ನಿರ್ಮಾಪಕರ ಧರಣಿ ಬೆನ್ನಲ್ಲೇ ಪೊಲೀಸರಿಗೆ ದೂರು ನೀಡಿದ ಕಿಚ್ಚನ ಫ್ಯಾನ್ಸ್: ಜಟಾಪಟಿ ನಿಲ್ಲೋದ್ಯಾವಾಗ?
ಒಂದು ಪ್ರೆಸ್‌ಮೀಟ್‌ನಿಂದ ಶುರುವಾಗಿದ್ದ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ಜಟಾಪಟಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಇದು ಬೆಳೆಯುತ್ತೇಲೇ ಇದೆ. ಇಬ್ಬರೂ ನಾನಾ-ನೀನಾ ಅಂತ ಪೈಪೋಟಿಗೆ ಇಳಿದಂತೆ ಇದೆ.
ನಿರ್ಮಾಪಕ ಕುಮಾರ್ ಮಾಡಿರುವ ಆರೋಪದ ಬೆನ್ನಲ್ಲೇ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಯೇ ಸಮಸ್ಯೆಗೆ ಇತ್ಯಾರ್ಥ ಮಾಡಿಕೊಳ್ಳುವುದಾಗಿ ಫಿಲ್ಮ್ ಚೇಂಬರ್‌ಗೆ ಪತ್ರ ಬರೆದಿದ್ದರು. ಈ ಬಳಿಕ ನಿರ್ಮಾಪಕರು ರೊಚ್ಚಿಗೆದ್ದಿದ್ದಾರೆ. ಕಿಚ್ಚ ಸುದೀಪ್ ವಿರುದ್ಧ ಸಮರಕ್ಕೆ ನಿಂತಿದ್ದಾರೆ.

ಸುದೀಪ್ ನ್ಯಾಯಾಲಯದ ಮೊರೆ ಹೋಗಿತ್ತು ತಪ್ಪು ಅನ್ನೋದು ಇವರ ವಾದ. ಚಿತ್ರರಂಗಕ್ಕೆ ಫಿಲ್ಮ್ ಚೇಂಬರ್ ಅನ್ನೋ ಅಧಿಕೃತ ವೇದಿಕೆ ಇರುವಾಗ ನ್ಯಾಯಾಲಯದ ಮೊರೆ ಹೋಗಿದ್ದು ನಿರ್ಮಾಪಕರ ನಿದ್ದೆ ಕೆಡಿಸಿದೆ. ಈ ಸಂಬಂಧ ನಿರ್ಮಾಪಕರು ಫಿಲ್ಮ್ ಚೇಂಬರ್ ಮುಂದೆ ಧರಣಿಗೆ ಕೂತಿದ್ದರು. ಇನ್ನೊಂದು ಕಡೆ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಎನ್‌ಎಂ ಸುರೇಶ್ ವಿರುದ್ಧ ದೂರನ್ನು ದಾಖಲಿಸುತ್ತಿದ್ದಾರೆ.
ತಿಪಟೂರಿನಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಎನ್‌ಎಂ ಸುರೇಶ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪೊಲೀಸ್ ಠಾಣಗೆ ತೆರಳಿ ಈ ಇಬ್ಬರು ನಿರ್ಮಾಪಕರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನಲ್ಲಿ "ನಿರ್ಮಾಪಕರು ಎಂದು ಹೇಳಿಕೊಳ್ಳುತ್ತಿರುವವರು ಕಿಚ್ಚ ಸುದೀಪ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಇಮೇಜ್‌ಗೆ ಚ್ಯುತಿ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸುದೀಪ್ ಅವರ ಪರೋಪಕಾರಿ ಚಟುವಟಿಕೆಗಳಿಗೆ ಧಕ್ಕೆಯುಂಟು ಮಾಡಲು ಇಂತಹ ಆರೋಪ ಮಾಡುತ್ತಿದ್ದು, ಇವರು ಕಾನೂನು ಪ್ರಕಾರ ಶಿಕ್ಷೆಗೆ ಅರ್ಹರು" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಾಗೆ ಚಾಮರಾಜನಗರದ ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ಪ್ರತ್ಯೇಕ್ಷವಾಗಿ ದೂರನ್ನು ದಾಖಲು ಮಾಡಿದ್ದಾರೆ. ಚಾಮರಾಜ ನಗರ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರು ದೂರನ್ನು ದಾಖಲು ಮಾಡಿದ್ದಾರೆ.
ಇವರು ಕೂಡ "ಇದು ಕಿಚ್ಚ ಸುದೀಪ್ ಇಮೇಜ್‌ಗೆ ಮಸಿ ಬಳಿಯುವುದಕ್ಕೆ ಮಾಡಿರೋ ಆರೋಪ" ಎಂದು ದೂರಿದ್ದಾರೆ. ಅಲ್ಲದೆ "ಸುದೀಪ್ ಅಭಿಮಾನಿಗಳು ಅವರ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಫೇಸ್‌ಬುಕ್, ವಾಟ್ಸಾಪ್ ಹಾಗೂ ಯೂಟ್ಯೂಬ್‌ಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆಂದು" ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Click it and Unblock the Notifications











