'ಕೋಟಿಗೊಬ್ಬ 3' ಗೆ ಸಿಕ್ಕಿಲ್ಲ ಯುಎಫ್‌ಓ ಪರವಾನಗಿ: ರಾಜ್ಯದಾದ್ಯಂತ ಮೊದಲ ಶೋ ರದ್ದು
ಸುದೀಪ್‌ರ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾಕ್ಕೆ ದೊಡ್ಡ ಸಂಕಟ ಎದುರಾಗಿದೆ. ಸಿನಿಮಾಕ್ಕೆ 'ಯುಎಫ್‌ಓ' ಪರವಾನಗಿ ದೊರಕದ ಕಾರಣ ರಾಜ್ಯದಾದ್ಯಂತ ಮೊದಲ ಶೋ ರದ್ದಾಗಿದೆ.
ಯುಎಫ್‌ಓ ಹಾಗೂ ನಿರ್ಮಾಪಕರ ನಡುವೆ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಆಗಿರುವ ಯುಎಫ್‌ಓ 'ಕೋಟಿಗೊಬ್ಬ 3'ಗೆ ಪರವಾನಗಿ ನೀಡಿಲ್ಲ. ಹಾಗಾಗಿ ಸಿನಿಮಾವು ಚಿತ್ರಮಂದಿರಗಳಲ್ಲಿ ಪ್ರದರ್ಶಿತಗೊಳ್ಳುತ್ತಿಲ್ಲ.
''ನಿರ್ಮಾಪಕ, ವಿತರಕ ಹಾಗೂ ಲ್ಯಾಬ್ ನಡುವೆ ಹಣಕಾಸಿನ ಸಮಸ್ಯೆಯಿಂದಾಗಿ ರಾಜ್ಯದಾದ್ಯಂತ 'ಕೋಟಿಗೊಬ್ಬ 3' ಸಿನಿಮಾದ ಪ್ರದರ್ಶನ ರದ್ದಾಗಿದೆ. ಮುಂದಿನ ಶೋ ಪ್ರಸಾರವಾಗುತ್ತದೆಯೇ ಇಲ್ಲವೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು'' ಎಂದು ಕೆಲವು ಚಿತ್ರಮಂದಿರಗಳಲ್ಲಿ ಬೋರ್ಡ್ ಹಾಕಲಾಗಿದೆ.
ಯುಎಫ್‌ಓ, ಸಿನಿಮಾಗಳ ಸ್ಯಾಟಲೈಟ್ ಪ್ರಸಾರ ಮಾಧ್ಯಮವಾಗಿದ್ದು, ಸಿನಿಮಾವನ್ನು ಇ-ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳು ಡಿಜಿಟಲ್ ರೂಪದಲ್ಲಿ ಸಿನಿಮಾ ಪ್ರದರ್ಶಿಸುತ್ತಿದ್ದು ಅದಕ್ಕೆ ಯುಎಫ್‌ಓ ಪರವಾನಗಿ ಅವಶ್ಯಕವಾಗಿರುತ್ತದೆ. ಯುಎಫ್‌ಓ ಪರವಾನಗಿ ಇಲ್ಲದೆ ಚಿತ್ರಮಂದಿರಗಳು ಸಿನಿಮಾ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ.

ಈಗಾಗಲೇ ರಾಜ್ಯದಾದ್ಯಂತ ಆಯೋಜಿಸಲಾಗಿದ್ದ ಫ್ಯಾನ್ಸ್ ಶೋ, ಅರ್ಲಿ ಮಾರ್ನಿಂಗ್ ಶೋಗಳು ರದ್ದಾಗಿದ್ದು, 9:30 ಹಾಗೂ 10:30 ಶೋಗಳು ಸಹ ರದ್ದಾಗುವ ಆತಂಕ ಎದುರಾಗಿದೆ. ಅರ್ಲಿ ಮಾರ್ನಿಂಗ್ ಶೋ ರದ್ದಾದಗಲೇ ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಬಳಿ ಗಲಾಟೆ ಎಬ್ಬಿಸಿದ್ದರು. ಈಗ ಇನ್ನುಳಿದ ಶೋಗಳೂ ರದ್ದಾದರೆ ಅಭಿಮಾನಿಗಳು ಇನ್ನಷ್ಟು ಆಕ್ರೋಶಿತಗೊಳ್ಳುವ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆಯಷ್ಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸುದೀಪ್, ''ನಮ್ಮ ಸಿನಿಮಾವನ್ನು ವಿತರಕರು ಇಷ್ಟಪಟ್ಟಿದ್ದಾರೆ, ಸಿನಿಮಾವನ್ನು ಹಣ ನೀಡಿ ಕೊಂಡುಕೊಂಡಿದ್ದಾರೆ'' ಎಂದಿದ್ದರು. ಆದರೆ ಈಗ ಯುಎಫ್‌ಓ ಸಮಸ್ಯೆಯಿಂದಾಗಿ ಸಿನಿಮಾ ಪ್ರದರ್ಶನವೇ ರದ್ದಾಗಿದೆ. 'ಸಲಗ' ಸಿನಿಮಾವು ಯಾವುದೇ ಅಡ್ಡಿ-ಆತಂಕ ಇಲ್ಲದೆ ಪ್ರದರ್ಶಿತವಾಗುತ್ತಿದೆ.


Click it and Unblock the Notifications











