ಹಸೆಮಣೆ ಏರಿದ '777 ಚಾರ್ಲಿ' ಚಿತ್ರ ನಿರ್ದೇಶಕ ಕಿರಣ್ ರಾಜ್; ಯಾರೆಲ್ಲಾ ಭಾಗಿ ಆಗಿದ್ರು?
ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಶುಭ ಸಮಾರಂಭಗಳು ನಡೀತಿದೆ. ಇತ್ತೀಚೆಗೆ ಕಿರುತೆರೆ ನಟಿ ರಜಿನಿ ಹಸೆಮಣೆ ಏರಿದ್ದರು. 7 ವರ್ಷಗಳ ಕಾಲ ಪ್ರೀತಿಸಿದ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಕೈ ಹಿಡಿದಿದ್ದರು. ಇದೀಗ ಚಿತ್ರ ನಿರ್ದೇಶಕ ಕಿರಣ್ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'777 ಚಾರ್ಲಿ' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಕಿರಣ್ ರಾಜ್ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದಾರೆ. ಈ ನಡುವೆ ಹಸೆಮಣೆ ಏರಿದ್ದಾರೆ. ಅನಯಾ ವಸುಧಾ ಎಂಬುವವರ ಜೊತೆ ಕಿರಣ್ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 11 ತಿಂಗಳ ಹಿಂದೆ ಇಬ್ಬರ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇದೀಗ ಅದ್ಧೂರಿಯಾಗಿ ಜೋಡಿ ವಿವಾಹ ಬಂಧಕ್ಕೆ ಒಳಗಾಗಿದೆ.

ನಿನ್ನೆ(ಡಿಸೆಂಬರ್ 30) ಕಾಸರಗೋಡಿನ ನಾರಂಪಾಡಿ ದೇವಸ್ಥಾನದಲ್ಲಿ ಕಿರಣ್ ರಾಜ್ ಹಾಗೂ ಅನಯಾ ಕಲ್ಯಾಣೋತ್ಸವ ನೀಡಿತು. ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿ ಹಲವರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ಜೋಡಿಗೆ ಶುಭ ಕೋರಿದ್ದರು. ಅದಕ್ಕೆ ಸಂಬಂಧಿಸಿದ್ದ ಫೋಟೊಗಳು ವೈರಲ್ ಆಗ್ತಿದೆ. ಎರಡು ದಿನಗಳ ಹಿಂದೆ ಅರಿಶಿನ ಶಾಸ್ತ್ರದ ವೀಡಿಯೋವನ್ನು ಕಿರಣ್ ಹಂಚಿಕೊಂಡಿದ್ದರು. "ಅನಯಾ ಸಿಕ್ಕಿದ ಮೇಲೆ ನಾನು ಒಂದು ಸಂಸಾರ ಹೇಗಿರುತ್ತದೆ ಅಂತ ಚೆಕ್ ಮಾಡೋಣ ಎಂದು ನಿರ್ಧರಿಸಿದೆ" ಎಂದು ಆ ವೀಡಿಯೋದಲ್ಲಿ ಕಿರಣ್ ರಾಜ್ ಹೇಳಿದ್ದರು.
ನಿಶ್ಚಿತಾರ್ಥದ ಬೆನ್ನಲ್ಲೇ ಕಲರ್‌ಫುಲ್ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿ ಕಿರಣ್ ರಾಜ್ ಹಂಚಿಕೊಂಡಿದ್ದರು. '777 ಚಾರ್ಲಿ' ಬಿಟ್ಟರೆ ರಿಷಬ್ ಶೆಟ್ಟಿ ನಿರ್ಮಾಣದ 'ಕಥಾಸಂಗಮ' ಸಿನಿಮಾದಲ್ಲಿ ಒಂದು ಕಥೆಯನ್ನು ಕಿರಣ್ ರಾಜ್ ನಿರ್ದೇಶಿಸಿದ್ದರು. ಕಿರಣ್ ಹಾಗೂ ಅನಯಾ ವಸುಧಾ ಇಬ್ಬರೂ ಕೂಡ ಕಾಸರಗೋಡು ಮೂಲದವರು. ಆದರೆ ಅನಯಾ ಯುಕೆಯಲ್ಲಿ ನೆಲೆಸಿದ್ದು ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. ಮಕ್ಕಳಿಗೆ ಡ್ಯಾನ್ಸ್ ಕಲಿಸುತ್ತಾರೆ. ಕಳೆದ ವರ್ಷ ಆನಿಮೇಷನ್ ಕೋರ್ಸ್ ಮಾಡಲು ಕಿರಣ್ ಯುಕೆಗೆ ಹೋಗಿದ್ದರು. ಆಗ ಅನಯಾ ಪರಚಯವಾಗಿ ಅದು ಮದುವೆಗೆ ಬಂದು ನಿಂತಿದೆ.

ಇಬ್ಬರ ಆಲೋಚನೆ, ಹುಟ್ಟೂರು, ದೃಷ್ಟಿಕೋನ ಎಲ್ಲವೋ ಒಂದೇ ಆಗಿರುವುದು ಇಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದೆ. ಹೀಗೆ ಶುರುವಾದ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಸಿ ಇಬ್ಬರು ಮದುವೆಯಾಗಲು ಮನಸ್ಸು ಮಾಡಿದ್ದರು. ಪೋಷಕರ ಒಪ್ಪಿಗೆ ಪಡೆದು ಹುಟ್ಟೂರಿನಲ್ಲೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. '777 ಚಾರ್ಲಿ' ಬಳಿಕ ಕಿರಣ್ ರಾಜ್ ಯಾವುದೇ ಸಿನಿಮಾ ಕಟ್ಟಿಕೊಟ್ಟಿಲ್ಲ ಎನ್ನುವ ಬೇಸರ ಕೆಲವರದ್ದು. ಎರಡ್ಮೂರು ಕತೆಗಳನ್ನು ಅವರು ಸಿದ್ಧಪಡಿಸಿಕೊಂಡಿದ್ದು ಶೀಘ್ರದಲ್ಲೇ ಸಿನಿಮಾ ಘೋಷಿಸಲಿದ್ದಾರೆ.
ಧ್ರುವ ಸರ್ಜಾ ಜೊತೆಗೂ ಕಿರಣ್ ರಾಜ್ ಸಿನಿಮಾ ಮಾಡುತ್ತಾರೆ ಎನ್ನುವ ಗುಸು ಗುಸು ಕೇಳಿಬಂದಿತ್ತು. ಆದರೆ ಅದು ಸದ್ಯಕ್ಕೆ ನಿಜವಲ್ಲ. ಧ್ರುವ ಅವರನ್ನು ಒಮ್ಮೆ ಭೇಟಿ ಮಾಡಿದ್ದರು. ಅದೇ ಸ್ನೇಹದಿಂದ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಅದನ್ನು ನೋಡಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಒಂದು ವೇಳೆ ಅತಹ ಅವಕಾಶ ಸಿಕ್ಕರೆ ಖಂಡಿತ ಸಿನಿಮಾ ಮಾಡ್ತೀನಿ ಎಂದು ಕಿರಣ್ ರಾಜ್ ಈ ಹಿಂದೆ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಹೇಳಿದ್ದರು.
'777 ಚಾರ್ಲಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ಕೂಡ ಲಭಿಸಿತ್ತು. ನಾಯಿ ಹಾಗೂ ಮನುಷ್ಯನ ಭಾವನಾತ್ಮಕ ಸಂಬಂಧದ ಕಥೆ ಚಿತ್ರದಲ್ಲಿತ್ತು. ನಾಯಿ ಅಭಿನಯಿಸುವಂತೆ ಮಾಡಿ ಸಿನಿಮಾ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಕಿರಣ್ ಅಂಡ್ ಟೀಮ್ ಅದನ್ನು ಸಾಧಿಸಿತ್ತು. ವಿದ್ಯಾಭ್ಯಾಸದ ಬಳಿಕ ಕಿರಣ್ ರಾಜ್ ಬಾರ್ ಸಪ್ಲೆಯರ್, ವಾಚ್‌ಮನ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿದ್ದರು. ಬಳಿಕ ಚಿತ್ರರಂಗದತ್ತ ಮುಖ ಮಾಡಿ ಚಿತ್ರ ನಿರ್ದೇಶಕರಾಗಿದ್ದರು.


Click it and Unblock the Notifications











