Sudeep Birthday: ಮಧ್ಯರಾತ್ರಿಯಿಂದಲೇ ಕಳೆಕಟ್ಟಿದ ಕಿಚ್ಚೋತ್ಸವ: ಸುದೀಪ್‌ಗೆ ಪತ್ನಿ ಬಿಗ್ ಸರ್‌ಪ್ರೈಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಿನ್ನೆ(ಸೆಪ್ಟೆಂಬರ್ 1) ಸಂಜೆಯಿಂದಲೇ ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಕಿಚ್ಚೋತ್ಸವ ರಂಗೇರಿದೆ. ಮಧ್ಯರಾತ್ರಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಿಚ್ಚ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನು ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್‌ಪ್ರೈಸ್ ಗಿಫ್ಟ್ಸ್ ಸಿಕ್ಕಿದೆ.
ಪ್ರತಿವರ್ಷ ಸುದೀಪ್ ಜೆಪಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುವುದು ಬೇಡ ಎಂದು ನಿರ್ಧರಿಸಿ ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್‌ಗೆ ಸಂಭ್ರಮಾಚರಣೆ ಶಿಫ್ಟ್ ಆಗಿತ್ತು. ಸಂಜೆಯಿಂದಲೇ ಅಭಿಮಾನಿಗಳ ಗ್ರೌಂಡ್‌ನಲ್ಲಿ ಜಮಾಯಿಸಿದ್ದರು. ಕಿಚ್ಚ ಕಿಚ್ಚ ಎನ್ನುವ ಘೋಷಣೆ ಮುಗಿಲು ಮುಟ್ಟಿತ್ತು. ಇನ್ನು 11 ಗಂಟೆ ಸುಮಾರಿಗೆ ಸುದೀಪ್ ತಮ್ಮ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಜೊತೆ ವೇದಿಕೆಗೆ ಬಂದರು.

ಅಭಿಮಾನಿಗಳು ಸಾಲಾಗಿ ಬಂದು ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ವಿಶ್ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಬಳಿಕ 12 ಗಂಟೆ ಸುಮಾರಿಗೆ ಸುದೀಪ್ 50ನೇ ವರ್ಷದ ಹುಟ್ಟುಹಬ್ಬಕ್ಕೆ 50 ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಇನ್ನು ಪತ್ನಿ ಪ್ರಿಯಾ ಸುದೀಪ್ ಸರ್‌ಪ್ರೈಸ್ ಇದೆ ಎಂದು ಹೇಳಿದ್ದರು. ಅದರಿಂದ ಸ್ಪೆಷಲ್ ಡ್ರೋನ್ ಶೋ ಆಯೋಜಿಸಿದ್ದರು. ಕಿಚ್ಚನ ಭಾವಚಿತ್ರಗಳು ಡ್ರೋನ್ ಲೈಟ್‌ಗಳ ಸಹಾಯದಿಂದ ಆಗಸದಲ್ಲಿ ಚಿತ್ತಾರಗೊಂಡು ಅಭಿಮಾನಿಗಳನ್ನು ಪುಳಕಿತಗೊಳಿಸಿತು. ರಾತ್ರಿ 2 ಗಂಟೆಯವರೆಗೂ ಸುದೀಪ್ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದರು.
ಇಂದು(ಸೆಪ್ಟೆಂಬರ್ 2) ಬೆಳಗ್ಗೆ ಕೂಡ ಸುದೀಪ್ ತಮ್ಮ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಆಗಲಿದ್ದಾರೆ. ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲಿದ್ದಾರೆ. ಇನ್ನು ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸ್ಪೆಷಲ್ ಸರ್‌ಪ್ರೈಸ್‌ಗಳು ಕಾದಿತ್ತು. ಕಿಚ್ಚ46 ಚಿತ್ರದ ಟೈಟಲ್ ರಿವೀಲ್ ಆಗಿದೆ. ಸಣ್ಣ ಟೀಸರ್ ಜೊತೆಗೆ 'ಮ್ಯಾಕ್ಸ್' ಎಂದು ಸಿನಿಮಾ ಟೈಟಲ್ ಘೋಷಿಸಲಾಗಿದೆ. ತಮಿಳಿನ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ 'ಮ್ಯಾಕ್ಸ್' ಸಿನಿಮಾ ನಿರ್ಮಾಣವಾಗುತ್ತಿದೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಸುದೀಪ್ ಖಾಕಿ ಖದರ್ ತೋರಿಸುವುದಕ್ಕೆ ಬರ್ತಿದ್ದಾರೆ. ಸಂಯುಕ್ತ ಹೊರನಾಡ್, ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಜಬರ್ದಸ್ತ್ ಬರ್ತ್ ಡೇ ಟೀಸರ್ ಮೂಲಕ ಚಿತ್ರತಂಡ ಅಭಿಮಾನಿಗಳ ಮನಗೆದ್ದಿದೆ.
ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಆರ್. ಚಂದ್ರು ಜೊತೆ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡುತ್ತಿದ್ದಾರೆ. ಇತ್ತೀಚೆಗೆ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿದ 'ಕಬ್ಜ' ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹೀರೊ ಆಗಿ ಅಬ್ಬರಿಸೋಕೆ ಬರುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಶುರುವಾಗಲಿದೆ.

ಬಹಳ ದಿನಗಳಿಂದ ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುದೀಪ್ ಕಾಂಬಿನೇಷನ್ ಸಿನಿಮಾ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಸುದೀಪ್ ಹುಟ್ಟುಹಬ್ಬದ ಸಡಗರದಲ್ಲೇ ಆ ಸಿನಿಮಾ ಪಕ್ಕಾ ಆಗಿದೆ. ಸ್ವತಃ ಸುದೀಪ್ ಈ ಚಿತ್ರವನ್ನು ನಿರ್ದೇಶಿಸಿ ನಟಿಸಲಿದ್ದಾರೆ. ಕಾರ್ತಿಕ್ ಗೌಡ್ ಹಾಗೂ ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡೂ ಸಿನಿಮಾಗಳು ಪ್ರೇಕ್ಷಕರು ಮುಂದೆ ಬರಲಿದೆ.


Click it and Unblock the Notifications











