»   » ಕುರಿಗಳೇ ಕೋತಿಗಳು, ನಾಯಕಿಯರಷ್ಟೆ ಹೊಸಬರು

ಕುರಿಗಳೇ ಕೋತಿಗಳು, ನಾಯಕಿಯರಷ್ಟೆ ಹೊಸಬರು

Posted By: Staff
Subscribe to Filmibeat Kannada

ಬಾಂಡಲಿ ಹಣೆ ತುಂಬ ಗಾಡಿಪಟ್ಟಿಯಂತಹ ವಿಭೂತಿ, ಬಿಳಿ ಅಂಗಿ- ಪಂಚೆಯುಟ್ಟ ಅಯ್ಯಂಗಾರಿ! ಯಾರೀ ಮನುಷ್ಯ ಎಂದು ಹತ್ತಿರ ಹೋದರೆ ರಮೇಶ್‌. ಅವರು ಮೇಕಪ್‌ನಲ್ಲಿದ್ದರು, 'ಕೋತಿಗಳು ಸಾರ್‌ ಕೋತಿಗಳು" ಸಿನಿಮಾ ಮುಹೂರ್ತದ ಸಂದರ್ಭದಲ್ಲಿ . ಸ್ಥಳ- ಧರ್ಮಗಿರಿ ಮಂಜುನಾಥ ದೇವಸ್ಥಾನ.

'ಕುರಿಗಳು.." ಸಿನಿಮಾದ ಭಾರೀ ಯಶಸ್ಸೇ 'ಕೋತಿಗಳು" ಸಿನಿಮಾಕ್ಕೆ ಪ್ರೇರಣೆ ಎಂದು ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಎಗ್ಗಿಲ್ಲದೆ ಹೇಳಿಕೊಂಡರು. ಅಲ್ಲಿಗೆ ಕುರಿಗಳಿಂದ ಕೋತಿಗಳು ಎನ್ನುವ ಥಿಯರಿಯನ್ನು ಹೊಸೆಯಬಹುದು. ಹೊಸ ಚಿತ್ರದಲ್ಲಿ ಮಂಗನಂತೆ ಕುಣಿಯುವ ಮನಸ್ಸಿನ ಬಗ್ಗೆ ಹೇಳುವುದು ಬಾಬು ಉದ್ದೇಶ. ಈ ಕಥೆಯನ್ನು ಹೇಳುವಾಗ ಪಾತ್ರಧಾರಿಗಳೂ ಕೋತಿಗಳಂತೆ ವರ್ತಿಸುತ್ತಾರೆ ಅನ್ನುವುದನ್ನು ಬಾಬು ಬಾಯಿಬಿಟ್ಟು ಹೇಳಲಿಲ್ಲ .

ಕುರಿಗಳು ಚಿತ್ರದ ಯಶಸ್ವಿ ತ್ರಿವಳಿಗಳಾದ ರಮೇಶ್‌, ಮೋಹನ್‌ ಹಾಗೂ ಎಸ್‌.ನಾರಾಯಣ್‌ ಕೋತಿಗಳಲ್ಲೂ ಮುಂದುವರಿದಿದ್ದಾರೆ. ನಾಯಕಿಯರಿಗೆ ಮಾತ್ರ ಎತ್ತಂಗಡಿ. ಕೋತಿಗಳಿಗೆ ನಾಯಕಿಯಾಗಿ ಪ್ರೇಮಾ, ತಾರಾ ಹಾಗೂ ಊರ್ವಶಿ ನಟಿಸುತ್ತಿದ್ದಾರೆ. ಇನ್ನೂ ಮೂವರು ಷೋಡಶಿಯರು ಚಿತ್ರದಲ್ಲಿರುತ್ತಾರೆ ಎಂದು ಬಾಬು ಹೇಳಿದರು. ಮತ್ತೊಂದು ಪ್ರಧಾನ ಪಾತ್ರದಲ್ಲಿ ಲೋಕೇಶ್‌ ಇದ್ದಾರಂತೆ.

ಚಿತ್ರದ ಅನೇಕ ಕಡೆ, ಸಂಭಾಷಣೆಗೆ ಬದಲು ಹನಿಗವನ(ಚುಟುಕು)ಗಳನ್ನು ಬಳಸುವ ಉದ್ದೇಶ ಬಾಬು ಅವರದು. ಈಗಾಗಲೇ ಡಿರಾಬಾಬು ಅವರ 'ಅಮ್ಮ"ನಿಗೆ 'ಗೋಪಿ ಮತ್ತು ಗಾಂಡಲೀನ"ಳನ್ನು ಕೊಟ್ಟಿರುವ ಬಿ.ಆರ್‌. ಲಕ್ಷ್ಮಣರಾವ್‌ ಪ್ರಾಸಗಳು ಕೋತಿಗಳಲ್ಲೂ ಮಿಂಚಲಿವೆ. ಲಕ್ಷ್ಮಣ್‌ರಾವ್‌ ಹಾಗೂ 'ಚುಟುಕುರತ್ನ " ಎಚ್‌.ದುಂಡಿರಾಜ್‌ರ ಚಿನಕುರಳಿಗಳನ್ನು ಬಾಬು ಆಯ್ದುಕೊಂಡಿದ್ದಾರೆ. 'ಕೋತಿ" ಶಬ್ದದಲ್ಲೇ ಕಸರತ್ತು ಮಾಡಿ ಅದ್ಭುತ ಹಾಡೊಂದನ್ನು ಬೇಲೂರು ರಾಮಮೂರ್ತಿ ನೇಯ್ದಿದ್ದಾರೆ. ಸಂಭಾಷಣೆ ರಿಚರ್ಡ್‌ ಲೂಯಿಸ್‌ ಅವರದು.

English summary
Rajendra Singh Babus new venuture Kotigalu Saar Kotigalu shooting begins
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada