Kichcha Sudeep: ಮದಕರಿ ನಾಯಕರ ಕಲಾಕೃತಿ ಅನಾವರಣ ಮಾಡಿದ ಕಿಚ್ಚ: ಆದರೆ ಸಿನಿಮಾ ಮಾತ್ರ ನಿಂತೇಹೋಯ್ತು!
ಕಲಾವಿದರಾದ ಟಿ.ಎಂ.ವೀರೇಶ್ ಕುಂಚದಲ್ಲಿ ಅರಳಿದ ರಾಜವೀರ ಮದಕರಿ ನಾಯಕರ ಅದ್ಭುತ ಕಲಾಕೃತಿಯನ್ನು ನಟ ಕಿಚ್ಚ ಸುದೀಪ್ ಅನಾವರಣ ಮಾಡಿದ್ದಾರೆ. ಚಿತ್ರದುರ್ಗದ ನಾಯಕ ಸಮುದಾಯದ ಮುಖಂಡರ ನೇತೃತ್ವದಲ್ಲಿ ಕಲಾಕೃತಿ ನೋಡಿ ಸುದೀಪ್ ಮೆಚ್ಚಿಕೊಂಡಿದ್ದಾರೆ. ಸತತ ಹದಿನೈದು ದಿನಗಳ ಪರಿಶ್ರಮದಿಂದ ರಾಜವೀರ ಮದಕರಿ ನಾಯಕರ ಈ ಕಲಾಕೃತಿ ಮೂಡಿದೆ.
ಸುದೀಪ್ ಹೀಗೆ ಮದಕರಿ ನಾಯಕರ ಕಲಾಕೃತಿ ಅನಾವರಣ ಮಾಡುತ್ತಿದ್ದಂತೆ 5 ವರ್ಷಗಳ ಹಿಂದೆ ನಿಂತುಹೋದ ಸುದೀಪ್ ಕನಸಿನ ಸಿನಿಮಾ ಅಭಿಮಾನಿಗಳಿಗೆ ನೆನಪಾಗುತ್ತಿದೆ. ಹೌದು ಕೆಲ ವರ್ಷಗಳ ಹಿಂದೆ ಸುದೀಪ್, ದುರ್ಗದ ಹುಲಿ ಮದಕರಿ ನಾಯಕರ ಜೀವನಾಧರಿತ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಚಾಲೆಂಜಿಂಗ್ ದರ್ಶನ್ ಹೀರೊ ಆಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮದಕರಿ ನಾಯಕರ ಕುರಿತು ಸಿನಿಮಾ ಘೋಷಿಸಿದ್ದರು. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದರು. ಸಿನಿಮಾ ಮುಹೂರ್ತ ನಡೆದಿತ್ತು. ಕೇರಳದಲ್ಲಿ ಒಂದು ವಾರ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಯಿತು.

ದುರ್ಗದ ಹುಲಿ ಮದಕರಿ ನಾಯಕರ ಕುರಿತು ಸಿನಿಮಾ ಮಾಡಲು ಕನ್ನಡದಲ್ಲಿ ಹಲವರು ಪ್ರಯತ್ನಿಸಿದ್ದರು. ಆದರೆ ಯಾಕೋ ಅದು ಕೈಗೂಡುತ್ತಲೇ ಇಲ್ಲ. ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್ ಬಳಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಹಾಗಾಗಿ ಮದಕರಿ ನಾಯಕರ ಕುರಿತು ಯಾರು ಸಿನಿಮಾ ಮಾಡಬೇಕು ಎನ್ನುವ ವಿಚಾರದಲ್ಲಿ ವಿವಾದವೇ ಸೃಷ್ಟಿ ಆಗುವಂತಾಯಿತು. ಇಬ್ಬರು ಕೂಡ ಸಿನಿಮಾ ಮಾಡಲು ಪಟ್ಟು ಹಿಡಿದರು. ಕೊನೆಗೆ ಸುದೀಪ್ ಎರಡು ಸಿನಿಮಾ ಮಾಡೋಣ. ನಾನು ಒಬ್ಬ ಮದಕರಿ ಎಂದು ಸುದೀಪ್ ಹೇಳಿದ್ದರು. ಬಳಿಕ 'ರಾಜಾ ವೀರಮದಕರಿ ನಾಯಕ' ಟೈಟಲ್‌ನಲ್ಲಿ ದರ್ಶನ್ ಸಿನಿಮಾ ಆರಂಭವಾಗಿ ಕೊರೊನಾ ಹಾವಳಿಯಿಂದ ನಿಂತು ಹೋಯಿತು. ಮುಂದೆ ರಾಕ್‌ಲೈನ್ ವೆಂಕಟೇಶ್ ಈ ಚಿತ್ರವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.
'ಕುರುಕ್ಷೇತ್ರ' ಸೆಟ್‌ನಲ್ಲಿ ದುರ್ಯೋಧನನ ಅವತಾರದಲ್ಲಿ ದರ್ಶನ್ ಲುಕ್ ನೋಡಿ ರಾಕ್‌ಲೈನ್ ವೆಂಕಟೇಶ್ ತಮ್ಮ ಚಿತ್ರದಲ್ಲಿ ಮದಕರಿ ನಾಯಕರ ಪಾತ್ರಕ್ಕೆ ದರ್ಶನ್ ಸೂಕ್ತ ಎಂದು ನಿರ್ಧರಿಸಿದ್ದರಂತೆ. ಆ ಸೆಟ್‌ನಲ್ಲಿ ದರ್ಶನ್ ಜೊತೆ ಚರ್ಚಿಸಿದ ಬಳಿಕ ಅವರು ಸಹ ಮದಕರಿ ನಾಯಕರ ಪಾತ್ರ ಮಾಡಲು ಒಪ್ಪಿಕೊಂಡಿದ್ದರು.
ವಾಲ್ಮೀಕಿ ಜನಾಂಗಕ್ಕೆ ಸೇರಿದ್ದ ಸ್ವಾಮಿಯೊಬ್ಬರು ಕೂಡ ಸುದೀಪ್ ಈ ಚಿತ್ರದಲ್ಲಿ ನಟಿಸಬೇಕು ಎಂದಿದ್ದರು. ಅದಕ್ಕೆ ಸುದೀಪ್ ಕೂಡ ಸಮ್ಮತಿ ಸೂಚಿಸಿದ್ದರು. ಕಾರಣಾಂತರಗಳಿಂದ ತಡವಾಗಿತ್ತು. ಆದರೆ ತೆರೆಮರೆಯಲ್ಲಿ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೀತಿತ್ತು. ಮದಕರಿ ನಾಯಕರ ಪಾತ್ರದಲ್ಲಿ ದರ್ಶನ್ ನಟಿಸುತ್ತಾರೆ ಎಂದಾಗಲೂ ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ, ನಾಯಕ ಸಮುದಾಯದ ಸುದೀಪ್ ಅವರೇ 'ವೀರ ಮದಕರಿ' ಸಿನಿಮಾ ಮಾಡಬೇಕು ಎಂದಿದ್ದರು.

ಸುದೀಪ್ 'ವೀರ ಮದಕರಿ' ಟೈಟಲ್‌ನಲ್ಲಿ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿದ್ದು ಗೊತ್ತೇಯಿದೆ. ಆ ಚಿತ್ರಕ್ಕೆ 'ರಾಜ ವೀರ ಮದಕರಿ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಂರಂತೆ. ಆಗ ಟೈಟಲ್ ಬದಲಿಸುವಂತೆ ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಮನವಿ ಮಾಡದ್ದರು. ಜೊತೆಗೆ ರಾಜ ವೀರ ಮದಕರಿ ನಾಯಕ ಜೀವನಾಧರಿತ ಸಿನಿಮಾ ಮಾಡುವಂತೆಯೂ ಸುದೀಪ್ ಅವರಿಗೆ ಮನವಿ ಮಾಡಿದ್ದರು. ಆಗಿನಿಂದಲೂ ಸುದೀಪ್ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಅಷ್ಟರಲ್ಲಿ ರಾಕ್‌ಲೈನ್ ವೆಂಕಟೇಶ್ ಸಿನಿಮಾ ಘೋಷಿಸಿದ್ದು ನೋಡಿ ಅಚ್ಚರಿಗೊಂಡಿದ್ದರು.
ಸದ್ಯ ಸುದೀಪ್ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್ ಶೋ ನಡೆಸಿಕೊಡುತ್ತಿದ್ದಾರೆ. ಮತ್ತೆರಡು ಕತೆಗಳನ್ನು ಫೈನಲ್ ಮಾಡಿದ್ದಾರೆ. ಇದೆಲ್ಲದರ ನಡುವೆ ತಮ್ಮ ಕನಸಿನ ರಾಜ ವೀರ ಮದಕರಿ ನಾಯಕ ಸಿನಿಮಾ ಯಾವಾಗ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











