ಕೊಲೆ ಆರೋಪ ಹೊತ್ತು ಕಂಬಿ ಹಿಂದೆ ಹೋದ ಮಾಜಿ ಗೆಳೆಯ ದರ್ಶನ್ ಬಗ್ಗೆ ಹೇಳಿದ್ದೇನು ಸುದೀಪ್..?
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ 07 ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿತ್ತು. ಒಂದು ವೇಳೆ ರೆಬೆಲ್ ಸ್ಟಾರ್ ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು. ಆದರೆ ದುರಾದೃಷ್ಟವಶಾತ್ ಹಾಗಾಗಲಿಲ್ಲ.
ಹಾಗಂಥ ಈ ಇಬ್ಬರು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಅಂತೇನು ಇಲ್ಲ. ಯಾಕೆಂದರೆ .. ಭವಿಷ್ಯದಲ್ಲಿ ಇಬ್ಬರೂ ಒಂದಾಗಬಹುದು. ಕಾಲವನ್ನೂ ತಡೆಯೋರು ಯಾರು ಇಲ್ಲ ಎಂದು ಇಬ್ಬರೂ ಹಾಡನ್ನ ಹಾಡಿದರು ಹಾಡಬಹುದು. ಆ ಕಾಲ ಯಾವತ್ತು ಬರುತ್ತೆ ಅನ್ನುವುದಕ್ಕೆ ಸ್ಪಷ್ಟ ಉತ್ತರ ಇಲ್ಲವಾದರೂ, ಸುದೀಪ್ ಅವರಿಗೆ ತಮ್ಮ ನಡೆ ಮತ್ತು ನುಡಿಯಲ್ಲಿ ಸ್ಪಷ್ಟತೆಯಂತೂ ಇದೆ. ಇದಕ್ಕೆ ಕೈಗನ್ನಡಿಯೇ ಕೆಚ್ಚದೆಯ ಕಿಚ್ಚ ಸುದೀಪ್, ಪೊರ್ಕಿ ದರ್ಶನ್ ಬಗ್ಗೆ ಆಡಿದ ಮಾತುಗಳು.

ಹೌದು. ಅಸಲಿಗೆ ದರ್ಶನ್ ಕಂಬಿ ಹಿಂದೆ ಹೋದ ನಂತರ, ಅನೇಕರಲ್ಲಿ ಸುದೀಪ್ ಪ್ರತಿಕ್ರಿಯೆ ತಿಳಿದುಕೊಳ್ಳುವ ಕುತೂಹಲ ಇತ್ತು. ಈ ವಿಚಾರದಲ್ಲಿ ಸುದೀಪ್ ಅವರ ಅಭಿಪ್ರಾಯ ಕೇಳಲು ಸುದೀಪ್ ಅವರನ್ನ ಅನೇಕರು ಸಂಪರ್ಕಿಸಿದ್ದರು ಕೂಡ. ಆದರೆ.. ಸುದೀಪ್ ಈ ವಿಚಾರದ ಬಗ್ಗೆ ಮಾತನಾಡಿರಲಿಲ್ಲ. ಮೌನ ಮುರಿದಿರಲಿಲ್ಲ. ಆದರೆ ಈಗ ಸುದೀಪ್ ಮಾತನಾಡಿದ್ದಾರೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಏನು ಬರುತ್ತಿದಿಯೋ ನನಗೂ ಅಷ್ಟೇ ಮಾತ್ರ ಗೊತ್ತು ಎಂದಿರುವ ಸುದೀಪ್, ಸತ್ಯವನ್ನು ಹೊರತರಲು ಮಾಧ್ಯಮಗಳು, ಪೊಲಿಸರು ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ಇನ್ನೂ ಸಿಎಂ ಅವರೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕೂತಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ ಎಂದಿರುವ ಸುದೀಪ್, ಸಾಮಾನ್ಯ ಮನುಷ್ಯನಾಗಿ ನಾನು ಯಾರ ಪರ, ವಿರುದ್ಧವೂ ಅಲ್ಲ, ಆದರೆ ಬಾಳಿ ಬದುಕಬೇಕಾದ ಹುಡುಗ ಸತ್ತಿದ್ದಾನಲ್ಲ ಆತನಿಗೆ ನ್ಯಾಯ ಸಿಗಬೇಕು, ಆತನ ಕುಟುಂಬಕ್ಕೆ, ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಕಿಚ್ಚ ಸುದೀಪ್, ಎಲ್ಲರಿಗೂ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಬರಬೇಕು ಎಂದರೆ ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಚಿತ್ರರಂಗಕ್ಕೆ ಇಂದು ನ್ಯಾಯ ಸಿಗಬೇಕು, ಚಿಕ್ಕ ಚಿಕ್ಕ ವಿಚಾರಗಳಿಗೂ ಚಿತ್ರರಂಗವನ್ನು ದೂಷಿಸಲಾಗುತ್ತಿದೆ. ಒಬ್ಬಿಬ್ಬರಿಂದ ಚಿತ್ರರಂಗ ಅಲ್ಲ, ಆ ಕುಟುಂಬಕ್ಕೆ ನ್ಯಾಯ ಸಿಕ್ಕಾಗ ಚಿತ್ರರಂಗಕ್ಕೂ ಖುಷಿಯಾಗುತ್ತದೆ ಎಂದು ಕೂಡ ಹೇಳಿದ್ದಾರೆ.
ಇನ್ನೂ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಹೆಣ್ಮಗುಗೆ ನ್ಯಾಯ ಸಿಗಬೇಕು ಎಂದಿರುವ ಕಿಚ್ಚ ಸುದೀಪ್ ಬಾಳಿ ಬದುಕಬೇಕಾದ ರೇಣುಕಾ ಸ್ವಾಮಿ ಅವರು ಎಲ್ಲೋ ರಸ್ತೆಯಲ್ಲಿ ಆ ರೀತಿ ಬಿದ್ದಿದ್ದರಲ್ಲ, ಅವರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಹುಟ್ಟಬೇಕಾಗಿರುವ ಆ ಮಗುಗೆ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟುಬೇಕು ಎಂದರೆ ಈ ಕೇಸ್ನಲ್ಲಿ ಒಳ್ಳೆಯ ನ್ಯಾಯ ಆಗಬೇಕು' ಎಂದಿದ್ದಾರೆ ಕಿಚ್ಚ ಸುದೀಪ್.

ಇನ್ನೂ ಬ್ಯಾನ್ ಮಾಡಬೇಕು ಅನ್ನೋದು ಮುಖ್ಯ ಅಲ್ಲ. ಬ್ಯಾನ್ ಅಂದ್ರೆ ಏನು? ಚೇಂಬರ್ ಇರೋದು ನ್ಯಾಯ ಕೊಡಿಸೋಕೆ ಎಂದು ಹೇಳಿರುವ ಕಿಚ್ಚ ಸುದೀಪ್, ಬ್ಯಾನ್ ಗಿಂತ ನ್ಯಾಯ ಅನ್ನೋ ಪದ ದೊಡ್ಡದು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾವತ್ತು ಈ ತರ ಆಗಬಾರದು. ಎಷ್ಟೋ ವರ್ಷಗಳ ಇತಿಹಾಸ ಚಿತ್ರರಂಗಕ್ಕಿದೆ. ನನ್ನ ಕಣ್ಣ ಮುಂದೆ ಆ ಫ್ಯಾಮಿಲಿ ಮಾತ್ರ ಬರುತ್ತಿದೆ ಎಂದು ಕೂಡ ಹೇಳಿದ್ದಾರೆ.
ನಾವು ಸೆಲೆಬ್ರಿಟಿ ಆದ ಮಾತ್ರಕ್ಕೆ ನಾವು ದೇವರಲ್ಲ ಎಂದು ಕೂಡ ಹೇಳಿರುವ ಸುದೀಪ್, ನಮ್ಮನ್ನ ದೇವರನ್ನಾಗಿ ಮಾಡಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ. ನಾವೂ ಕೂಡ ಮನುಷ್ಯರೇ ಆಗಿದ್ದೇವೆ, ಸೆಲೆಬ್ರಿಟಿಗಳು ಎಲ್ಲವನ್ನೂ ಒಳ್ಳೆಯದನ್ನೇ ಮಾಡಬೇಕು ಅಂತ ಅಪೇಕ್ಷಿಸಬೇಡಿ, ಕೆಲವೊಮ್ಮೆ ನಮಗೆ ತಿಳಿಯದೆ ಏನೇನೋ ನಡೆದು ಹೋಗುತ್ತವೆ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್.


Click it and Unblock the Notifications










