'ಮ್ಯಾಕ್ಸ್' ಕಥೆಯೇನು? ಸೆನ್ಸಾರ್ ಮಂಡಳಿ ಯಾವೆಲ್ಲಾ ದೃಶ್ಯಗಳಿಗೆ ಕತ್ತರಿ ಹಾಕಿದೆ?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಮುಂದಿನ ವಾರ ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಚಿತ್ರದುರ್ಗದಲ್ಲಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಟ್ರೈಲರ್ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದೆ.
ಸದ್ಯ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಅದರ ಬೆನ್ನಲ್ಲೇ 'ಮ್ಯಾಕ್ಸ್' ಎಂಟ್ರಿ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ನಿರ್ಮಾಣ ಆಗಿದೆ. ತಮಿಳಿನ ಕಲೈಪುಲಿ ಎಸ್ ತನು ಚಿತ್ರಕ್ಕೆ ಹಣ ಹೂಡಿದ್ದಾರೆ. ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ.

'ಮ್ಯಾಕ್ಸ್' ಚಿತ್ರದಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆಯಿದೆ. ಹಾಗಾಗಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ಇರುವ ಅಂಶಗಳು ಇರಲ್ಲ. ಬದಲಿಗೆ ಮಾಸ್ ಪ್ರೇಕ್ಷಕರಿಗಾಗಿ ಭರ್ಜರಿ ಮನರಂಜನೆ ಕಾದಿದೆ. ಆಕ್ಷನ್ ಡೋಸ್ ಕೊಂಚ ಹೆಚ್ಚೇ ಇರುತ್ತದೆ ಎನ್ನುವುದು ಸ್ಯಾಂಪಲ್‌ಗಳಲ್ಲಿ ಗೊತ್ತಾಗುತ್ತಿದೆ. ಈಗಾಗಲೇ ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸೆನ್ಸಾರ್ ಮಂಡಳಿ 'ಮ್ಯಾಕ್ಸ್' ಚಿತ್ರಕ್ಕೆ ಸಣ್ಣ ಸಣ್ಣ ಬದಲಾವಣೆಗಳನ್ನು ಸೂಚಿಸಿದೆ. ಮುಖ್ಯವಾಗಿ ಕೆಲ ಸನ್ನಿವೇಶಗಳಲ್ಲಿ "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎನ್ನುವ ಡಿಸ್ಕ್‌ಕ್ಲಮೇರ್ ಹಾಕುವಂತೆ ಸೂಚಿಸಿದೆ. ದೃಶ್ಯವೊಂದರಲ್ಲಿ ನಟಿಸಿರುವ ಹುಡುಗಿಯ ಪೋಷಕರಿಂದ NOC ಪಡೆಯುವಂತೆ ಹೇಳಿದೆ.
ಡ್ರಗ್ ಬಳಕೆಯ ಸನ್ನಿವೇಶವೊಂದರಲ್ಲಿ ಡಿಸ್ಕ್‌ಕ್ಲಮೇರ್ ಹಾಕುವಂತೆ ಸೂಚಿಸಲಾಗಿದೆ. ಕೆಲವು ಕಡೆ ಆಡಿಯೋ ಮ್ಯೂಟ್ ಅಥವಾ ಬದಲಿಸುವಂತೆ ಹೇಳಲಾಗಿದೆ. ಸಾಕಷ್ಟು ಕಡೆಗಳಲ್ಲಿ ಸ್ಮೋಕಿಂಗ್ ದೃಶ್ಯಗಳನ್ನು ಕಮ್ಮಿ ಮಾಡುವಂತೆ ತಿಳಿಸಿದೆ. ನಾಯಕ ಅರ್ಜುನ್ ಮಹಾಕ್ಷನ್ ಸಿಗರೇಟ್ ಹೊತ್ತಿಸಿಕೊಳ್ಳುವ ದೃಶ್ಯಗಳನ್ನು ತಿದ್ದಿ ತೀಡುವಂತೆ ಹೇಳಲಾಗಿದೆ. ಒಟ್ಟಾರೆ ಸಿನಿಮಾ ನೋಡಿ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ.
'ಮ್ಯಾಕ್ಸ್' ಚಿತ್ರದ ಒನ್‌ಲೈನ್ ಸ್ಟೋರಿ ಬಹಳ ಸಿಂಪಲ್. ಅಪ್ರಾಮಾಣಿಕ ಎಂದು ಆರೋಪಿಸಿ ಪೊಲೀಸ್ ಅಧಿಕಾರಿ ಅರ್ಜುf ಮಹಾಕ್ಷಯ್‌ನನ್ನು ಇಲಾಖೆ 2 ತಿಂಗಳು ಸಸ್ಪೆಂಡ್ ಮಾಡಿರುತ್ತದೆ. ಬಳಿಕ ಆತನನ್ನು ಹೊಸ ಠಾಣೆಗೆ ವರ್ಗಾಯಿಸಲಾಗುತ್ತದೆ. 'ಮ್ಯಾಕ್ಸ್' ಡ್ಯೂಟಿಗೆ ಸೇರುವ ಮುನ್ನ ಒಂದು ಘಟನೆ ನಡೆಯುತ್ತದೆ. ಅದರ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ಮುಂದೇನು? ಎನ್ನುವುದನ್ನು ತೆರೆಮೇಲೆ ನೋಡಬೇಕು.
'ಮ್ಯಾಕ್ಸ್' ಚಿತ್ರದ ನಾಯಕ-ನಾಯಕಿ, ಡ್ಯುಯೆಟ್ ಎಲ್ಲಾ ಇಲ್ಲ. ಬರೀ ಆಕ್ಷನ್, ಮಾಸ್ ಮನರಂಜನೆ ಇರಲಿದೆ. ವರಲಕ್ಷ್ಮಿ ಶರತ್‌ಕುಮಾರ್, ಉಗ್ರಂ ಮಂಜು, ಸುನೀಲ್, ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕನ್ನಡ ಹಾಗೂ ತಮಿಳಿನ ಕಲಾವಿದರು, ತಂತ್ರಜ್ಞರು ಸೇರಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದ ರನ್‌ಟೈಮ್ 2 ಗಂಟೆ 12 ನಿಮಿಷ ಎನ್ನುವುದು ಬಹಿರಂಗವಾಗಿದೆ.
ತಮಿಳುನಾಡಿನ ಮಹಾಬಲೀಪುರಂನಲ್ಲಿ ಭಾರೀ ಸೆಟ್ ನಿರ್ಮಿಸಿ ಅಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. 'ಮ್ಯಾಕ್ಸ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ.
ಕಿಚ್ಚ ಸುದೀಪ್ ನಟಿಸಿದ ಸಿನಿಮಾ ತೆರೆಗೆ ಬಂದು ಬಹಳ ದಿನಗಳಾಯಿತು. 'ವಿಕ್ರಾಂತ್ ರೋಣ' ಬಳಿಕ ಗ್ಯಾಪ್ ಆಗಿದೆ. ಹಾಗಾಗಿ ಅಭಿಮಾನಿಗಳು 'ಮ್ಯಾಕ್ಸ್' ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸೆಲೆಬ್ರೇಷನ್ ಶುರುವಾಗಿದೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ ಚಿತ್ರಕ್ಕೆ ದೊಡ್ಡಮಟ್ಟದ ಸ್ವಾಗತ ಸಿಗುವ ನಿರೀಕ್ಷೆಯಿದೆ.


Click it and Unblock the Notifications











