»   » ಮಂಡಿಯ ನೋವು ಎಲ್ಲಿಯ ತನಕ ?

ಮಂಡಿಯ ನೋವು ಎಲ್ಲಿಯ ತನಕ ?

Posted By: Staff
Subscribe to Filmibeat Kannada

ಬೆಂಗಳೂರು : ಶಸ್ತ್ರ ಚಿಕಿತ್ಸೆಗೆ ಜಪ್ಪಯ್ಯ ಎಂದರೂ ಒಪ್ಪದ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರ ಮಂಡಿ ನೋವು ಇವತ್ತು ಎಷ್ಟಿದೆ ? ದಿನೇ ದಿನೇ ಉಲ್ಬಣವಾಗುತ್ತಿದ್ದು , ನಡೆದಾಡುವುದೂ ಕಷ್ಟವಾಗಿದೆ ಎನ್ನುತ್ತಿದ್ದಾರೆ ವರನಟನನ್ನು ಹತ್ತಿರದಿಂದ ನೋಡಿದವರು.

ನೋವು ನಿವಾರಣೆ ಮಾಡಿಸಲೇ ಬೇಕು ಎಂದು ಹಠ ತೊಟ್ಟಿರುವ ಕುಟುಂಬ ವರ್ಗದ ಮೂಲಗಳ ಪ್ರಕಾರ , ರಾಜ್‌ಕುಮಾರ್‌ ಅವರನ್ನು ಕೃತಕ ಮಂಡಿಚಿಪ್ಪಿನ ಜೋಡಣೆ ಶಸ್ತ್ರಚಿಕಿತ್ಸೆಗಾಗಿ ನಗರದ ಸುಪ್ರಸಿದ್ಧ ಆಸ್ಪತ್ರೆ ಸೇರಿಸಲು ತಯ್ಯಾರಿ ನಡೆಯುತ್ತಿದೆ.

ತೀವ್ರ ನೋವಿನಿಂದ ಬಳಲುತ್ತಿರುವ ರಾಜ್‌ಕುಮಾರ್‌ ಅವರ ಎರಡೂ ಮಂಡಿಗಳಿಗೆ ಶಸ್ತ್ರಚಿಕಿತ್ಸೆ ಮಾಡದೆ ವಿಧಿಯೇ ಇಲ್ಲ ಎನ್ನುವುದು ಅವರ ವೈದ್ಯರ ಅನಿಸಿಕೆ. ಶಸ್ತ್ರಚಿಕಿತ್ಸೆಯ ಬಳಿಕ ನೀವು ಮಾಮೂಲಿನಂತಾಗುತ್ತೀರಿ ಎಂದು ವೈದ್ಯರು ಹೇಳಿದರೂ ಡಾ. ರಾಜ್‌ ಒಪ್ಪಲು ಸಿದ್ಧರಿಲ್ಲ. ಈ ವಿಷಯದಲ್ಲಿ ಅವರು ಜಗಮೊಂಡ.


ರಾಜ್‌ಕುಮಾರ್‌ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಪ್ರಕಾರ, ಈ ಹೊತ್ತು ರಾಜ್‌ಕುಮಾರ್‌ಗೆ ಮಂಡಿನೋವು ತುಂಬಾ ಹೆಚ್ಚಾಗಿದೆ. ನಡೆದಾಡಲೂ ರಾಜ್‌ ಪರದಾಡುತ್ತಿದ್ದಾರೆ. ಇಷ್ಟಾದರೂ ರಾಜ್‌ಗೆ ನ್ಯಾಚುರೋಪತಿ ಮೇಲೆ ಹೆಚ್ಚಿನ ವಿಶ್ವಾಸ. ಈಗಾಗಲೇ ಮೈಸೂರಿನಲ್ಲಿ ಎರಡು ತಿಂಗಳಿಗೂ ಹೆಚ್ಚುಕಾಲ ಚಿಕಿತ್ಸೆ ಪಡೆದಿದ್ದರೂ ಏನೂ ಪ್ರಯೋಜನ ಆಗಿಲ್ಲ.

  ಹಲವು ವರ್ಷಗಳಿಂದ ಕ್ರಾನಿಕ್‌ ಆರ್ಥೈಟಿಸ್‌ ತೊಂದರೆಯಿಂದ ಬಳಲುತ್ತಿದ್ದ ರಾಜ್‌ಕುಮಾರ್‌ಗೆ ಮಂಡಿನೋವು ಹೆಚ್ಚಾದದ್ದು, ವೀರಪ್ಪನ್‌ ಅಪಹರಣಾನಂತರ. 108 ದಿನಗಳ ವನವಾಸದಿಂದ ಮರಳಿದ ತರುವಾಯ ರಾಜ್‌ ಮಂಡಿನೋವಿಗಾಗಿ ಹಲವು ಬಗೆಯ ವೈದ್ಯೋಪಚಾರಕ್ಕೆ ಒಳಗಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ನಾವು ಮನೆಯವರೆಲ್ಲಾ ಸೇರಿ ಅಪ್ಪಾಜಿ ಮನವೊಲಿಸುವ ಪ್ರಯತ್ನ ಮಾಡ್ತಿದ್ದೀವಿ ಆದರೆ, ಅವರು ಒಪ್ಪುತ್ತಿಲ್ಲ. ನಾವು ಡಿಸೆಂಬರ್‌ ತಿಂಗಳ ಕೊನೆತನಕ ಕಾಯ್ತೀವಿ. ಅಪ್ಪಾಜಿ ಮಂಡಿ ನೋವು ಕಮ್ಮಿ ಆಗ್ದೇ ಇದ್ರೆ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸ್ತೀವಿ ಅಂತಾರೆ ರಾಘವೇಂದ್ರ ರಾಜ್‌.

ಧೈರ್ಯ ತುಂಬಲು ಹರಸಾಹಸ: ಅಪ್ಪಾಜಿಗೆ ಆಪರೇಷನ್‌ ಅಂದ್ರೇ ಭಯ. ನಾವು ಈಗಾಗಲೇ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರೋ ಯಾರನ್ನಾದರೂ ಅಪ್ಪಾಜಿ ಬಳಿಗೆ ಕರೆತಂದು ತೋರಿಸಿ, ಒಪ್ಪಿಸಬೇಕು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರೋರು ಅಪ್ಪಾಜಿಗೆ ಧೈರ್ಯ ಹೇಳಿದ್ರೆ ಅವರು ಒಪ್ಪಬಹುದು ಎಂಬ ಆಶಾಭಾವನೆಯನ್ನು ರಾಘವೇಂದ್ರ ರಾಜ್‌ ವ್ಯಕ್ತಪಡಿಸಿದ್ದಾರೆ.

ನಮ್ಮ ಅನ್ನಿಸಿಕೆ ಎಂದರೆ ವಯೋಮಾನದಲ್ಲಿ ರಾಜ್‌ ಅವರಿಗಿಂತ ಹಿರಿಯರಾದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮೇಲೆ ರಾಜ್‌ ಏಕೆ ಹಿಂಜರಿಯಬೇಕು ? ಚಿಕಿತ್ಸೆ, ಆಸ್ಪತ್ರೆ, ದಾದಿಯರು, ಇಂಜೆಕ್ಷನ್‌ ಅಂದರೆ ಭಯ ಪಡುವುದು ಅರ್ಥವಾಗತಕ್ಕದ್ದೇ. ಆದರೆ ಮಂಡಿನೋವು ಅನುಭವಿಸುವುದಕ್ಕಿಂತ ಇದೆಷ್ಟೋ ವಾಸಿ. ಅಂದಹಾಗೆ ರಾಜ್‌ ಅವರ ಮಕ್ಕಳು ಖ್ಯಾತ ವೈದ್ಯ ಚಿತ್ತರಂಜನ್‌ ರಣಾವತ್‌ ಅವರ ನೆರವು ಪಡೆಯಬಾರದೇ ? ನೋವು ವಾಸಿಯಾಗಲಿ. ನಮ್ಮ ರಾಜ್‌ ಭಕ್ತ ಅಂಬರೀಶನಾಗಿ ನಮ್ಮ ಮುಂದೆ ಕಾಣಿಸಿಕೊಳ್ಳಲಿ

English summary
Dr. Rajkumar is child like, says no for hospital, knee surjery

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada