Sudeep: ರಾತ್ರಿ ಬರ್ತ್‌ಡೇ ಪಾರ್ಟಿ: ಬೆಳಗ್ಗೆ ಕಸರತ್ತು: ಸಿಕ್ಸ್‌ಪ್ಯಾಕ್ಸ್ ತೋರ್ಸಿ ಕಿಚ್ಚ ಏನಂದ್ರು?
ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಅಂದೇ ಕಿಚ್ಚ46 ಸಿನಿಮಾ ಟೀಸರ್, ಟೈಟಲ್ ರಿವೀಲ್ ಆಗಿದೆ. ಇನ್ನು 6 ವರ್ಷಗಳ ಬಳಿಕ ಸುದೀಪ್ ಹಾಗೂ ದರ್ಶನ್ ಒಂದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ನಿನ್ನೆ ರಾತ್ರಿ(ಆಗಸ್ಟ್ 26)ಯಷ್ಟೆ ಖಾಸಗಿ ಹೋಟೆಲ್‌ನಲ್ಲಿ ನಡೆಸ ಸಂಸದೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್- ದರ್ಶನ್ ಕಾಣಿಸಿಕೊಂಡಿದ್ದರು. 6 ವರ್ಷಗಳ ಹಿಂದೆ ದರ್ಶನ್ "ನಾನು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ" ರಂದು ಟ್ವೀಟ್ ಮಾಡಿದ್ದರು. ಬಳಿಕ ಇಬ್ಬರೂ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಸುಮಲತಾ ಅಂಬರೀಶ್ ಪಾರ್ಟಿಗೆ ಚಿತ್ರರಂಗದ ಆಪ್ತರನ್ನು ಆಹ್ವಾನಿಸಿದ್ದರು. ಸುದೀಪ್ ಹಾಗೂ ದರ್ಶನ್‌ಗೂ ಆಹ್ವಾನ ಇತ್ತು. ಇಬ್ಬರು ಅಂಬಿ ಕುಟುಂಬಕ್ಕೆ ಆಪ್ತರಾದ ಕಾರಣ ಆಮಂತ್ರಣಕ್ಕೆ ತಿರಸ್ಕರಿಸದೇ ಭಾಗಿ ಆಗಿದ್ದಾರೆ.

ದರ್ಶನ್ ಹಾಗೂ ಸುದೀಪ್ ಇಬ್ಬರನ್ನು ಒಟ್ಟಿಗೆ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಇಷ್ಟು ಹತ್ತಿರ ಆಗಿರುವವರು ಕೈ ಜೋಡಿಸುವ ಕಾಲ ದೂರ ಇಲ್ಲ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇನ್ನು ಇದೆಲ್ಲದರ ನಡುವೆ ಸುದೀಪ್ ಮತ್ತೆ ಸಿಕ್ಸ್‌ಪ್ಯಾಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕಿಚ್ಚ46 ಚಿತ್ರಕ್ಕಾಗಿ ಮತ್ತೆ ದೇಹ ದಂಡಿಸುತ್ತಿದ್ದಾರೆ. ಕಟ್ಟುಮಸ್ತಾದ ದೇಹ ಪ್ರದರ್ಶಿಸಿ ಸ್ಪೆಷಲ್ ಪೋಸ್ಟ್ ಮಾಡಿದ್ದಾರೆ. ದೇಹ ಹುರಿಗೊಳಿಸಿ ಸ್ನಾಯುಗಳನ್ನ ಬೆಳೆಸಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದೆ.
ರಾತ್ರಿಯಷ್ಟೇ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುದೀಪ್, ಬೆಳಗ್ಗೆ ಮತ್ತೆ ಜಿಮ್‌ನಲ್ಲಿ ಬೆವರಿಳಿಸಿದ್ದಾರೆ. ಸಿಕ್ಸ್‌ಪ್ಯಾಕ್ ಫೋಟೊಗಳನ್ನು ಶೇರ್ ಮಾಡಿ " ವರ್ಕೌಟ್ ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಈ ದಿನಚರಿ ನನ್ನನ್ನು ಶಾಂತವಾಗಿ ಮತ್ತು ಫೋಕಸ್ಡ್ ಆಗಿ ಇಡುತ್ತದೆ. "K46" ನ ಕ್ಲೈಮ್ಯಾಕ್ಸ್ ಫೈಟ್ ಸೀಕ್ವೆನ್ಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ.. ನನ್ನ ವರ್ಕೌಟ್ ಸ್ಟೇಷನ್‌ನಲ್ಲಿ ಮತ್ತಷ್ಟು ಸಾಧಿಸುವುದಿದೆ" ಎಂದು ಬರೆದುಕೊಂಡಿದ್ದಾರೆ.

ತಮಿಳುನಾಡಿದ 'ಮಹಾಬಲಿಪುರಂ' ಕಿಚ್ಚ46 ಸಿನಿಮಾ ಚಿತ್ರೀಕರಣ ನಡೀತಿದೆ. ಒಂದು ದೊಡ್ಡ ಶೆಡ್ಯೂಲ್ ಮುಗಿಸಿ ಬಂದಿರುವ ಕಿಚ್ಚ ಮುಂದಿನ ಶೆಡ್ಯೂಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.ತಮಿಳಿನ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ46 ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದ್ದು ಈಗಾಗಲೇ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನವಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿರುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ರಿವೀಲ್ ಆಗಲಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮತ್ತೆ ಕಿಚ್ಚ46 ಸೆಟ್‌ಗೆ ಎಂಟ್ರಿ ಕೊಡಲಿದ್ದಾರೆ.
ಪ್ರತಿಬಾರಿ ಸುದೀಪ್ ತಮ್ಮ ನಿವಾಸದಲ್ಲೇ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದರು. ಸಾವಿರಾರು ಅಭಿಮಾನಿಗಳು ಆ ದಿನ ಜೆಪಿ ನಗರದ ಮನೆ ಮುಂದೆ ಜಮಾಯಿಸುತ್ತಿದ್ದರು. ಇದರಿಂದ ಅಕ್ಕ ಪಕ್ಕ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂದು ಈ ಬಾರಿ ಹುಟ್ಟುಹಬ್ಬ ಆಚರಣೆ ಸ್ಥಳ ಬದಲಾಗಿದೆ. ಅಭಿಮಾನಿಗಳು ನೆಚ್ಚಿನ ನಟನನ್ನು ಒಪ್ಪಿಸಿ ನಂದಿ ಲಿಂಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೇ ಕಿಚ್ಚ ಅಭಿಮಾನಿಗಳನ್ನು ಭೇಟಿ ಆಗಲಿದ್ದಾರೆ.


Click it and Unblock the Notifications










