ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಜುಲೈ 16ಕ್ಕೆ ಕಿಚ್ಚನ ಬುಲಾವ್...!
ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟನ ಸಿನಿಮಾ ಆರಂಭವಾದರೆ, ಆ ಚಿತ್ರದ ಸುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇನ್ನೂ ತಮ್ಮ ನೆಚ್ಚಿನ ನಾಯಕನ ಚಿತ್ರದ ಕುರಿತು ಪ್ರತಿಯೊಂದು ವಿಚಾರ ತಿಳಿದುಕೊಳ್ಳುವ ಆತುರ ಕಾತುರ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ.
ಹೀಗಾಗಿಯೇ ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ಕುರಿತು ಮಾಹಿತಿ ನೀಡುವಂತೆ ಸೂಪರ್ ಸ್ಟಾರ್ ಗಳಿಗೆ ದುಂಬಾಲು ಬೀಳ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ''ಮ್ಯಾಕ್ಸ್'' ಚಿತ್ರದ ವಿಚಾರದಲ್ಲಿ ಕೂಡ ಇಂಥಹದ್ದೇ ವಾತಾವರಣ ಇದೆ. ತಾನೇ ಖುದ್ದು ಮಾಹಿತಿ ನೀಡುವುದಾಗಿ ಹಿಂದೆ ಸುದೀಪ್ ಹೇಳಿದ್ದು ಇದೆ. ಅದರಂತೆ ಸುದೀಪ್ ಈಗ ತಮ್ಮ ಚಿತ್ರದ ಕುರಿತು ಮಾಹಿತಿಯನ್ನ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಹೌದು, ''ಮ್ಯಾಕ್ಸ್'' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಹಂಚಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ದಂಡೆತ್ತಿ ಹೋಗಲು ಸಿದ್ಧರಾಗಿ ಎಂಬ ಸಂದೇಶವನ್ನೂ ತಮ್ಮ ಸಮಸ್ತ ಭಕ್ತಗಣಕ್ಕೆ ಸುದೀಪ್ ನೀಡಿದ್ದಾರೆ. ಇನ್ನೂ.. ಸುದೀಪ್ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದೇ ತಡ, ಅನೇಕರು.. ಜುಲೈ 16ರಂದು ''ಮ್ಯಾಕ್ಸ್'' ಚಿತ್ರದ ಹೊಚ್ಚ ಹೊಸ ಟೀಸರ್ ಬಿಡುಗಡೆಯಾಗಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಲವರು ''ಮ್ಯಾಕ್ಸ್'' ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸುದೀಪ್ ಅವತ್ತು ಘೋಷಿಸಬಹುದು ಎನ್ನುತ್ತಿದ್ದಾರೆ. ಉಳಿದವರ ಪ್ರಕಾರ ಅವತ್ತು ಟೀಸರ್ ಕೂಡ ಬಿಡುಗಡೆಯಾಗಲಿದೆ. ಬಿಡುಗಡೆಯ ದಿನಾಂಕ ಕೂಡ ಗೊತ್ತಾಗಲಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ.. ಈಗಾಗಲೇ ಪುಟ್ಟೇನಹಳ್ಳಿಯಿಂದ ಗಾಂಧಿನಗರದವರೆಗೆ ಗುಲ್ಲಾದ ಸುದ್ದಿಯ ಪ್ರಕಾರ, ''ಮ್ಯಾಕ್ಸ್'' ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ. ಸ್ವಾತಂತ್ರೋತ್ಸವದ ಪ್ರಯುಕ್ತ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ.. ಆಗಸ್ಟ್ 09ರಂದು ಕರಿಚಿರತೆ ಸಲಗ ವಿಜಯ್ ಕುಮಾರ್ ನಿರ್ದೇಶನದ 'ಭೀಮ' ಕೂಡ ತೆರೆಗೆ ಬರಲಿದೆ. ಈ ಹಿನ್ನೆಲೆ ''ಮ್ಯಾಕ್ಸ್'' ಚಿತ್ರದ ಬಿಡುಗಡೆಯ ದಿನದ ಸುತ್ತ ಮುತ್ತ ಕುತೂಹಲ ಮನೆ ಮಾಡಿದೆ.

ಅಂದ್ಹಾಗೇ ಮ್ಯಾಕ್ಸ್ ನಲ್ಲಿ ಮ್ಯಾಕ್ಸಿಮಮ್ ಸಂಖ್ಯೆಯಲ್ಲಿ ಇರುವುದು ಕನ್ನಡಿಗರೇ. ಉದಾಹರಣೆಗೆ ಸುಕೃತಾ ವಾಗ್ಲೇ, ಸಂಯುಕ್ತ ಹೊರನಾಡು, ಉಗ್ರಂ ಮಂಜು. ಅನಿರುದ್ಧ್ ಭಟ್. ಇನ್ನೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.ಕಲಾ ನಿರ್ದೇಶಕ ಶಿವಕುಮಾರ್ ಅವರದ್ದಾದರೆ, ಶೇಖರ್ ಚಂದ್ರ ಚಿತ್ರವನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಉಳಿದಂತೆ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಇರುವ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ಕೂಡ ಇದ್ದಾರೆ. ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇನ್ನೂ 'ತುಪಾಕಿ'.. 'ಕಬಾಲಿ'.. 'ಅಸುರನ್'.. 'ಕರ್ಣನ್'.. 'ನಾರಪ್ಪ'.. ಹೀಗೆ ಒಂದಕ್ಕಿಂತ ಒಂದು ಚಿತ್ರಗಳನ್ನೂ ತಮಿಳಿನಲ್ಲಿ ನಿರ್ಮಾಣ ಮಾಡಿರುವ ಕಲಿಪುಲಿ ಎಸ್ ತನು ಈ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್ ನಡೆದಿರುವುದು ವಿಶೇಷ.


Click it and Unblock the Notifications











