»   » ಇದು ನೂರಕ್ಕೆನೂರು ಕಾಮೆಡಿ, ರಂಜಿಸಲು ಕೋತಿಗಳು ರೆಡಿ

ಇದು ನೂರಕ್ಕೆನೂರು ಕಾಮೆಡಿ, ರಂಜಿಸಲು ಕೋತಿಗಳು ರೆಡಿ

Posted By: Staff
Subscribe to Filmibeat Kannada

'ಕುರಿ"ಗಳನ್ನ ನೋಡಿ ನಕ್ಕದ್ರಿ ದುಃಖನ್ನೆಲ್ಲ ಮರತ್ರಿ 'ಕೋತಿ"ಗಳಾಗಿ ಬರ್ತೀವಿ ನಿಮ್ಮಗಳ ಅಪೇಕ್ಷೆನಾ ಮೀರತೀವಿ.

ಎನ್ನುವ ಸ್ಲೋಗನ್‌ನೊಂದಿಗೆ ಕೋತಿಗಳು ಸಾರ್‌ ಕೋತಿಗಳು ಡಿಸೆಂಬರ್‌ 28 ರ ಶುಕ್ರವಾರ ಬೆಳ್ಳಿತೆರೆಗೆ ಬರುತ್ತಿವೆ. ನೂರಕ್ಕೆ ನೂರು ಕಾಮೆಡಿ ಎನ್ನುವುದು ಕೋತಿಗಳ ಬಳಗ ನೀಡುತ್ತಿರುವ ಗ್ಯಾರಂಟಿ! ಇದು ವರ್ಷದ ಕೊನೆಯ ಕಾಮೆಡಿ ಎನ್ನುವುದು ಒಗ್ಗರಣೆ.

ವರ್ಷಾರಂಭದಲ್ಲಿ ಚುರುಕಾಗಿದ್ದ ಸ್ಯಾಂಡಲ್‌ವುಡ್‌ ವರ್ಷಾಂತ್ಯದಲ್ಲಿ ಕಾಲು ಮುರಿದುಕೊಂಡಿದೆ. ಕೋಟಿಗೊಬ್ಬ ಹೊರತುಪಡಿಸಿದರೆ ಗಮನಾರ್ಹ ಎನ್ನುವ ಚಿತ್ರಗಳು ವರ್ಷದ ಕೊನೆಯಲ್ಲಿ ಬರಲೇ ಇಲ್ಲ . ಕ್ರಿಸ್‌ಮಸ್‌ ರಜೆಯ ಆಕರ್ಷಣೆಯಿದ್ದರೂ ಡಿಸೆಂಬರ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡಲಿಲ್ಲ , ಡಿಸೆಂಬರ್‌ ಸಿನಿಮಾ ಬರ ಅನುಭವಿಸಿತು. ಕೊನೆಯ ಎರಡು ವಾರದಲ್ಲಿ ತೆರೆಭಾಗ್ಯ ಕಂಡಿದ್ದು ಅಮ್ಮ ನಾಗಮ್ಮ ಹಾಗೂ ಕೋತಿಗಳು ಮಾತ್ರ. ಒಂದು ಅಮ್ಮನ ಪುರಾಣ, ಇನ್ನೊಂದು ಕುರಿಗಳಿಂದ ಕೋತಿಗಳಾದ ವಿಕಾಸ ಯಾನ!

ಕೋತಿಗಳಂಥ ಕಾಮೆಡಿ ಚಿತ್ರದಲ್ಲಿ ನಾನೆಂದೂ ನಟಿಸಿಯೇ ಇರಲಿಲ್ಲ ಎನ್ನುತ್ತಾರೆ ಶಿಲ್ಪ ಶ್ರೀನಿವಾಸ್‌ರನ್ನು ಅಳಿಸಿದ ಖ್ಯಾತಿಯ ಪ್ರೇಮ. ಅವರು ಸಿನಿಮಾದಲ್ಲಿ ಕೋತಿಯೇ ಅನ್ನುವುದು ಗುಟ್ಟು . ಕುರಿಯಾಗಿ ಪಳಗಿದ ರಮೇಶ್‌ ಮಾತ್ರ ತಾವು ಗಡವ ಎನ್ನುವುದನ್ನು ವಿನಯದಿಂದ ಒಪ್ಪಿಕೊಳ್ಳುತ್ತಾರೆ. ವರ್ಷ ಪೂರ್ತಿ ಸೋಲನ್ನೇ ಕಂಡಿದ್ದ ರಮೇಶ್‌ಗೆ ಕೋತಿಗಳು ಯಶಸ್ಸನ್ನು ತಂದುಕೊಡುವ ವಿಶ್ವಾಸ. ಎಸ್‌. ನಾರಾಯಣ್‌ ಹಾಗೂ ಮೋಹನ್‌ ಕೂಡ ಕೋತಿಗಳ ಯಶಸ್ಸಿನ ಮೂಲಕ ಹೊಸ ಹುರುಪಿನೊಂದಿಗೆ ಹೊಸ ವರ್ಷ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಕೋತಿಗಳು ಗೆಲ್ಲುವ ಬಗ್ಗೆ ಯಾವುದೇ ಅನುಮಾನ ಇಲ್ಲ ಎನ್ನುತ್ತಾರೆ ನಿರ್ಮಾಪಕ ಜೈ ಜಗದೀಶ್‌ ಹಾಗೂ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು. ಕುರಿಗಳಿಗಿಂತ ಹೆಚ್ಚಿನ ಯಶಸ್ಸು ಕೋತಿಗಳಿಗೆ ಸಿಗುತ್ತದೆ ಎನ್ನುವುದು ಬಾಬು ವಿಶ್ವಾಸ. ಅಂದಹಾಗೆ, ಬಾಬು ಅವರ ಹೊಸ ಚಿತ್ರ ಯಾವುದು? ನರಿಗಳು ಸಾರ್‌ ನರಿಗಳು ಎಂದು ನೀವು ಅಂದುಕೊಂಡಿದ್ದಲ್ಲಿ ನಿಮ್ಮ ಊಹೆ ತಪ್ಪು . ಸದ್ಯಕ್ಕೆ ನರಿಗಳು ಬಚಾವು! ಬಾಬು ಕೊತ್ವಾಲನಿಗೆ ಸ್ಕೆಚ್‌ ಹಾಕುತ್ತಿದ್ದಾರೆ.

English summary
After Kurigalu its time for Kothigalu to hit the screen
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada