ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಪತ್ನಿ ಕೃಷ್ಣ ಪ್ರಿಯಾ
ತಮಿಳಿನ ಸೂಪರ್ ಹಿಟ್ ಸಿನಿಮಾಗಳ ಸರದಾರ ಅಟ್ಲೀ ಕುಮಾರ್ ಮತ್ತು ಪತ್ನಿ ಕೃಷ್ಣ ಪ್ರಿಯಾ ಕರ್ನಾಟಕದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಧಾರಾಕಾರ ಮಳೆಯ ನಡುವೆಯೂ ಅಟ್ಲೀ ಪತ್ನಿ ಪ್ರಿಯಾ ಜೊತೆ ಕುಕ್ಕೆಗೆ ಆಗಮಿಸಿ ಸುಬ್ರಹ್ಮಣ್ಯನ ದರ್ಶನ ಪಡೆದು ಸಂತಸ ಪಟ್ಟರು.
ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಅಟ್ಲೀ ದಂಪತಿ ಬಳಿಕ ದೇವಸ್ಥಾನದ ಭಕ್ತಾದಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಅಟ್ಲೀ ದಂಪತಿ ಕುಕ್ಕೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ವಿಶೇಷ ಎಂದರೇ ಅಟ್ಲೀ ಮತ್ತು ಪತ್ನಿ ಕೃಷ್ಣ ಪ್ರಿಯಾ ದೇವಸ್ಥಾನದ ಅನ್ನದಾನ ನಿಧಿಗೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಈ ಸಮಯದಲ್ಲಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಮತ್ತು ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಉಪಸ್ಥಿತರಿದ್ದರು.

ನಿರ್ದೇಶಕ ಅಟ್ಲೀ ನಿರ್ದೇಶನ ಮಾಡಿರುವ ಎಲ್ಲಾಸಿನಿಮಾಗಳು ಸೂಪರ ಹಿಟ್. ರಾಜ ರಾಣಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದ ಅಟ್ಲೀ ಮೊದಲ ಸಿನಿಮಾದಲ್ಲೇ ಚಿತ್ರಾಭಿಮಾನಿಗಳ ಹೃದಯ ಗೆದ್ದರು. ಬಳಿಕ ತಮಿಳಿನ ಸೂಪರ್ ಸ್ಟಾರ್ ವಿಜಯ್ ಗೆ ಆಕ್ಷನ್ ಕಟ್ ಹೇಳುವ ಅವಕಾಶ ಗಿಟ್ಟಿಸಿಕೊಂಡರು. ವಿಜಯ್ ಜೊತೆ ಅಟ್ಲೀ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದರು.
ತೇರಿ, ಮರ್ಸೆಲ್, ಬಿಗಿಲ್ ಅಂತಹ ಸಕ್ಸಸ್ ಸಿನಿಮಾಗಳನ್ನು ನೀಡುವ ಮೂಲಕ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ನಿಂತರು. ಬಿಗಿಲ್ ಬಳಿಕ ಅಟ್ಲೀ ಯಾವುದೇ ಸಿನಿಮಾಗಳನ್ನು ನಿರ್ದೇಶನ ಮಾಡಿಲ್ಲ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಿರ್ದೇಶಕ ಅಟ್ಲೀ ಬಾಲಿವುಡ್ ನ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Recommended Video
ಈ ಬಗ್ಗೆ ಶಾರುಖ್ ಆಗಲಿ ಅಥವಾ ಅಟ್ಲೀ ಬಹಿರಂಗ ಪಡಿಸಿಲ್ಲ. ಆದರೆ ಶಾರುಖ್ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಶಾರುಖ್ ಮತ್ತು ಅಟ್ಲೀ ಸಿನಿಮಾಗೆ ನಯನತಾರಾ ನಾಯಕಿ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.


Click it and Unblock the Notifications











