ಕೆಂಪೇಗೌಡರ ಬಯೋಪಿಕ್ ಸಿನಿಮಾ ಏನಾಯ್ತು? ಎಲ್ಲಿಗೆ ಬಂತು ಕಾನೂನು ಹೋರಾಟ?
ಇಂದು(ಜೂನ್ 27) ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ ಹಾಗೂ ಬಿಬಿಎಂಪಿ ಸೇರಿದಂತೆ ಹಲವು ಸಂಘಸಂಸ್ಥೆಗಳು ಕೆಂಪೇಗೌಡ ಜಯಂತಿ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ. ಕೆಂಪೇಗೌಡರ ಜೀವನವನ್ನಾಧರಿಸಿ ಕನ್ನಡದಲ್ಲಿ ಎರಡು ಸಿನಿಮಾ ನಿರ್ಮಾಣ ಪ್ರಯತ್ನ ನಡೀತಿದೆ.
ದಿನೇಶ್ ಬಾಬು ನಿರ್ದೇಶನದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಎಂಬ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಕೆಂಪೇಗೌಡರ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುವ ಸಾಧ್ಯತೆಯಿದೆ.

ಮತ್ತೊಂದು ಕಡೆ ಟಿ. ಎಸ್ ನಾಗಾಭರಣ ಕೂಡ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಧನಂಜಯ ಈ ಚಿತ್ರದಲ್ಲಿ 'ನಾಡಪ್ರಭು ಕೆಂಪೇಗೌಡ'ರ ಪಾತ್ರವನ್ನು ನಿಭಾಯಿಸಲಿದ್ದಾರೆ. ಒಂದೇ ಕತೆಯನ್ನು ಆಧರಿಸಿ ಎರಡು ಸಿನಿಮಾಗಳು ನಿರ್ಮಾಣವಾಗುತ್ತಿರುವುದು ವಿಶೇಷ. ಇದೇ ಕಾರಣಕ್ಕೆ ವಿವಾದ ಕೂಡ ಶುರುವಾಗಿದೆ.
'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ವಿರುದ್ಧ ನಾಗಾಭರಣ ಕೋರ್ಟ್ ಮೆಟ್ಟಿಲೇರಿದ್ದರು. ಸಿನಿಮಾ ನಿಲ್ಲಿಸುವಂತೆ ಆಗ್ರಹಿಸಿದ್ದರು. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದರು. 'ಕೆಂಪೇಗೌಡ' ಟೈಟಲ್ ಬೇರೆ ಯಾರು ಬಳಸಬಾರದು ಎಂದು ಟಿ. ಎಸ್ ನಾಗಾಭರಣ ಮನವಿ ಮಾಡಿದ್ದರು. ಆದರೆ ಕೋರ್ಟ್‌ನಲ್ಲಿ ಅವರಿಗೆ ಹಿನ್ನಡೆಯಾಗಿತ್ತು.
ಒಂದು ತಿಂಗಳ ಕಾನೂನು ಹೋರಾಟದ ಬಳಿಕ ನಿರ್ಮಾಪಕ ಕಿರಣ್ ತೋಟಂಬೈಲುಗೆ ಜಯ ಸಿಕ್ಕಿತ್ತು. 'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಟೈಟಲ್ ಅನ್ನು ಅವರು ಬಳಸಬಹುದು ಎಂದು ಕೋರ್ಟ್ ಆದೇಶ ನೀಡಿತ್ತು. ಟಿ. ಎಸ್ ನಾಗಾಭರಣ ಒಂದಲ್ಲ ಎರಡಲ್ಲ ಮೂರು ದೂರು ದಾಖಲಿಸಿದ್ದರು. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಾಗಾಭರಣ ನೀಡಿದ್ದ ದೂರಿನ ವಿಚಾರಣೆ ಎಲ್ಲಿಗೆ ಬಂತು? 'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಯಾವಾಗ ಶುರು? ಎನ್ನುವ ಬಗ್ಗೆ ಕೆಂಪೇಗೌಡರ ಜಯಂತಿ ದಿನ ಕಿರಣ್ ತೋಟಂಬೈಲ್ ಮಾತನಾಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಹೋರಾಟದಲ್ಲಿ ನಮಗೆ ಸಂಪೂರ್ಣವಾಗಿ ಗೆಲುವು ಸಿಗುತ್ತದೆ. ಜನವರಿ 15ರಂದು ನಮ್ಮ ಸಿನಿಮಾ ಸೆಟ್ಟೇರುತ್ತದೆ ಎಂದು ಅವರು ಹೇಳಿದ್ದಾರೆ.

"ಜನವರಿ 15ಕ್ಕೆ 'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಶುರುವಾಗುತ್ತದೆ. ಅಷ್ಟರಲ್ಲಿ ಕಾನೂನು ಹೋರಾಟ ಮುಗಿಯುತ್ತದೆ. ಈಗಾಗಲೇ ಸಿವಿಲ್ ಕೋರ್ಟ್ ಹಾಗೂ ಫಿಲ್ಮ್ ಚೇಂಬರ್‌ನಲ್ಲಿ ನಾವು ಗೆದ್ದಿದ್ದೇವೆ. ಈಗ ಹೈಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿ ಕೂಡ ನಮಗೆ ಗೆಲುವು ಸಿಗುವ ವಿಶ್ವಾಸ ಇದೆ. 2026ರ ಜನವರಿಯಲ್ಲಿ ಸಿನಿಮಾ ಸೆಟ್ಟೇರಿದರೆ 2027ರ ಜನವರಿ ಜನವರಿ 15ಕ್ಕೆ ಸಿನಿಮಾ ತೆರೆಗೆ ಬರಬಹುದು" ಎಂದು ಕಿರಣ್ ತೋಟಂಬೈಲ್ ಮಾಹಿತಿ ನೀಡಿದ್ದಾರೆ.
"ನಾಗಾಭರಣ ಅವರು ಮೂರು ದೂರುಗಳನ್ನು ನೀಡಿದ್ದಾರೆ. ಟೈಟಲ್ ಬಗ್ಗೆ ಒಂದು ದೂರು ಕೊಟ್ಟಿದ್ದಾರೆ, ನಮ್ಮ ಕಡೆಗೆ ಆಗಿದೆ. ಕಾಪಿರೈಟ್ಸ್ ಬರಲ್ಲ ಎಂದು ಕೋರ್ಟ್ ಹೇಳಿದೆ. ಧರ್ಮೇಂದ್ರ ಪ್ರಧಾನ್ ನಮ್ಮ ಬಳಿ ಬಂದು ಕಥೆ ಹೇಳಿದ್ದಾರೆ. ಅದನ್ನೇ ಸಿನಿಮಾ ಮಾಡ್ತಿದ್ದೀವಿ ಎಂದು ಮತ್ತೊಂದು ದೂರು. ಎರಡೂ ಸ್ಕ್ರಿಪ್ಟ್ ನೋಡಿ ಒಂದಕ್ಕೊಂದು ಸಂಬಂಧವಿಲ್ಲ ಎಂದು ಕೋರ್ಟ್ ಹೇಳಿದೆ. ಎರಡೂ ಸ್ಕ್ರೀನ್‌ಪ್ಲೇಗಳಿಗೆ ಬಹಳ ವ್ಯತ್ಯಾಸ ಇದೆ ಸಾಬೀತಾಗಿದೆ. 10 ವರ್ಷಗಳಿಂದ ಈ ಚಿತ್ರಕಥೆಗೆ 20 ಲಕ್ಷ ರೂ. ಖರ್ಚು ಮಾಡಿದ್ದೇವೆ ಎಂದು ಮತ್ತೊಂದು ದೂರು ಕೊಟ್ಟಿದ್ದಾರೆ. ಅದಕ್ಕೆ ಕೋರ್ಟ್ ಆಧಾರ ಕೇಳಿದೆ. ಕೆಳ ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೋ ಅದೇ ಮೇಲಿನ ಕೋರ್ಟ್‌ನಲ್ಲಿ ಕೂಡ ಬರುತ್ತದೆ. ಅದೇ ವಿಶ್ವಾಸದಲ್ಲಿದ್ದೀವಿ" ಎಂದು ತಿಳಿಸಿದ್ದಾರೆ.
'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಚಿತ್ರದಲ್ಲಿ ನಟಿಸೋಕೆ ಉಪೇಂದ್ರ ಒಪ್ಪಿದ್ದಾರೆ. ಫ್ರೀ ಕಾಲ್‌ಶೀಟ್ ಕೊಟ್ಟಿದ್ದಾರೆ. ಅಂದ್ರೆ ಎಷ್ಟು ದಿನ ಬೇಕಾದರೂ ಚಿತ್ರೀಕರಣ ಮಾಡಿ ಎಂದಿದ್ದಾರೆ. ಕೃಷ್ಣದೇವರಾಯರ ಪಾತ್ರದಲ್ಲಿ ಅರ್ಜುನ್ ಸರ್ಜಾ ನಟಿಸಲಿದ್ದಾರೆ. ಇನ್ನು ಶ್ರೀನಗರ ಕಿಟ್ಟಿ, ಭಾರತೀ ವಿಷ್ಣುವರ್ಧನ್ ಕೂಡ ತಾರಾಗಣದಲ್ಲಿದ್ದಾರೆ ಎಂದು ಕಿರಣ್ ತೋಟಂಬೈಲ್ ವಿವರಿಸಿದ್ದಾರೆ. ಅಣ್ಣಾವ್ರ ಕಾಲದಿಂದಲೂ ನಾಡಪ್ರಭು ಕೆಂಪೇಗೌಡರ ಬಯೋಪಿಕ್ ಮಾಡುವ ಪ್ರಯತ್ನ ನಡೀತಿದೆ.
ಡಾ. ರಾಜ್‌ಕುಮಾರ್ ಕೂಡ ಕೆಂಪೇಗೌಡರ ಪಾತ್ರದಲ್ಲಿ ನಟಿಸಲು ಬಯಸಿದ್ದರು. ಆದರೆ ಆಗ ನಿರ್ಮಾಪಕರು, ನಿರ್ದೇಶಕರು ಇಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ಹಾಗಾಗಿ ಅಣ್ಣಾವ್ರ ಆಸೆ ಈಡೇರಲೇ ಇಲ್ಲ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯ ಯಲಹಂಕ ನಾಡಿನ ಪಾಳೇಗಾರರಾಗಿದ್ದರು ಕೆಂಪೇಗೌಡ. ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ. ಪ್ರಪಂಚದ ಪ್ರಮುಖ ನಗರಗಳಲ್ಲಿ ನಮ್ಮ ಬೆಂಗಳೂರು ಕೂಡ ಒಂದು.
ಬಹಳ ಹಿಂದೆಯೇ ಕೆಂಪೇಗೌಡರ ಬಯೋಪಿಕ್ ಮಾಡಲು ನಾಗಾಭರಣ ಮನಸ್ಸು ಮಾಡಿದ್ದರು. ಯುವ ರಾಜ್‌ಕುಮಾರ್ ಹೀರೊ ಆಗಿ ಸಿನಿಮಾ ಬರುತ್ತದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ನಾಗಾಭರಣ ಹೇಳಿದ್ದರು. ಜಾನಪದ, ಐತಿಹಾಸಿಕ ಕಥಾಹಂದರದ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಅವರು ಸಿದ್ಧಹಸ್ತರು. ಹಾಗಾಗಿ ಅವರ ನಿರ್ದೇಶನದಲ್ಲಿ ಕೆಂಪೇಗೌಡರ ಬಯೋಪಿಕ್ ಕುತೂಹಲ ಮೂಡಿಸಿತ್ತು. ಅಷ್ಟರಲ್ಲೇ ಕಿರಣ್ ತೋಟಂಬೈಲ್ 'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಎಂಬ ಸಿನಿಮಾ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು.
ಒಂದೇ ಸಮಯದಲ್ಲಿ ಒಂದೇ ಕಥೆ ಆಧರಿಸಿ ಎರಡು ಸಿನಿಮಾಗಳನ್ನು ಮಾಡುವ ಪ್ರಯತ್ನ ಈ ಹಿಂದೆ ಕೂಡ ನಡೆದಿದೆ. ಕನ್ನಡದಲ್ಲಿ ಕೆಂಪೇಗೌಡರ ಜೀವನಾಧರಿತ ಸಿನಿಮಾ ಇದೀಗ ಕುತೂಹಲ ಮೂಡಿಸಿದೆ. ನಾಗಾಭರಣ ಬಹಳ ನೈಜವಾಗಿ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದು ದಿನೇಶ್ ಬಾಬು ಅದೇ ಕಥೆಗೆ ಕೊಂಚ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಹೇಳುವ ಸಾಹಸ ಮಾಡುತ್ತಿದ್ದಾರೆ. ಧನಂಜಯ್ ನಟನೆಯ ಸಿನಿಮಾ ಕನ್ನಡದಲ್ಲಿ ಮಾತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಆದರೆ ಕಿರಣ್ ತಮ್ಮ ಚಿತ್ರವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರೇಕ್ಷಕರ ಮುಂದಿಡುವ ಕನಸು ಕಾಣುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಈಗಾಗಲೇ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.
'ಧರ್ಮಬೀರು ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಖ್ಯಾತ ಇತಿಹಾಸಕಾರ ಅರೇನಹಳ್ಳಿ ಧರ್ಮೇಂದ್ರ ಕುಮಾರ್ ಚಿತ್ರಕಥೆ ಒದಗಿಸಿದ್ದಾರೆ. ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಕಿರಣ್ ತೋಟಂಬೈಲ್ ತಾವೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಘು ನಿಡುವಳ್ಳಿ ಹಾಗೂ ಮಾಸ್ತಿ ಅವರ ಬಳಿ ಚಿತ್ರಕ್ಕೆ ಸಂಭಾಷಣೆ ಬರೆಸುವ ಬಗ್ಗೆ ಚರ್ಚೆ ನಡೀತಿದೆ. ಸಂಕೇತ್ ಛಾಯಾಗ್ರಹಣ ಹಾಗೂ ಉಜ್ವಲ್ ಕುಲಕರ್ಣಿ ಸಂಕಲನ ಜವಾವ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಒದಗಿಸಲಿದ್ದಾರೆ.
ಅಂತೂ ಇಂತೂ ಕೆಂಪೇಗೌಡರ ಜೀವನದ ಕತೆ ಸಿನಿಮಾ ಆಗುತ್ತಿರುವುದು ಕನ್ನಡ ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ. ಆದರೆ ಮಹಾನ್ ನಾಯಕನ ಕುರಿತಾದ ಸಿನಿಮಾ ಸೆಟ್ಟೇರುವ ಮುನ್ನ ವಿವಾದ ಸೃಷ್ಟಿಸಿಕೊಂಡಿರುವುದು ಬೇಸರ ತಂದಿದೆ. ಎಲ್ಲವನ್ನು ಮೀರಿ ಯಾವ ಸಿನಿಮಾ ಮೊದಲು ತೆರೆಗೆ ಬರುತ್ತದೆ ಎಂದು ಕಾದು ನೋಡಬೇಕಿದೆ. ಅಥವಾ ಯಾವುದಾದರೂ ಒಂದು ಸಿನಿಮಾ ನಿಂತು ಹೋಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











