ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್; ಅಭಿಮಾನಿಗಳು ಖುಷ್
'ಮಾರ್ಕ್' ಬಳಿಕ 'ಬಿಲ್ಲ ರಂಗ ಬಾಷ' ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ಹೊಸ ಕ್ಯಾರವಾನ್ ಏರಿ ಕಿಚ್ಚ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದಾರೆ. ಇದೀಗ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡದಿಂದ ಸುಳಿವು ಸಿಕ್ಕಿದೆ.
ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಇದು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸೈಫೈ ಸಿನಿಮಾ ಕಟ್ಟಿಕೊಡಲಾಗ್ತಿದೆ. ಸುದೀಪ್ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಟೈಟಲ್‌ನಿಂದಲೇ 'ಬಿಲ್ಲ ರಂಗ ಬಾಷ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಸ್ಟಾರ್ ನಟರು ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗಿದೆ ಎನ್ನುವ ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆರಡು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ 'ಮ್ಯಾಕ್ಸ್' ಹಾಗೂ 'ಮಾರ್ಕ್' ಸಿನಿಮಾಗಳ ಮೂಲಕ ಕಿಚ್ಚ ಪ್ರೇಕ್ಷಕರ ಮುಂದೆ ಬಂದಿದ್ದರು. ಇನ್ನೆರಡು ವರ್ಷಗಳಲ್ಲಿ 'ಬಿಲ್ಲ ರಂಗ ಬಾಷ' ಸಿನಿಮಾ ಬರುತ್ತೆ. ಅದರ ಜೊತೆಗೆ ಮತ್ತೊಂದು ಸಿನಿಮಾ ಮಾಡ್ತೀನಿ ಎಂದಿದ್ದರು. ಆದರೆ 'ಮಾರ್ಕ್' ಸಿನಿಮಾ ಬಿಡುಗಡೆಯಾಗಿ 6 ತಿಂಗಳ ಬಳಿಕ ಅನೂಪ್ ಭಂಡಾರಿ ನಿರ್ದೇಶನಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಆದರೂ ಸಾಧ್ಯವಾದಷ್ಟು ಬೇಗ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಿ ಸುದೀಪ್ ಎರಡು ಬಾರಿ ಗೆದ್ದಿದ್ದರು. ಆದರೆ 20 ದಿನ ತಡವಾಗಿ ಸಂಕ್ರಾಂತಿಗೆ 'ಬಿಲ್ಲ ರಂಗ ಬಾಷ' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣಕ್ಕೆ ಚಿತ್ರದ ನಿರ್ಮಾಪಕಿ ಮಾಡಿರುವ ಒಂದು ಟ್ವೀಟ್. ಅಭಿಮಾನಿಯೊಬ್ಬರು ಮಾಡಿರುವ ಟ್ವೀಟ್ ಅನ್ನು ನಿರ್ಮಾಪಕಿ ಚೈತನ್ಯಾ ರೆಡ್ಡಿ ರೀಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ 'ಬಿಲ್ಲ ರಂಗ ಬಾಷ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಂಕ್ರಾಂತಿ-2027ಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದು ಪೋಸ್ಟ್ ಮಾಡಿರುವುದನ್ನು ಚೈತನ್ಯಾ ರೆಡ್ಡಿ ಹಂಚಿಕೊಂಡಿದ್ದಾರೆ. ಹೇಳಿಕೇಳಿ ಇದು ಬಹಳ ಅದ್ಧೂರಿ ಸಿನಿಮಾ. ಚಿತ್ರೀಕರಣಕ್ಕೆ ಬಹಳ ದಿನಗಳು ಬೇಕಾಗುತ್ತದೆ. ಅದೇ ರೀತಿ ಪೋಸ್ಟ್ ಪ್ರೊಡಕ್ಷನ್‌ಗೂ ಹೆಚ್ಚು ಸಮಯ ಹಿಡಿಸಲಿದೆ. ಇದೆಲ್ಲದರ ನಡುವೆ ಇನ್ನು 6 ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ನಿಜವೇ? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ.
ಸುದೀಪ್ ಹಾಗೂ ಅನೂಪ್ ಕಾಂಬಿನೇಷನ್ ಬಿಟ್ಟರೆ 'ಬಿಲ್ಲ ರಂಗ ಬಾಷ' ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅರುಣ್ ಸಾಗರ್, ರುಶಾಂಕ್ ನಿರ್ಮಲ್, ವಿನಯ್ ಗೌಡ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ಹೆಚ್ಚಿನ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಸಿಗಬೇಕಿದೆ. ಸುದೀಪ್ ಹಾಗೂ ಅನೂಪ್ ಒಟ್ಟಿಗೆ ಸೇರಿದ್ದಾರೆ ಅಂದ್ರೆ ನಿರೀಕ್ಷೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ 'ವಿಕ್ರಾಂತ್ ರೋಣ' ಚಿತ್ರಕ್ಕಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಭಾರೀ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗ್ತಿದೆ.
ಚಿತ್ರಕ್ಕಾಗಿ ಕಿಚ್ಚ ಸುದೀಪ್ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ತೆಲುಗಿನಲ್ಲಿ 'ಹನುಮಾನ್' ಚಿತ್ರವನ್ನು ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಾಣ ಮಾಡಿತ್ತು. ಸಿನಿಮಾ ಹಿಟ್ ಆಗಿದ್ದು ಗೊತ್ತೇಯಿದೆ. 'ಬಿಲ್ಲ ರಂಗ ಬಾಷ' ಸಿನಿಮಾ ಮೂಲಕ ಚಂದನವನಕ್ಕೆ ಸಂಸ್ಥೆ ಎಂಟ್ರಿ ಕೊಟ್ಟಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರಲಿದೆ.


Click it and Unblock the Notifications