CCL 2023: 18 ಎಸೆತಕ್ಕೆ 57 ರನ್ ಚಚ್ಚಿ ಚೆನ್ನೈ ಸೋಲುವಂತೆ ಮಾಡಿದ ಈ ಅರುಣ್ ಬಚ್ಚನ್ ಯಾರು?

ಪ್ರಸ್ತುತ ನಡೆಯುತ್ತಿರುವ ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಲೀಗ್ ಹಂತ ಮುಗಿಯುವ ಸಮೀಪಕ್ಕೆ ಬರುತ್ತಿದ್ದು, ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಕಣಕ್ಕಿಳಿದಿರುವ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಟ್ಟು ಎಂಟು ತಂಡಗಳು ಕಣಕ್ಕಿಳಿದಿದ್ದು, ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಭಾಗವಹಿಸುತ್ತಿವೆ. ಈ ಪೈಕಿ ಹೆಚ್ಚಿನ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಟಾಪ್ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.
ಇನ್ನು ನಿನ್ನೆ ( ಮಾರ್ಚ್ 4 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಬಾರಿಯ ಸಿಸಿಎಲ್ ಟೂರ್ನಿಯ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ ಅರ್ಧಶತಕದ ನೆರವಿನಿಂದ ಯಾವುದೇ ವಿಕೆಟ್ ಕಳೆದುಕೊಳ್ಳದೇ 109 ರನ್ ಕಲೆಹಾಕಿ 24 ರನ್‌ಗಳ ಮುನ್ನಡೆ ಸಾಧಿಸಿತು. ಪುನಃ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಚೆನ್ನೈ ರೈನೊಸ್ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 102 ರನ್‌ಗಳ ಗುರಿಯನ್ನು ನೀಡಿತು.
ಈ ಪೈಪೋಟಿಯುತ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ವೇಗವಾಗಿ ರಾಜೀವ್ ( 5 ) ಹಾಗೂ ಸುದೀಪ್ ( 2 ) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಮೂರನೇ ವಿಕೆಟ್‌ಗೆ ಜತೆಯಾದ ಜಯರಾಮ್ ಕಾರ್ತಿಕ್ ಹಾಗೂ ಅರುಣ್ ಬಚ್ಚನ್ ತಂಡಕ್ಕೆ ಆಸರೆಯಾದರು. ಜಯರಾಮ್ ಕಾರ್ತಿಕ್ 34 ರನ್ ಬಾರಿಸಿದರೆ ಅರುಣ್ ಬಚ್ಚನ್ 18 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚಿದರು. ಅರುಣ್ ಬಚ್ಚನ್ ಅವರ ಈ ಅಬ್ಬರದ ಇನ್ನಿಂಗ್ಸ್ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಒಳಗೊಂಡಿದೆ. ಅರುಣ್ ಬಚ್ಚನ್ 16 ಎಸೆತಗಳಲ್ಲಿ 52 ರನ್ ಕಲೆಹಾಕಿ ಅರ್ಧಶತಕ ಬಾರಿಸಿ ಆರಂಭಿಕ ಆಘಾತ ಕಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಗೆಲುವಿಗೆ ಪ್ರಮುಖ ಕಾರಣರಾದರು.
ಹೀಗೆ ಸಂಕಷ್ಟದ ಸಮಯದಲ್ಲಿ ಆಪದ್ಭಾಂದವನಾಗಿ ಕೈಹಿಡಿದ ಈ ಅರುಣ್ ಬಚ್ಚನ್ ಎಲ್ಲರ ಗಮನ ಸೆಳೆದಿದ್ದಾರೆ. ಅರುಣ್ ಬಚ್ಚನ್ ಯಾರೆಂದು ಸಿನಿ ರಸಿಕರು ಹುಡುಕಲು ಆರಂಭಿಸಿದ್ದಾರೆ. ಅಂದಹಾಗೆ ಅರುಣ್ ಬಚ್ಚನ್ ಥಿಯೇಟರ್ ಬ್ಯಾಕ್‌ಗ್ರೌಂಡ್ ಇರುವ ಪ್ರತಿಭಾವಂತ ಕಲಾವಿದ. ದಂಡುಪಾಳ್ಯ 4, ನಭಾ ನಟೇಶ್ ನಟನೆಯ ಲೀ, ಮಾರಕಾಸ್ತ್ರ, ಫ್ಲಾಪ್ ಡೈರೆಕ್ಟರ್ ಹಾಗೂ ಸುನಾಮಿ ಕಿಟ್ಟಿ ನಟನೆಯ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಖಡಕ್ ಪಾತ್ರಗಳಿಗೆ ಹೊಂದಿಕೊಳ್ಳುವಂತಹ ದೇಹದಾರ್ಢ್ಯ ಹೊಂದಿರುವ ಅರುಣ್ ಬಚ್ಚನ್ ಖಳನಾಯಕ ಹಾಗೂ ಸಹ ನಾಯಕನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಮೂಲತಃ ಮೈಸೂರಿವರಾದ ಅರುಣ್ ಬಚ್ಚನ್ ಬೇಲೂರಿನ ವೈಡಿಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ರಂಗಭೂಮಿ ಪ್ರವೇಶಿಸಿ 2007ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅರುಣ್ ಬಚ್ಚನ್ ಹಲವು ವರ್ಷಗಳಿಂದ ಕ್ರಿಕೆಟ್‌ನಲ್ಲಿ ಒಲವನ್ನು ಬೆಳೆಸಿಕೊಂಡಿದ್ದು, ಒಳ್ಳೆಯ ಅಭ್ಯಾಸವಿರುವ ಕಾರಣ ಈ ಪರಿ ಸಿಸಿಎಲ್‌ನಲ್ಲಿ ಅಬ್ಬರಿಸಿದ್ದು, ಚೆನ್ನೈ ವಿರುದ್ಧ ಆರಂಭಿಕ ಆಘಾತ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಬುಲ್ಡೋಜರ್ಸ್‌ಗೆ ಆಸರೆಯಾಗಿ ಕನ್ನಡಿಗರ ಮನ ಗೆದ್ದಿದ್ದಾರೆ.


Click it and Unblock the Notifications











