KMF Award To Puneeth Rajkumar: ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ 'ಸಹಕಾರ ರತ್ನ' ಪ್ರಶಸ್ತಿ
ಬದುಕಿದ್ದಾಗ ಪ್ರಶಸ್ತಿ, ಗೌರವಗಳಿಂದ ದೂರವೇ ಉಳಿದಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಈಗ ಪ್ರಶಸ್ತಿಗಳು, ಗೌರವಗಳು, ಹೊಸ ಹೊಸ ಬಿರುದುಗಳು ಹುಡುಕಿಕೊಂಡು ಬರುತ್ತಿವೆ.
ಪುನೀತ್ ಕಾಲಾನಂತರ ರಾಜ್ಯ ಸರ್ಕಾರವು ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿದೆ. ಕರ್ನಾಟಕ ಸರ್ಕಾರ ನೀಡಲಾಗುವ ಮಹೋನ್ನತ ಗೌರವ ಇದು. ಇದು ಮಾತ್ರವೇ ಅಲ್ಲದೆ ಇನ್ನೂ ಹಲವು ಪ್ರಶಸ್ತಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ.
ಇದೀಗ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್) ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ 'ಸಹಕಾರ ರತ್ನ' ಪ್ರಶಸ್ತಿ ನೀಡುವುದಾಗಿ ಹೇಳಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಚಿವ ಸೋಮಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ''ಪುನೀತ್ ರಾಜ್‌ಕುಮಾರ್ ಅವರು ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ಅಂತೆಯೇ ಕೆಎಂಎಫ್‌ಗೂ ರಾಯಭಾರಿಯಾಗಿ ಉಚಿತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಣಯ ತೆಗೆದುಕೊಂಡಿದ್ದೇವೆ'' ಎಂದಿದ್ದಾರೆ.
''ಸಹಕಾರ ಮಹಾ ಮಂಡಳಿ ಅಧ್ಯಕ್ಷ ಜಿಟಿ ದೇವೇಗೌಡ ಹಾಗೂ ಇನ್ನಿತರೆ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದಾರೆ. ನಾನು, ಜಿಟಿ ದೇವೇಗೌಡರು ಇನ್ನಿತರೆ ಅಧಿಕಾರಿಗಳು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಅವರಿಗೆ ಮರಣೋತ್ತರ 'ಸಹಕಾರ ರತ್ನ' ಪ್ರಶಸ್ತಿ ಪ್ರಧಾನ ಮಾಡುತ್ತೇವೆ'' ಎಂದಿದ್ದಾರೆ ಸಚಿವ ಸೋಮಶೇಖರ್. ಮಾರ್ಚ್ 20 ರಂದು ಸಹಕಾರ ರತ್ನ ಪ್ರಶಸ್ತಿ ವಿತರಣೆಯನ್ನು ಸಿಎಂ ಅವರು ಮಾಡಲಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರವು ರಾಜ್ಯದ ಅತ್ಯುನ್ನತ ನಾಗರೀಕ ಪ್ರಶಸ್ತಿ 'ಕರ್ನಾಟಕ ರತ್ನ'ವನ್ನು ಘೋಷಿಸಿದೆ. ಪ್ರಶಸ್ತಿ ವಿತರಣೆ ಸಮಾರಂಭವನ್ನು ಶೀಘ್ರದಲ್ಲಿಯೇ ಘೋಷಿಸುವುದಾಗಿ ಹೇಳಿದೆ.
ಇದರ ನಡುವೆ ಕೆಲವು ದಿನಗಳ ಹಿಂದಷ್ಟೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಡಾ ರಾಜ್‌ಕುಮಾರ್ ಅವರಿಗೂ ಇದೇ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತ್ತು. ಈಗ ಪುನೀತ್ ರಾಜ್‌ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗಿದೆ.
ಇದು ಮಾತ್ರವೇ ಅಲ್ಲದೆ ಹಲವು ಸೇವಾ ಸಂಘಗಳು, ಮಠಗಳು ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರಧಾನ ಮಾಡಿವೆ. ಈ ವರ್ಷದ ಬಸವಶ್ರೀ ಪ್ರಶಸ್ತಿಯನ್ನೂ ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಯಿತು.


Click it and Unblock the Notifications











