CCL 2026: ಚೆನ್ನೈ ವಿರುದ್ಧ ಗೆದ್ದು ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾರಿಸಿದ ಕಿಚ್ಚ ಸುದೀಪ್
ಕ್ರಿಕೆಟ್ ಮೈದಾನದಲ್ಲಿ ಪಂದ್ಯದ ಫಲಿತಾಂಶವನ್ನು ಊಹಿಸುವುದು ಅಷ್ಟು ಸುಲಭವಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು. ಒಂದು ಕ್ಯಾಚ್, ಒಂದು ವಿಕೆಟ್ ಅಥವಾ ಒಂದು ಸಿಕ್ಸರ್ ಪಂದ್ಯದ ದಿಕ್ಕನ್ನು ಬದಲಿಸಿಬಿಡುತ್ತದೆ. ಸಿಸಿಎಲ್ 2026ರ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ರೋಚಕ ಗೆಲುವು ಸಾಧಿಸಿದೆ.
ಗೆಲ್ಲುವುದು ಕಷ್ಟ ಎಂದುಕೊಂಡಿದ್ದ ಪಂದ್ಯವನ್ನು ಜೆಕೆ, ಕರ್ನಾಟಕ ಬುಲ್ಡೋಜರ್ಸ್ ಕಡೆ ವಾಲುವಂತೆ ಮಾಡಿದ್ದರು. ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಸಂಭ್ರಮದಲ್ಲಿ ಕಿಚ್ಚನಿಗೆ ಗೆಲುವಿನ ಉಡುಗೊರೆ ಸಿಕ್ಕಿದೆ. ಕೈಜಾರಿದ್ದ ಪಂದ್ಯವನ್ನು ಒಂದೇ ಒಂದು ಓವರ್‌ನಲ್ಲಿ ಮೇಲೆತ್ತಿದ್ದರು ಜಯರಾಮ್ ಕಾರ್ತಿಕ್. ಭರ್ಜರಿ ಅರ್ಧ ಶತಕ ಸಿಡಿಸಿ ತಂಡ ಗೆಲುವಿನ ದಡ ಸೇರಲು ನೆರವಾದರು. ಅಂತಿಮವಾಗಿ ಸುದೀಪ್ ಗೆಲುವಿನ ರನ್ ಗಳಿಸಿ ಸಂಭ್ರಮಿಸಿದ್ದು ವಿಶೇಷ.

ಕಳೆದ ಸೀಸನ್‌ನಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕಿಚ್ಚನ ಪಡೆ ಸೋತಿತ್ತು. ಮೈಸೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ನಿರಾಸೆ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ತಮಿಳುನಾಡಿನಲ್ಲೇ ಅದು ಕೂಡ ಸೆಮಿಫೈನಲ್ ಪಂದ್ಯದಲ್ಲೇ ಚೆನ್ನೈ ತಂಡವನ್ನು ಬಗ್ಗುಬಡಿದು ಕಿಚ್ಚನ ಪಡೆ ಫೈನಲ್ ಪ್ರವೇಶಿಸಿದೆ. ಇಂದು(ಫೆಬ್ರವರಿ 1) ಸಂಜೆ ನಡೆಯುವ ಅಂತಿಮ ಹಣಾಹಣಿಯಲ್ಲಿ ಬೆಂಗಾಲ್ ಟೈಗರ್ಸ್ ಎದುರು ಸೆಣಸಲಿದೆ.
ಜನವರಿ 31 ಕಿಚ್ಚನ ಜೀವನದಲ್ಲಿ ಮರೆಯಲಾಗ ದಿನ. 30 ವರ್ಷಗಳ ಹಿಂದೆ ಇದೇ ದಿನ 'ಬ್ರಹ್ಮ' ಚಿತ್ರಕ್ಕಾಗಿ ಸುದೀಪ್ ಬಣ್ಣ ಹಚ್ಚಿದ್ದರು. ಆ ಸಿನಿಮಾ ಬಿಡುಗಡೆ ಆಗದೇ ಇದ್ದರೂ ಆ ದಿನ ಕಿಚ್ಚನಿಗೆ ಮರುಹುಟ್ಟು ಕೊಟ್ಟ ದಿನ. ಚೆನ್ನೈ ವಿರುದ್ಧ ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲೇ ಕೇಕ್ ಕತ್ತರಿಸಿ ಸುದೀಪ್ ಸಂಭ್ರಮಾಚರಣೆ ಮಾಡಿದ್ದರು. ವಿಶೇಷ ದಿನದಂದು ಕಿಚ್ಚನ ಹುಡುಗರು ಗೆಲುವಿನ ಉಡುಗೊರೆ ನೀಡಿದ್ದಾರೆ. ಅದರಲ್ಲೂ ಪಂದ್ಯದ ಗತಿ ಬದಲಿಸಿ ಜೆಕೆ ಗಮನ ಸೆಳೆದರು.
ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 160 ರನ್ ಗಳಿಸಿತ್ತು. ಭರ್ಜರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದ ಚೆನ್ನೈ ಕಿಂಗ್ಸ್ ದಿಢೀರನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ನಾಯಕ ವಿಕ್ರಾಂತ್ ಅಬ್ಬರದ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಯಾವುದೇ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದ್ದ ತಂಡ ಬಳಿಕ 30 ರನ್ ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು.
ಬಳಿಕ ಚೇತರಿಸಿಕೊಂಡು ಆಧವ್ 31 ರನ್ ಸಹಾಯದಿಂದ 160 ರನ್‌ಗಳ ಟಾರ್ಗೆಟ್ ಕೊಟ್ಟಿತ್ತು. ಆರಂಭದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಆದರೆ ಬಳಿಕ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕ್ಕಿತ್ತು. ಇದೇ ಸಮಯದಲ್ಲಿ ಮೈದಾನಕ್ಕಿಳಿದ ಜೆಕೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಅವರು ಚೆನ್ನೈ ಕಿಂಗ್ಸ್ ತಂಡದ ನಾಯಕ ವಿಕ್ರಾಂತ್ ಎಸೆದ ಓವರ್‌ನಲ್ಲಿ ಪಂದ್ಯವನ್ನು ಕಿತ್ತುಕೊಂಡಿದ್ದರು. ಪಂದ್ಯ ಗೆದ್ದ ಬಳಿಕ ಕನ್ನಡ ಬಾವುಟ ಹಿಡಿದು ಸುದೀಪ್ ಸಂಭ್ರಮಿಸಿದರು. ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕಿಡಿಗೇಡಿ ಒಬ್ಬ ಕನ್ನಡ ಬಾವುಟ ಕಿತ್ತು ಅವಮಾನ ಮಾಡಿದ್ದ.
44 ಎಸೆತಗಳಲ್ಲಿ 50 ರನ್ ಗಳಿಸಿ ಜೆಕೆ ಔಟ್ ಆದರು. ಬಳಿಕ ಪ್ರತಾಪ್ ನಾರಾಯನ್ ಜೊತೆ ಸೇರಿ ಸುದೀಪ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಚೆನ್ನೈ ಕಿಂಗ್ಸ್ ತಂಡಕ್ಕೆ ನಿರಾಸೆ ಎದುರಾಗಿತ್ತು. ಸರಣಿಯಲ್ಲಿ ಲೀಗ್ ಹಂತದ 3 ಪಂದ್ಯಗಳನ್ನು ಗೆದ್ದು ಕಿಚ್ಚನ ಪಡೆ ಸೆಮಿಫೈನಲ್ ಹಂತಕ್ಕೆ ಬಂದಿತ್ತು. ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದು ಅದೃಷ್ಟ ಬಲದಿಂದ ಚೆನ್ನೈ ಕಿಂಗ್ಸ್ ತಂಡ ಸೆಮಿಫೈನಲ್ ಪ್ರವೇಶಿಸಿತ್ತು.


Click it and Unblock the Notifications











