Sudeep: ಕಾಲ್‌ಶೀಟ್ ವಿವಾದ ತಣ್ಣಗಾಗುತ್ತಿದ್ದಂತೆ ತಿರುಪತಿಗೆ ಸುದೀಪ್ ಭೇಟಿ: ಶೀಘ್ರದಲ್ಲೇ ಸಿಹಿಸುದ್ದಿ
ಇತ್ತೀಚೆಗೆ ಸುದೀಪ್ ಹಾಗೂ ಎಂ. ಎನ್ ಕುಮಾರ್ ನಡುವಿನ ಕಾಲ್‌ಶೀಟ್ ವಿವಾದ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅದ್ಯಾವಮಟ್ಟಿಗೆ ಅಂದ್ರೆ ಸುದೀಪ್ ಖುದ್ದಾಗಿ ಕೋರ್ಟ್‌ಗೆ ಹೋಗಿ ತಮ್ಮ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ ರಾಜಿ ಸಂಧಾನದ ಮಾತುಗಳು ನಡೀತಿದೆ. ಸದ್ಯ ದಿಢೀರನೇ ಸುದೀಪ್ ತಿರುಪತಿಗೆ ಭೇಟಿ ನೀಡಿದ್ದಾರೆ.
ಪತ್ನಿ ಪ್ರಿಯಾ ಹಾಗೂ ಪೋಷಕರ ಸಮೇತ ಸುದೀಪ್ ಶನಿವಾರ (ಜುಲೈ 29) ತಿರುಮಲ ತಿರುಪತಿ ಸನ್ನಿಧಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ಅಭಿಮಾನಿಗಳು ಕಿಚ್ಚನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ವೇಳೆ ಸುದೀಪ್ ಅಭಿಮಾನಿಗಳತ್ತ ನಗುಬೀರಿ ಹೊರಟಿರುವ ವಿಡಿಯೋ ವೈರಲ್ ಆಗುತ್ತಿದೆ. ಕಿಚ್ಚನ ಆಂಗ್ರಿ ಯಂಗ್‌ಮ್ಯಾನ್ ಲುಕ್‌ಗೆ ತೆಲುಗು ಪ್ರೇಕ್ಷಕರು ಕೂಡ ಫಿದಾ ಆಗಿರೋದು ಗೊತ್ತೇಯಿದೆ. ಹಾಗಾಗಿ ಕಿಚ್ಚನನ್ನು ನೋಡಿ ಖುಷಿಯಾಗಿದ್ದಾರೆ.

ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತ
ನಟ ಸುದೀಪ್ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಅಬ್ಬರಿಸಿ ಗೆದ್ದಿದ್ದಾರೆ. ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ ತೆಲುಗಿನಲ್ಲಿ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ 'ಬಾಹುಬಲಿ' ಚಿತ್ರದಲ್ಲೂ ಕಿಚ್ಚನ ಗೆಸ್ಟ್ ಅಪಿಯರೆನ್ಸ್ ಇತ್ತು. ಇನ್ನು ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಘೋಷಣೆಯಾದಾಗ ಯಾವುದಾದರೂ ಪಾತ್ರಕ್ಕೆ ಕಿಚ್ಚನ ಹೆಸರು ಕೇಳಿಬರುತ್ತದೆ. ಅಷ್ಟರಮಟ್ಟಿಗೆ ಟಾಲಿವುಡ್‌ನಲ್ಲಿ ಅಭಿನಯ ಚಕ್ರವರ್ತಿ ಹವಾ ಇದೆ. ಆದರೆ ಇತ್ತೀಚಿನ ಸುದೀಪ್ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಲ್ಲ ಎಂದುಬಿಟ್ಟಿದ್ದಾರೆ.
ಸುದೀಪ್ ಮಾನನಷ್ಟ ಮೊಕದ್ದಮೆ
ನಟ ಸುದೀಪ್ ನನ್ನ ಬಳಿ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಅಡ್ವಾನ್ಸ್ ಪಡೆದಿದ್ದಾರೆ, ಆದರೆ ಈಗ ಕಾಲ್‌ಶೀಟ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಎಂ. ಎನ್ ಕುಮಾರ್ ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಕುಮಾರ್ ಬೆನ್ನಲ್ಲೇ 'ಹುಚ್ಚ' ಸಿನಿಮಾ ನಿರ್ಮಾಪಕ ರಹಮಾನ್ ಕೂಡ ಸುದೀಪ್ ನನಗೆ 35 ಲಕ್ಷ ಹಣ ಕೊಡಬೇಕು ಎಂದು ಮನವಿ ಮಾಡಿದ್ದರು. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾತೆ ಎಂದು ಸುದೀಪ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಕಾಲ್‌ಶೀಟ್ ವಿವಾದ ಸುಖಾಂತ್ಯ
ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿರ್ಮಾಪಕ ಎಂ. ಎನ್ ಕುಮಾರ್ ಕೋರ್ಟ್ ಕಛೇರಿ ಬೇಡ. ಫಿಲ್ಮ್ ಚೇಂಬರ್‌ನಲ್ಲೇ ವಿವಾದ ಬಗೆಹರಿಸಿಕೊಳ್ಳೋಣ ಎಂದು ಪಟ್ಟು ಹಿಡಿದರು. ಬಳಿಕ ನಟ ರವಿಚಂದ್ರನ್ ಅವರಿಗೂ ಮನವಿ ಮಾಡಿದ್ದರು. ಈ ಸಂಬಂಧ ಇತ್ತೀಚೆಗೆ ಕ್ರೇಜಿಸ್ಟಾರ್ ಮನೆಯಲ್ಲಿ ಸಂಧಾನ ಸಭೆ ಕೂಡ ನಡೆದಿದೆ. ಇದರಲ್ಲಿ ಸುದೀಪ್, ಕುಮಾರ್ ಇಬ್ಬರು ಭಾಗವಹಿಸಿದ್ದರು. ಶಿವಣ್ಣ ಕೂಡ ಈ ಬಗ್ಗೆ ಮಾತನಾಡಿದ್ದು ವಿವಾದ ಸುಖಾಂತ್ಯ ಕಾಣುವ ಸುಳಿವು ಸಿಕ್ತಿದೆ.
ಮಹಾಬಲಿಪುರಂನಲ್ಲಿ ಕಿಚ್ಚ46
'ವಿಕ್ರಾಂತ್ ರೋಣ' ಬಳಿಕ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ತಮಿಳಿನ ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಮಹಾಬಲಿಪುರಂನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆಯಂತೆ. ಶೀಘ್ರದಲ್ಲೇ ಸುದೀಪ್ ಚಿತ್ರೀಕರಣದ ಅಖಾಡಕ್ಕೆ ಇಳಿಯಲಿದ್ದಾರೆ.


Click it and Unblock the Notifications











