»   » ಕೋದಂಡರಾಮ: ಸ್ಟಾರ್‌+ಸ್ಟಾರ್‌= ಸಕ್ಸೆಸ್‌

ಕೋದಂಡರಾಮ: ಸ್ಟಾರ್‌+ಸ್ಟಾರ್‌= ಸಕ್ಸೆಸ್‌

Posted By: Staff
Subscribe to Filmibeat Kannada

'ಈ ಚಿತ್ರ ನೂರು ದಿನ ಓಡೋದು ಗ್ಯಾರಂಟಿ. ಉಳಿದ ಮಾತುಗಳೇನಿದ್ದರೂ ಶತದಿನ ಸಮಾರಂಭದಲ್ಲೇ ಆಡೋಣ!"

ಕೋದಂಡರಾಮ ಸಿನಿಮಾ ಅರ್ಪಿಸುತ್ತಿರುವ ಎಡಿಟರ್‌ ಮೋಹನ್‌ ಈ ಮಾತಾಡಿದಾಗ ಅಲ್ಲಿದ್ದವರ್ಯಾರೂ ಆಶ್ಚರ್ಯಪಡಲಿಲ್ಲ . ಮೋಹನ್‌ ಮಾತ್ರವಲ್ಲ , ಅಲ್ಲಿದ್ದ ಅನೇಕ ಮಂದಿ 'ಕೋದಂಡರಾಮ" ನೂರು ದಿನ ಓಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಉಪೇಂದ್ರ ಅಭಿನಯದ ಹಾಗೂ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ 'ಸೂಪರ್‌ಸ್ಟಾರ್‌" ಸಿನಿಮಾ ಮುಹೂರ್ತದ ಸಂದರ್ಭದಲ್ಲೂ ಇಂಥದ್ದೇ ಮಾತುಗಳು ಸುದ್ದಿಯಾಗಿದ್ದವು. 'ಸೂಪರ್‌ಸ್ಟಾರ್‌-100" ಎನ್ನುವ ಫಲಕವನ್ನು ನಿರ್ಮಾಪಕರು ಆಹ್ವಾನಪತ್ರಿಕೆಯ ರೂಪದಲ್ಲಿ ರೂಪಿಸಿದ್ದರು.

'ಒಬ್ಬರು ಹ್ಯಾಟ್ರಿಕ್‌ ಹೀರೋ, ಇನ್ನೊಬ್ಬರು ಕ್ರೇಜಿ ಸ್ಟಾರ್‌!" ಇವರಿಬ್ಬರ ಮಿಲನವೇ 'ಕೋದಂಡರಾಮ". ಸ್ಟಾರ್‌ +ಸ್ಟಾರ್‌= ಸಕ್ಸೆಸ್‌ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ನಿರ್ಮಾಪಕರು. ಅಂದಹಾಗೆ, ಈ ಕೋದಂಡರಾಮ 'ತೇನ್‌ ಕಾಶಿ ಪಟ್ಟಣಂ" ಮಲಯಾಳಿ ಚಿತ್ರದ ರಿಮೇಕು. 'ಗೊತ್ತಿದ್ದೂ ಗೊತ್ತಿದ್ದೂ ರಿಮೇಕಾ ಎಂದು ಕೇಳಿ ಏಕೆ ಹೊಟ್ಟೆ ಉರಿಸುತ್ತೀರಿ" ಎಂದು ಕೋದಂಡರಾಮನ ನಿರ್ದೇಶಿಸುತ್ತಿರುವ ರವಿಚಂದ್ರನ್‌ ನಾಚಿಕೆ ಪಟ್ಟುಕೊಂಡರು.

ತೇನ್‌ ಕಾಶಿ ಪಟ್ಟಣಂ ಗಡಿ ವಿವಾದಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿರುವ ಚಿತ್ರ. ಮೂಲಕಥೆಯಂತೆಯೇ ಚಿತ್ರಿಸಬೇಕಾದರೆ, ಕಾಸರಗೋಡಿಗೋ ಅಕ್ಕಲಕೋಟೆಗೋ ಹೋಗಬೇಕು. ಅದೆಲ್ಲ ಬೇಡವೆಂದೇ ಕಥೆಯನ್ನು ಪ್ರೇಮಕಥೆಯನ್ನಾಗಿ ಬದಲಿಸಿಕೊಂಡಿದ್ದೇವೆ ಎನ್ನುತ್ತಾರೆ ರವಿಚಂದ್ರನ್‌. ಇಬ್ಬರು ಹುಡುಗರು ಒಬ್ಬಳು ಹುಡುಗಿಯನ್ನು ಪ್ರೇಮಿಸುವ ಕಥೆಯಿದು. ಕಥೆ ಹಳ್ಳಿಯಲ್ಲೇ ನಡೆಯುವುದರಿಂದ ವಿಮಾನ ಯೋಗವೇನೂ ಇಲ್ಲ . ಸಾಕ್ಷಿ ಶಿವಾನಂದ್‌, ಅನು ಪ್ರಭಾಕರ್‌ ತಾರಾಗಣದಲ್ಲಿದ್ದಾರೆ.

ಕೋದಂಡರಾಮನಿಗೆ ಕಾಸು ಹಾಕುತ್ತಿರುವ ವಿ.ವೆಂಕಟರಮಣ ತೆಲುಗಿನಲ್ಲಿ ಯಶಸ್ವಿ ನಿರ್ಮಾಪಕರು ಎಂದೇ ಹೆಸರಾದವರು. 'ಯಾರಿಗೆ ಸಾಲುತ್ತೆ ಸಂಬಳ" ಚಿತ್ರದ ಮೂಲಕ ಕನ್ನಡದಲ್ಲೂ ಕಾಸಿನ ರುಚಿಯನ್ನು ಕಂಡವರು. ಆ ಕಾರಣದಿಂದಲೇ, ಈಗ ಸ್ಟಾರ್‌ಗಳ ಲೆಕ್ಕಾಚಾರದಲ್ಲಿ ಬೊಕ್ಕಸ ದೋಚುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಕೋದಂಡರಾಮನ ಮುಹೂರ್ತ ಬೆಂಗಳೂರಿನ ಹೊರವಲಯದ ಜೆಡಿ ಪಾರ್ಕ್‌ನಲ್ಲಿ ನಡೆಯಿತು. ಈ ಪಾರ್ಕ್‌ ಎಂದರೆ ನನಗೆ ಪ್ರಾಣ ಎಂದು ಆಪ್ತವಲಯಗಳಲ್ಲಿ ಹೇಳಿಕೊಂಡಿರುವ ರವಿಚಂದ್ರನ್‌, ಅಲ್ಲಿ ಫ್ಲಾಟೊಂದನ್ನು ಖರೀದಿಸಿರುವ ಸುದ್ದಿಯೂ ಇದೆ. ಪಾರ್ವತಮ್ಮ ರಾಜ್‌ಕುಮಾರ್‌ ಕ್ಲಾಫ್‌ ಮಾಡಿದರು.

ಕೊನೆಯದಾಗಿ-
ಕೋದಂಡರಾಮದಲ್ಲಿ ರವಿಚಂದ್ರನ್‌ ಅವರದ್ದು ಆಲ್‌ರೌಂಡರ್‌ ಪಾತ್ರ. ಚಿತ್ರಕಥೆ, ಸಂಭಾಷಣೆ, ಗೀತರಚನೆ, ನಿರ್ದೇಶನ ಎಲ್ಲವೂ ಅವರದ್ದೇ. ನಿರ್ಮಾಪಕರು ಒರಿಜಿನಲ್‌ ಸಂಗೀತವನ್ನೇ ಬಳಸಿಕೊಳ್ಳಿ ಎಂದಿದ್ದರೂ, ಸಂಗೀತದ ರಿಮೇಕ್‌ಗೆ ರವಿಚಂದ್ರನ್‌ ಒಪ್ಪಿಲ್ಲ.

English summary
Shivarajkumar and Ravichandran joins hand in Kodandarama
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada