ಕಳೆದ ವಾರ ಬಿಡುಗಡೆಗೊಂಡು ಮೆಚ್ಚುಗೆಗೆ ಪಾತ್ರವಾದ ಸಿನಿಮಾಗೆ ಶುಭಕೋರಿದ ಸುದೀಪ್
ಕಿಚ್ಚ ಸುದೀಪ್ ಒಳ್ಳೆಯ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡುವಲ್ಲಿ ಎತ್ತಿದ ಕೈ. ಈ ಹಿಂದೆ ಹಲವು ಬಾರಿ ಕನ್ನಡ ಚಿತ್ರಗಳನ್ನು ನೋಡಿ, ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು, ಟ್ರೈಲರ್‌ಗಳನ್ನು ಬಿಡುಗಡೆ ಮಾಡಿ ಬೆಂಬಲ ನೀಡಿರುವ ಸುದೀಪ್ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ತನುಜಾ ಎಂಬ ಚಿತ್ರಕ್ಕೆ ಶುಭಕೋರುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊವಿಡ್ ಸಮಯದಲ್ಲಿ ನೀಟ್ ಪರೀಕ್ಷೆ ಬರೆಯಲು 400 ಕಿಲೋಮೀಟರ್ ಪ್ರಯಾಣ ಮಾಡಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ತನುಜಾ ಎಂಬಾಕೆಯ ಕಥೆ ಇದಾಗಿದ್ದು, ಶಿಕ್ಷಣದ ಮಹತ್ವವನ್ನು ಈ ಚಿತ್ರ ಸಾರಿದೆ. ಈ ಚಿತ್ರ ಕಳೆದ ಶುಕ್ರವಾರ ( ಫೆಬ್ರವರಿ 3 ) ರಾಜ್ಯಾದ್ಯಂತ ಬಿಡುಗಡೆಗೊಂಡು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಹೀಗೆ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿರುವ ಈ ಚಿತ್ರದ ಕುರಿತು ಇದೀಗ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, " ವಿಶ್ವೇಶ್ವರ್ ಭಟ್ ಅವರ ಅಂಕಣ ಬರಹವನ್ನು ಆಧರಿಸಿ ತಯಾರಾದ ನೈಜ ಘಟನೆಯ ತನುಜಾ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಲ್ಪಟ್ಟೆ. ನಿರ್ದೇಶಕರಾದ ಹರೀಶ್ ಮತ್ತು ಇಡೀ ತಂಡಕ್ಕೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಹೀಗೆ ಕಿಚ್ಚ ಸುದೀಪ್ ಚಿತ್ರಕ್ಕೆ ಬೆಂಬಲ ನೀಡಿದ್ದರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸುದೀಪ್ ಕನ್ನಡದಲ್ಲಿಯೇ ಟ್ವೀಟ್ ಮಾಡಿರುವುದರ ಕುರಿತು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ಸಪ್ತ ಪವೂರ್ ಈ ಚಿತ್ರದಲ್ಲಿ ಲೀಡ್ ರೋಲ್ ನಿರ್ವಹಿಸಿದ್ದು, ಬಿಎಸ್ ಯಡಿಯೂರಪ್ಪ, ಕೆಎಸ್ ಸುಧಾಕರ್ ಹಾಗೂ ವಿಶ್ವೇಶರ್ ಭಟ್ ಸಹ ಬಣ್ಣ ಹಚ್ಚಿದ್ದಾರೆ.
ಇನ್ನು ಈ ಟ್ವೀಟ್‌ಗೂ ಮುನ್ನ ನಿನ್ನೆ ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಗೈರಾಗಿದ್ದರು ಎಂಬ ವಿಷಯದ ಕುರಿತು ಪ್ರತಿಕ್ರಿಯಿಸಿದ ಸುದೀಪ್ "ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ.. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ...." ಎಂದು ಬರೆದುಕೊಂಡು ಸ್ಪಷ್ಟನೆ ನೀಡಿದ್ದರು.


Click it and Unblock the Notifications











