For Quick Alerts
  ALLOW NOTIFICATIONS  
  For Daily Alerts

  'ಬಂದರೆ ಬರಲಿ ಬಿಡಿ': 'ಸಲಗ' ಬಿಡುಗಡೆಗೆ 'ಕೋಟಿಗೊಬ್ಬ 3' ನಿರ್ಮಾಪಕ ಡೋಂಟ್ ಕೇರ್

  |

  ಅಕ್ಟೋಬರ್ 1 ರಿಂದ ಕರ್ನಾಟಕದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ.

  ದುನಿಯಾ ವಿಜಯ್ ಸಲಗಕ್ಕೆ ಡೋಂಟ್ ಕೇರ್ ಎಂದ ಕೋಟಿಗೊಬ್ಬ ನಿರ್ಮಾಪಕ

  ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯುವಂತೆ ಕರ್ನಾಟಕ ಸರ್ಕಾರ ಆದೇಶ ನೀಡುತ್ತಿದ್ದಂತೆಯೇ ಹಲವು ಚಿತ್ರತಂಡಗಳು ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ನಾ ಮುಂದು-ತಾ ಮುಂದೆ ಎಂದು ಘೋಷಿಸುತ್ತಿವೆ. ಹಬ್ಬದ ಸೀಸನ್‌ಗೆ ಸರಿಯಾಗಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಈ ಹಿಂದಿನ ಬೇಸರವನ್ನು ತುಸು ಮರೆಸಿದೆ.

  ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2', ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ', 'ಸುದೀಪ್ ನಟನೆಯ 'ಕೋಟಿಗೊಬ್ಬ 3', ಲವ್ಲಿ ಪ್ರೇಮ್ ನಟನೆಯ 'ಪ್ರೇಮಂ ಪೂಜ್ಯಂ' ಇನ್ನೂ ಕೆಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿವೆ. ಆದರೆ 'ಸಲಗ' ಹಾಗೂ 'ಕೋಟಿಗೊಬ್ಬ 3' ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿದ್ದು, ಸ್ಟಾರ್‌ ವಾರ್‌ಗೆ ಅವಕಾಶ ಮಾಡಿಕೊಟ್ಟಿದೆ.

  ಈ ಬಗ್ಗೆ ನಿನ್ನೆ ಮಾತನಾಡಿದ್ದ 'ಸಲಗ' ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ''ಸುದೀಪ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ'' ಎಂದಿದ್ದರು. ಆದರೆ ಇಂದು ಮಾತನಾಡಿರುವ 'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬು ತಮ್ಮ ಸಿನಿಮಾ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

  ಬೇರೆಯವರಿಗೆ ಬಿಟ್ಟುಕೊಟ್ಟು ನಷ್ಟವಾಯಿತು: ಸೂರಪ್ಪ

  ಬೇರೆಯವರಿಗೆ ಬಿಟ್ಟುಕೊಟ್ಟು ನಷ್ಟವಾಯಿತು: ಸೂರಪ್ಪ

  ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸೂರಪ್ಪ ಬಾಬು, ''ನಮ್ಮಿಂದಲೂ ತಪ್ಪುಗಳಾಗಿವೆ. ಕಳೆದ ಬಾರಿಯೇ ನಮ್ಮ ಸಿನಿಮಾ ಬಿಡುಗಡೆ ಮಾಡಬಹುದಾಗಿತ್ತು. ಆದರೆ ನಾವು ಬೇರೆಯವರಿಗೆ ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದೆವು. ಬೇರೆಯವರಿಗೆ ಬಿಟ್ಟುಕೊಟ್ಟಿದ್ದರಿಂದ ಎಂಟು ತಿಂಗಳು ಹೆಚ್ಚು ಕಾಯುವಂತಾಯಿತು. ಇನ್ನು ಮುಂದೆ ನನ್ನಿಂದ ಕಾಯಲು ಆಗುವುದಿಲ್ಲ'' ಎಂದಿದ್ದಾರೆ.

  ಮತ್ತೆ ಸಿನಿಮಾ ಮುಂದೂಡಲು ನನ್ನಿಂದಾಗದು: ಸೂರಪ್ಪ

  ಮತ್ತೆ ಸಿನಿಮಾ ಮುಂದೂಡಲು ನನ್ನಿಂದಾಗದು: ಸೂರಪ್ಪ

  ''ಮತ್ತೆ-ಮತ್ತೆ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಂಡು ಇರಲು ನನ್ನಿಂದಂತೂ ಸಾಧ್ಯವಿಲ್ಲ. ಈಗಾಗಲೇ ಬಹಳ ಕಷ್ಟ ಅನುಭವಿಸಿದ್ದೀನಿ. ಈ ವಿಷಯ ಶ್ರೀಕಾಂತ್‌ಗೂ ('ಸಲಗ' ನಿರ್ಮಾಪಕ) ಗೊತ್ತು. ನಾವು ಸಿನಿಮಾ ಬಿಡುಗಡೆ ಮಾಡಲಿರುವ ದಿನ ಬಹಳ ಒಳ್ಳೆಯ ದಿನ. ಅವರೂ ತಮ್ಮ ಸಿನಿಮಾ ಬಿಡುಗಡೆ ಮಾಡಲಿ ಬಿಡಿ, ನೋಡೋಣ'' ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

  ಎರಡು ಸಿನಿಮಾ ಬಿಡುಗಡೆ ಆದರೆ ಸಮಸ್ಯೆ ಏನಿಲ್ಲ: ಸೂರಪ್ಪ ಬಾಬು

  ಎರಡು ಸಿನಿಮಾ ಬಿಡುಗಡೆ ಆದರೆ ಸಮಸ್ಯೆ ಏನಿಲ್ಲ: ಸೂರಪ್ಪ ಬಾಬು

  ''ನಾಡ ಹಬ್ಬ ದಸರಾಕ್ಕೆ ನಮ್ಮ ಸಿನಿಮಾ ಬಿಡುಗಡೆ ಮಾಡಲಿದ್ದೇವೆ. ಅವರೂ ಬಂದರೆ ಬರಲಿ ಬಿಡಿ. ಹಬ್ಬದ ಸಮಯ ಹತ್ತು ದಿನ ರಜೆ ಇರುತ್ತದೆ. ಎರಡೂ ಸಿನಿಮಾಗಳಿಗೂ ಸಮಸ್ಯೆ ಆಗುವುದಿಲ್ಲ. ಈ ಹಿಂದೆ ಇಬ್ಬರು ಸ್ಟಾರ್ ನಟರ ಸಿನಿಮಾ ಬಿಡುಗಡೆ ಆಗಿದ್ದಾಗ ಚಿತ್ರಮಂದಿರ ವಿತರಣೆ ಆಗಲಿ ಇನ್ನೊಂದಾಗಲಿ ಏನೂ ಸಮಸ್ಯೆ ಆಗಿರಲಿಲ್ಲ. ಬಹುತೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಎರಡೆರಡು ಚಿತ್ರಮಂದಿರ ಇದೆ. ಕೆಲವು ಕಡೆ ಸಮಸ್ಯೆ ಆಗಬಹುದು. ಆಗ ಚಿತ್ರಮಂದಿರದವರು ನಿರ್ಧಾರ ಮಾಡುತ್ತಾರೆ ಯಾವ ಸಿನಿಮಾ ಬಿಡುಗಡೆ ಮಾಡಬೇಕು ಎಂದು'' ಎಂದಿದ್ದಾರೆ ಸೂರಪ್ಪ ಬಾಬು.

  ಸೆನ್ಸಾರ್ ಆದ ಬಳಿಕ ದಿನಾಂಕ ಪ್ರಕಟಿಸುತ್ತೇನೆ: ಸೂರಪ್ಪ ಬಾಬು

  ಸೆನ್ಸಾರ್ ಆದ ಬಳಿಕ ದಿನಾಂಕ ಪ್ರಕಟಿಸುತ್ತೇನೆ: ಸೂರಪ್ಪ ಬಾಬು

  ''ನನಗೆ ಬಹಳ ಕಡಿಮೆ ಸಮಯ ಇದೆ. ಬಿಡುಗಡೆಗೆ ಇನ್ನು ಹದಿನೆಂಟು ದಿನ ಅಷ್ಟೆ ಉಳಿದಿದೆ. ಅಷ್ಟರ ಒಳಗಾಗಿ ಸಿನಿಮಾವನ್ನು ಸೆನ್ಸಾರ್‌ಗೆ ತೋರಿಸಿ, ಪ್ರಚಾರ ಕಾರ್ಯ ಮಾಡಿ, ವಿತರಣೆ ಮಾಡಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕಿದೆ. ಬುಧವಾರ ಅಥವಾ ಗುರುವಾರ ಸೆನ್ಸಾರ್‌ಗೆ ಸಿನಿಮಾ ತೋರಿಸುತ್ತೇನೆ. ಸೆನ್ಸಾರ್ ಆಗುವ ವರೆಗೆ ದಿನಾಂಕ ಪ್ರಕಟ ಮಾಡುವಂತಿಲ್ಲ. ಹಾಗಾಗಿ ನಾಡ ಹಬ್ಬಕ್ಕೆ ಬಿಡುಗಡೆ ಎಂದು ಪೋಸ್ಟರ್‌ ಹಾಕಿಸುತ್ತಿದ್ದೇನೆ. ಬೇಗ ಸೆನ್ಸಾರ್ ಮಾಡಿಸಿ ಪೋಸ್ಟರ್‌ನಲ್ಲಿ ದಿನಾಂಕ ಪ್ರಕಟಿಸುತ್ತೇನೆ'' ಎಂದಿದ್ದಾರೆ ಸೂರಪ್ಪ ಬಾಬು. ಅಕ್ಟೋಬರ್ 14 ರಂದೇ 'ಕೋಟಿಗೊಬ್ಬ 3' ಬಿಡುಗಡೆ ಆಗಲಿದ್ದು, ಸೆನ್ಸಾರ್ ಆದ ಬಳಿಕ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

  ದುನಿಯಾ ವಿಜಯ್ ಹೇಳಿದ್ದು ಹೀಗೆ

  ದುನಿಯಾ ವಿಜಯ್ ಹೇಳಿದ್ದು ಹೀಗೆ

  'ಸಲಗ' ಹಾಗೂ 'ಕೋಟಿಗೊಬ್ಬ 3' ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಬಗ್ಗೆ ನಿನ್ನೆ ಮಾತನಾಡಿದ್ದ ವಿಜಯ್, ''ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ನಿಶ್ಚಯಿಸುತ್ತಾರೆ. ಅದಕ್ಕೂ ನಟರಿಗೂ ಸಂಬಂಧವಿಲ್ಲ. ನನ್ನ ಹಾಗೂ ಸುದೀಪ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಯಾರೇ ತಂದಿಟ್ಟರು ಆ ಬಾಂಧವ್ಯ ಹಾಳಾಗಲ್ಲ. ಸುದೀಪ್ ನನಗಿಂತಲೂ ಹಿರಿಯ ನಟ ಮತ್ತು ಆರೋಗ್ಯವಾಗಿ ಯೋಚಿಸುವ ಮನುಷ್ಯ'' ಎಂದಿದ್ದಾರೆ. ಇನ್ನು ನಟ ಸುದೀಪ್ ಸಹ 'ಸಲಗ' ತಂಡಕ್ಕೆ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ. 'ಸಲಗ' ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದ ಸುದೀಪ್ ಸಿನಿಮಾಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದರು.

  English summary
  Sudeep's Kotigobba 3 and Duniya Vijay's 'Salaga' movie releasing on same day producer Soorappa Babu said let them (Salaga) release on the same day, I am not bothered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X