ಕೊನೆಗೂ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟ ಕಿಚ್ಚ; ಇನ್ನು ಕಾಯೋದು ಬೇಕಾಗಿಲ್ಲ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಆಗಿ ಭರ್ಜರಿ ಮನರಂಜನೆ ಉಣಬಡಿಸಿದ್ದರು. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಕರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾ ಸೀಕ್ವೆಲ್ ಮಾಡುವಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ಕೇಳುತ್ತಿದ್ದಾರೆ.
ನಟ ಸುದೀಪ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಆಗಿ ಎನ್ನುವ ಬೇಸರ ಕೆಲವರಲ್ಲಿದೆ. 'ವಿಕ್ರಾಂತ್ ರೋಣ' ಬಳಿಕ ಒಂದು ವರ್ಷ ಬಿಡುವು ಪಡೆದಿದ್ದರು. ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತೆರೆಗೆ ಬರೋದು ಕೊಂಚ ತಡವಾಗಿತ್ತು. ಮುಂದಿನ ಒಂದೂವರೆ ವರ್ಷದಲ್ಲಿ 2 ಸಿನಿಮಾ ಕೊಡ್ತೀನಿ ಎಂದು ಸುದೀಪ್ ಹೇಳಿದ್ದರು.

ಒಂದು ಸಿನಿಮಾ ಬಿಡುಗಡೆ ವೇಳೆಗೆ ಸ್ಟಾರ್ ನಟರು ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುವುದು ಸಹಜ. ಆದರೆ 'ಮ್ಯಾಕ್ಸ್' ಸಿನಿಮಾ ಬಂದೋಗಿ 3 ತಿಂಗಳು ಕಳೆದರೂ ಕಿಚ್ಚನ ಮುಂದಿನ ಸಿನಿಮಾ ಯಾವುದು? ಯಾವಾಗ ಶುರು? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಈ ಬಾರಿ ಸಿಸಿಎಲ್ ಟೂರ್ನಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಒಂದು ಟ್ವೀಟ್ ಮಾಡಿ 'ಬಿಲ್ಲ ರಂಗ ಬಾಷ' ಅಪ್‌ಡೇಟ್ ಕೊಟ್ಟಿದ್ದರು.
ಮಾರ್ಚ್ 2ನೇ ವಾರದಿಂದ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಆರಂಭ ಎಂದು ಬರೆದುಕೊಂಡಿದ್ದರು. ಆದರೆ ಮಾರ್ಚ್ ಮುಗಿದು ಏಪ್ರಿಲ್ ಬಂದರೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಇದೀಗ ದಿಢೀರನೆ ಟ್ವೀಟ್ ಮಾಡಿ ಕಿಚ್ಚ ಸರ್‌ಪ್ರೈಸ್ ಕೊಟ್ಟಿದ್ದಾರೆ.
'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಸುದೀಪ್ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಹುರಿಗಟ್ಟಿದ ತಮ್ಮ ದೇಹದ ಫೋಟೊಗಳನ್ನು ಹಂಚಿಕೊಂಡಿರುವ "ಕಿಚ್ಚ ಏಪ್ರಿಲ್ 16ರಂದು" ಎಂದು ಬರೆದು ಕುತೂಹಲ ಮೂಡಿಸಿದ್ದಾರೆ. ಅಂದರೆ ಅದೇ ದಿನದಂದು 'ಬಿಲ್ಲ ರಂಗ ಬಾಷ' ಸಿನಿಮಾ ಶುರುವಾಗುವುದು ಖಚಿತವಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಬಹಳ ಹಿಂದೆಯೇ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಬಳಿಕ ಸುದೀಪ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ನಡುವೆ ಅನೂಪ್ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಮುಗಿಸಿದ್ದರು. ಟೈಟಲ್‌ನಿಂದಲೇ 'ಬಿಲ್ಲ ರಂಗ ಬಾಷ' ಬಹಳ ಕುತೂಹಲ ಮೂಡಿಸಿದೆ. ಅಂದಹಾಗೆ ಚಿತ್ರದಲ್ಲಿ ಭವಿಷ್ಯದ ಕಾಲಘಟ್ಟದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸುವ ಪ್ರಯತ್ನ ನಡೀತಿದೆ.
180 ವರ್ಷಗಳ ಮುಂದಿನ ಕಥೆಯನ್ನು ಚಿತ್ರದಲ್ಲಿ ಹೇಳೋಕೆ ಹೊರಟಿದ್ದಾರೆ. ಇನ್ನು ಕಿಚ್ಚನ ಪಾತ್ರವೇ ಬಹಳ ವಿಭಿನ್ನವಾಗಿರಲಿದ್ದು ಅದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ದ್ವಿಪಾತ್ರ ಅಥವಾ ತ್ರಿಪಾತ್ರ ಮಾಡುತ್ತಾರಾ? ಕಾದು ನೋಡಬೇಕಿದೆ. ಸುದೀಪ್ ಟ್ವೀಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ದೊಡ್ಡಮಟ್ಟದಲ್ಲಿ ಬರಲಿ ಸಿನಿಮಾ, ಆದಷ್ಟು ಬೇಗ ಮಾಡಿ ಸರ್ ಎಂದು ಕಾಮೆಂಟ್ ಹಾಕಿದ್ದಾರೆ.
ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ನಿರಂಜನ್ ರೆಡ್ಡಿ 'ಬಿಲ್ಲ ರಂಗ ಬಾಷ' ಚಿತ್ರ ನಿರ್ಮಾಣವಾಗಲಿದೆ. ಈ ಹಿಂದೆ ಈ ಸಂಸ್ಥೆ ತೆಲುಗಿನ 'ಹನುಮಾನ್' ಚಿತ್ರವನ್ನು ನಿರ್ಮಿಸಿತ್ತು. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಬಿಲ್ಲ ರಂಗ ಬಾಷ' ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











