ಆಪರೇಷನ್ ಸಿಂಧೂರ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಬರೆದ ಪತ್ರದಲ್ಲೇನಿದೆ..?
ಕಾಲು ಕೆರೆದುಕೊಂಡು ಸದಾ ಜಗಳಕ್ಕೆ ಬರುವ ಪಾಕಿಸ್ತಾನದ ವಿರುದ್ಧ ಸದ್ಯ ಭಾರತ ಸಮರ ಸಾರಿದೆ. ಜಮ್ಮು, ಪಠಾಣ್ ಕೋಟ್, ಉಧಂಪುರ್‌ದಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪ್ರಯತ್ನಕ್ಕೆ ಭಾರತ ಸರಿಯಾದ ಪ್ರತ್ಯುತ್ತರ ನೀಡಿದೆ ಎಂದು ವರದಿಯಾಗಿದೆ. ಎರಡು ದೇಶಗಳ ನಡುವೆ ಸದ್ಯ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು,
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಕ್ರಮಕ್ಕೆ ಹಲವಾರು ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿಶ್ವಮ್ಯಾಪ್‌ನಲ್ಲಿಯೇ ಪಾಕಿಸ್ತಾನ ಇರಬಾರದು ಆ ತರಹದ ಪಾಠವನ್ನು ಪಾಕಿಸ್ತಾನಕ್ಕೆ ಭಾರತ ಕಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನು ಆ ಭಾಷೆ ಈ ಭಾಷೆ ಎನ್ನದೇ ಚಿತ್ರರಂಗದ ಹಲವರು ಮೋದಿಯವರ ಈ ಯುದ್ಧ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ದೇಶದ ಜೊತೆ ನಾವು ಇದ್ದೇವೆ ಎನ್ನುವ ಸ್ಪಷ್ಟವಾದ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ.

ಇದರ ನಡುವೆ ಇದೀಗ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್, ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆಪರೇಷನ್ ಸಿಂಧೂರ್ ಕೇವಲ ಪ್ರತಿಕ್ರಿಯೆ ಅಲ್ಲ ಅದೊಂದು ಹೇಳಿಕೆ ಅಂದಿದ್ದಾರೆ. ಹಾಗಿದ್ದರೆ ಸುದೀಪ್ ಬರೆದ ಪತ್ರದಲ್ಲೇನಿದೆ..? ಪಿಎಂ ನರೇಂದ್ರ ಮೋದಿಯವರಿಗೆ ಸುದೀಪ್ ಹೇಳಿದ್ದೇನು ? ತಿಳಿಯಲು ಮುಂದೆ ಓದಿ
ಸುದೀಪ್ ಬರೆದ ಸುದೀರ್ಘ ಪತ್ರ
ಕಿಚ್ಚ ಸುದೀಪ
ನಟ, ನಿರ್ಮಾಪಕ, ನಿರ್ದೇಶಕ
ದಿನಾಂಕ: 09 ಮೇ 2025
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ,
ನಮಸ್ಕಾರ
ಮೊದಲಿಗೆ, ನನ್ನ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ನೀವು ಕಳುಹಿಸಿದ ಪತ್ರ, ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಜೀವನಪರ್ಯಂತ ನಾನು ಅದನ್ನು ಮರೆಯಲಾರೆ. ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ ಬದಲಿಗೆ ಈ ದೇಶದ ಹೆಮ್ಮೆಯ ನಾಗರೀಕನಾಗಿ ಬರೆಯುತ್ತಿದ್ದೇನೆ,
ಇಡೀ ದೇಶ ನಿಮಗೆ ಆಪರೇಷನ್ ಸಿಂದೂರದ ಯಶಸ್ಸಿಗೆ ಅಭಿನಂದನೆಗಳನ್ನು ಹೇಳುತ್ತಿದೆ. ಆ ಪೈಕಿ ನಾನು ಕೂಡ ನಿಮ್ಮ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದು ಇದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ ಬದಲಿಗೆ ಇದೊಂದು ಹೇಳಿಕೆಯಾಗಿತ್ತು ಎಂದು ಭಾವಿಸುತ್ತೇನೆ.
ಭಾರತವು ಹಿಂಜರಿಯುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಮೇಲಿರುತ್ತದೆ. ಕೇವಲ ಪದಗಳಿಂದ ಮಾರ್ಗದರ್ಶನ ಮಾಡದೆ, ದೃಢ ನಿಶ್ಚಯದಿಂದ ಮಾರ್ಗದರ್ಶನ ಮಾಡುವ ನಾಯಕನನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಲನಚಿತ್ರೋದ್ಯಮವು ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ನಿಮ್ಮ ಧೈರ್ಯದಿಂದ ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅಪ್ರತಿಮ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲರೂ ಒಂದೇ, ಧ್ವನಿಯೂ ಒಂದೇ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಂತಿದ್ದೇವೆ.
"ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ್"
ಶ್ರೀ ನರೇಂದ್ರ ಮೋದಿ,
ಮಾನ್ಯ ಪ್ರಧಾನ ಮಂತ್ರಿ, ಭಾರತ ಸರ್ಕಾರ,
ಸೌತ್ ಬ್ಲಾಕ್, ರೈಸಿನಾ ಹಿಲ್,
ನವದೆಹಲಿ - 110011
ಗೌರವ ಮತ್ತು ಒಗ್ಗಟ್ಟಿನೊಂದಿಗೆ,
ಸುದೀಪ್ ಸಂಜೀವ್,
ಭಾರತದ ಹೆಮ್ಮೆಯ ಪುತ್ರ,
ಬೆಂಗಳೂರು, ಕರ್ನಾಟಕ.
ಆಪರೇಷನ್ ಸಿಂಧೂರ ಬಗ್ಗೆ ಹಿಂದೆಯೂ ಟ್ವಿಟ್ ಮಾಡಿದ್ದ ಕಿಚ್ಚ ..!
ಈ ಹಿಂದೆ ಅಂದರೆ ಆಪರೇಷನ್ ಸಿಂಧೂರ ಹೆಸರಿನಡಿ ಪಾಕಿಸ್ತಾನದ ವಿರುದ್ದ ಭಾರತ ರಣಕಹಳೆ ಮೊಳಗಿಸಿದಾಗ ಕೂಡ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ನಾನು ಒಬ್ಬ ಭಾರತೀಯನಾಗಿ.. ಈ ಪವಿತ್ರ ಮಣ್ಣಿನ ಒಬ್ಬ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ಘಟನೆ ನನಗೆ ನೋವು ಕೊಟ್ಟಿತ್ತು. ಇಂದು ನನಗೆ ಆ ಕೃತ್ಯಕ್ಕೆ ನ್ಯಾಯ ಸಿಕ್ಕಿದ ಅನುಭವ ಆಗಿದೆ ಎಂದು ಹೇಳಿದ್ದ ಸುದೀಪ್
ಆಪರೇಷನ್ ಸಿಂಧೂರ್ ಇದು ಕೇವಲ ಒಂದು ಮಿಷನ್ ಅಲ್ಲ. ಆದರೆ, ಇದೊಂದು ಪವಿತ್ರ ಪ್ರತಿಜ್ಞೆ ಎಂದು ಬರೆದುಕೊಂಡಿದ್ದರು.
ಕೆಲವು ದಿನಗಳಿಂದ ಭಾರತದ ಸಿಂಧೂರವು ಕಲೆಗಳಿಂದ ಕೂಡಿತ್ತು. ನಮ್ಮ ಯೋಧರು ಸಿಂಧೂರದ ಗೌರವವನ್ನು ಬೆಂಕಿ ಮತ್ತು ನಿಖರತೆಯಿಂದ ಮತ್ತೆ ಮರುಸ್ಥಾಪಿಸಿದ್ದಾರೆ. ನಮ್ಮ ಯೋಧರಿಗೆ ನನ್ನದೊಂದು ಸಲಾಂ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಮುಖಂಡರು ಈ ವಿಚಾರವಾಗಿ ಗಟ್ಟಿಯಾಗಿ, ಧೃಡವಾಗಿ, ಧೈರ್ಯವಾಗಿ ನಿಂತಿದ್ದಕ್ಕೆ ಧನ್ಯವಾದಗಳು. ಹಾಗೇ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣವಾದ, ಗೌರವಯುತವಾದ ಮಾಹಿತಿಗೆ ಸಲ್ಯೂಟ್ ಮಾಡುತ್ತೇನೆ. ಭಾರತ ಮರೆಯುವುದೂ ಇಲ್ಲ. ಭಾರತ ಕ್ಷಮಿಸುವುದೂ ಇಲ್ಲ. ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು.
ಕೇವಲ ಸುದೀಪ್ ಮಾತ್ರವಲ್ಲ ಕನ್ನಡ ಚಿತ್ರರಂಗದ ಹಲವರು ಈ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು. ಈ ಕುರಿತು ಮಾತನಾಡಿದ್ದ ಶಿವಣ್ಣ ಆಪರೇಷನ್ ಸಿಂಧೂರ ಮೂಲಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಪೆಹಲ್ಗಾಮ್ನಲ್ಲಿ ಕೃತ್ಯವನ್ನು ನೋಡಿದ್ಮೇಲೆ ಎಂತಹವರ ರಕ್ತನೂ ಕುದಿಯುತ್ತೆ. ಇಂತಹ ಘಟನೆ ಯಾರ ಜೀವನದಲ್ಲಿ ನಡೆದರೂ ಅದು ಅನ್ಯಾಯವೇ. ಮನುಷ್ಯನ ಜೀವ ತೆಗೆಯೋದು ಅಷ್ಟು ಸುಲಭ ಅಲ್ಲ. ಜೀವ ಎನ್ನುವುದೇ ಒಂದು ಗಿಫ್ಟ್. ಅದನ್ನು ಯಾರೋ ಹೊಡೆದು ಹಾಕಿದರೇ? ಕೇಂದ್ರ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತೆ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದರು.
ಹೀಗೆ ಅಂದು ಕೂಡ ಭಾರತದ ಕಾರ್ಯಕ್ಷಮತೆ, ಕಾರ್ಯಾಚರಣೆಯನ್ನು ಮೆಚ್ಚಿಕೊಂಡಿದ್ದ ಸುದೀಪ್ ಇಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ. ಭಾರತೀಯ ಸೇನೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದಾರೆ.
ಸದ್ಯಕ್ಕೆ ಸುದೀಪ್ ಅವರು ಬರೆದ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆಯುತ್ತಿದ್ದು ಅನೇಕರು ಸುದೀಪ್ ಅವರ ಈ ನಡೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನುಳಿದಂತೆ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು.ಆ ನಂತರ ಪಾಕಿಸ್ತಾನದ ವಿರುದ್ದ ಸಮರ ಸಾರಿದ್ದ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನದ 9 ಸ್ಥಳಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿತ್ತು. ರಾಷ್ಟ್ರೀಯ ವಾಹಿನಿಗಳ ವರದಿಗಳ ಪ್ರಕಾರ ಆಪರೇಷನ್ ಸಿಂಧೂರ ಹೆಸರಿನಡಿ ನಡೆದ ಈ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಗಿದೆ.
ಭಾರತ-ಪಾಕ್ ನಡುವೆ ಕದನ ವಿರಾಮ
ಸದ್ಯ ಭಾರತ ಮತ್ತು ಪಾಕಿಸ್ತಾನದ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ಮಾಡಿದ್ದು, ಡೊನಾಲ್ಡ್ ಟ್ರಂಪ್ ಮಾತುಗಳಿಗೆ ಮನ್ನಣೆಯನ್ನು ನೀಡಿ ಎರಡು ದೇಶಗಳು ಒಪ್ಪಿ ಕದನ ವಿರಾಮಕ್ಕೆ ಮುಂದಾಗಿವೆ.
ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಅಘೋಷಿತ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿದ್ದು, ಉಭಯ ದೇಶಗಳು ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರ ಮಧ್ಯಾಹ್ನ 5 ಗಂಟೆಯಿಂದ ಎಲ್ಲಾ ರೀತಿಯ ದಾಳಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ ಎಂದು ವರದಿಯಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 12 ರಂದು ಮಾತುಕತೆ ನಡೆಯಲಿದ್ದು, ಉಭಯ ಸೇನಾ ಮಹಾನಿರ್ದೇಶಕರು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ತಿಳಿಸಿದ್ದಾರೆ ಎಂದು ಕೂಡ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











