆಕ್ಕ ಸಿಗುತ್ತಿದೆ. ಈ ರೀತಿ BMS ಟ್ರೆಂಡ್ ಶುರುವಾದ ಬಳಿಕ ಮೊದಲ ದಿನ ಅತಿ ಹೆಚ್ಚು ಟಿಕೆಟ್ ಬುಕ್ ಆಗಿರುವ ಸಿನಿಮಾಗಳ ಪಟ್ಟಿಯಲ್ಲಿ 'ಮ್ಯಾಕ್ಸ್' ಸಿನಿಮಾ 2ನೇ ಸ್ಥಾನದಲ್ಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಕಾಟೇರ' ಸಿನಿಮಾ ಮೊದಲ ಸ್ಥಾನದಲ್ಲಿದೆ. ಅಡ್ವಾನ್ಸ್ ಬುಕ್ಕಿಂಗ್ ಸೇರಿ 'ಕಾಟೇರ' ಚಿತ್ರಕ್ಕೆ ಮೊದಲ ದಿನ 2 ಲಕ್ಷ 37 ಸಾವಿರ ಟಿಕೆಟ್ ಬುಕ್ ಆಗಿತ್ತು. ಇನ್ನು 2 ಲಕ್ಷದ 5 ಸಾವಿರ ಟಿಕೆಟ್ 'ಯುಐ' ಚಿತ್ರಕ್ಕೆ ಮೊದಲ ದಿನ ಕಾಯ್ದಿರಿಸಲಾಗಿತ್ತು.


Click it and Unblock the Notifications











