Undenaama Trailer: ಫಸ್ಟ್ ನೈಟ್ ಆಸೆ.. ಲಾಕ್‌ಡೌನ್ ಪಜೀತಿ.. ಕೋಮಲ್ 'ನಾಮ' ಹಾಕ್ತಾದ್ರಾ, ಹಾಕಿಸಿಕೊಳ್ತಾರಾ?
ಸೆನ್ಸೇಷನಲ್ ಸ್ಟಾರ್ ಕೋಮಲ್ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ವಾಪಸ್ ಆಗ್ತಿದ್ದಾರೆ. ಇತ್ತೀಚೆಗೆ ಕೋಮಲ್ ನಟನೆಯ 'ಉಂಡೆನಾಮ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ನವರಸ ನಾಯಕ ಜಗ್ಗೇಶ್ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರಕ್ಕೆ 2020 ಎನ್ನುವ ಟೈಟಲ್ ಇತ್ತು. 'ಉಂಡೆನಾಮ' ಹೆಸರಿನಿಂದ ಸಿನಿಮಾ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರ್ತಿದೆ.
ಟ್ರೈಲರ್ ನೋಡ್ತಿದ್ರೆ ಇದು ಪಕ್ಕಾ ಕೋಮಲ್ ಸ್ಟೈಲ್ ಫನ್ ಎಂಟರ್‌ಟೈನರ್ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಚಿಕ್ಕಂದಿನಿಂದಲೂ ಫಸ್ಟ್ ನೈಟ್ ಬಗ್ಗೆ ಭಾರೀ ಕುತೂಹಲ ಇಟ್ಟುಕೊಂಡಿರುವ ಚಿತ್ರದ ನಾಯಕ ರಾಜ ಮದುವೆ ಆಗದೇ ಏನೆಲ್ಲಾ ಪಾಡು ಪಡ್ತಾನೆ? ಬೇರೆ ಮಾರ್ಗದಲ್ಲಿ ಕೋರಿಕೆ ಈಡೇರಿಸಿಕೊಳ್ಳಲು ಮುಂದಾಗುವ ಆತ ಕೊರೋನಾ ಲಾಕ್‌ಡೌನ್‌ನಿಂದ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅನ್ನೋದನ್ನು ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಲಾಗ್ತಿದೆ. ಕೆ. ಎಲ್ ರಾಜಶೇಖರ್ 'ಉಂಡೆನಾಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಕೋಮಲ್ ಸ್ನೇಹಿತನ ಪಾತ್ರದಲ್ಲಿ ಹರೀಶ್ ರಾಜ್ ನಟಿಸಿದ್ದಾರೆ. ನಾಯಕಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಂಡಿದ್ದು ತಬಲ ನಾಣಿ, ಬ್ಯಾಂಕ್ ಜನಾರ್ಧನ್, KGF ಸಂಪತ್, ತನಿಷಾ ಕುಪಂದ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಟಿ. ಆರ್ ಚಂದ್ರಶೇಖರ್ ಉಂಡೆನಾಮ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 4 ವರ್ಷಗಳ ಹಿಂದೆ 'ಕೆಂಪೇಗೌಡ'- 2 ಚಿತ್ರದಲ್ಲಿ ನಟಿಸಿ ಕೋಮಲ್ ಆಕ್ಷನ್ ಹೀರೊ ಆಗುವ ಪ್ರಯತ್ನ ಮಾಡಿದ್ದರು. ಈಗ ಮತ್ತೆ ಕಾಮಿಡಿ ಟ್ರ್ಯಾಕ್‌ಗೆ ಮರಳಿದ್ದಾರೆ.
ಚಿತ್ರದ ಪಾತ್ರಗಳಿಗೆ ಡೇಂಜರ್ ಡ್ಯಾಡಿ, ಪೋಲಿ ಫ್ರೆಂಡ್, ಅರೇಂಜ್ಡ್ ಲವರ್, ಪ್ಯಾದೆ ಪೊಲೀಸ್, ಜೀವಂತ ಸಿಸಿಟಿವಿ, ಆಂಗ್ರಿ ಬರ್ಡ್, ಹನಿ ಕೇಕ್, ಹಾಟ್ ಕೇಕ್ ಅಂತೆಲ್ಲಾ ಅಡ್ಡ ಹೆಸರು ಇಟ್ಟು ನಿರ್ದೇಶಕರು ಗಮನ ಸೆಳೆದಿದ್ದಾರೆ. ಕಚಗುಳಿ ಇಡುವ ಸಂಭಾಷಣೆ ಚಿತ್ರದಲ್ಲಿದೆ. ನವೀನ್ ಕುಮಾರ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ 'ಉಂಡೆನಾಮ' ಚಿತ್ರಕ್ಕಿದೆ.

'ಉಂಡೆನಾಮ' ಸಿನಿಮಾ ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ನ ನಟ ಜಗ್ಗೇಶ್, "ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ, ಇವನ ಹಾಗೆ ನಾನು ಕಾಮಿಡಿ ಕಲಿಯಬೇಕು ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್ ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ. ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಹಾರೈಸಿದ್ದಾರೆ.
"ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲ ನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಏಪ್ರಿಲ್ 14 ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ" ಎಂದು ನಟ ಕೋಮಲ್ ಮನವಿ ಮಾಡಿದ್ದಾರೆ.
ನಿರ್ದೇಶಕ ಕೆ.ಎಲ್ ರಾಜಶೇಖರ್ ಮಾತನಾಡಿ "ಮೊದಲ ಲಾಕ್ ಡೌನ್‌ನಲ್ಲಿ ಕಥೆ ಬರೆದೆ. ಆ ನಂತರ ನಿರ್ಮಾಪಕ ನಂದ ಅವರ ಬಳಿ ಕಥೆ ಹೇಳಿದಾಗ, ಅವರು ಈ ಚಿತ್ರವನ್ನು ಕೋಮಲ್ ಅವರು ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ. ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ" ಎಂದಿದ್ದಾರೆ.


Click it and Unblock the Notifications











