»   » ಸದ್ದು ! ಕೊತ್ವಾಲ ರಾಮಚಂದ್ರ ಬರುತ್ತಿದ್ದಾನೆ !!

ಸದ್ದು ! ಕೊತ್ವಾಲ ರಾಮಚಂದ್ರ ಬರುತ್ತಿದ್ದಾನೆ !!

Posted By: Staff
Subscribe to Filmibeat Kannada

ಒಂದಾನೊಂದು ಕಾಲದ ಬೆಂಗಳೂರು ಕಂಡ ದುಸ್ವಪ್ನ ಮತ್ತೆ ಜೀವಂತವಾಗುತ್ತಿದೆ. ಬೆಂಗಳೂರು ಭೂಗತ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಕೊತ್ವಾಲನ ಕರಿ ಜಗತ್ತು ಮತ್ತೆ ಜೀವಂತವಾಗುತ್ತಿದೆ. ಹೌದು, ಕೊತ್ವಾಲನ ಕಥಾ ಸಂಪುಟಗಳು ಬಿಚ್ಚಿಕೊಳ್ಳುತ್ತಿವೆ, ಅರ್ಥಾತ್‌ ಕೊತ್ವಾಲ ಸಿನಿಮಾ ಅಗುತ್ತಿದ್ದಾನೆ.

ಸೆನ್ಸಾರ್‌ ಹೀಗಳೆದರೂ, ಜನ ಮೆಚ್ಚಿದ ಹಾಗೂ 'ಪಳೆಯುಳಿಕೆ" ಎಂದು ಜರೆಸಿಕೊಳ್ಳುತ್ತಿರುವ ಎಂ.ಎಸ್‌. ಸತ್ಯು ಮೆಚ್ಚಿರುವ ಕುರಿಗಳು ಸಾರ್‌ ಕುರಿಗಳು ನೂರು ದಿನ ಪೂರೈಸಿದೆ. ಈ ಸಂಭ್ರಮ ಬಾಬು ಅವರಿಗೆ ಹೊಸ ಸಿನಿಮಾ ಮಾಡುವ ಹುಮ್ಮಸ್ಸು ಕೊಟ್ಟಿದೆ. ಒಂದೇ ಬಾರಿ ಮೂರು ಸಿನಿಮಾಗಳು ಅವರ ತಲೆಯಲ್ಲಿವೆ. ಸಿನಿಮಾ ತಯಾರಿಸಲು ನೆಂಟ ಜೈ ಜಗದೀಶ್‌ ಕೂಡ ಹುಮ್ಮಸ್ಸಿನಿಂದಿದ್ದಾರೆ.

ಕೊತ್ವಾಲನ ಸಿನಿಮಾ ಅಂದಮೇಲೆ ನೀವು ಉಪೇಂದ್ರ ಅಥವಾ ಶಿವಮಣಿ ಅವರನ್ನು ನೆನೆಯಬೇಕಿಲ್ಲ . ಕೊತ್ವಾಲನ ಸಿನಿಮಾಕ್ಕೂ 'ಹಾಯ್‌"ನ ರವಿ ಬೆಳಗೆರೆ ಅವರಿಗೂ ಅಕ್ಷರಶಃ ಸಂಬಂಧವೇ ಇಲ್ಲ . ಈ ಬಾರಿ 'ಕುರಿಗಳು" ಬಾಬು ಸರದಿ. ಬೆಂಗಳೂರು ಕಂಡ ಕುಖ್ಯಾತರಲ್ಲೊಬ್ಬನಾದ ಕೊತ್ವಾಲನ ಸಬ್ಜೆಕ್ಟನ್ನು ಬಾಬು ಕೈಗೆತ್ತಿಕೊಂಡಿದ್ದಾರೆ.

ಇಷ್ಟಕ್ಕೂ ಭೂಗತ ಲೋಕಕ್ಕೆ ಮೊದಲ ಬಾರಿಗೆ ದೊಡ್ಡದಾಗಿ ಕೆಮರಾ ಬೆಳಕು ತೋರಿಸಿದ್ದು ಇದೇ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು. ಅವರ 'ಅಂತ" ಆ ಹೊತ್ತು ಕನ್ನಡ ಚಿತ್ರರಂಗದಲ್ಲಿ ಸಂಚಲನೆಯನ್ನೇ ಮೂಡಿಸಿತ್ತು. ಆನಂತರ 'ಬಂಧನ, ಮುತ್ತಿನಹಾರ"ಗಳಂತಹ ಸದಭಿರುಚಿಯ ಚಿತ್ರಗಳತ್ತ ಬಾಬು ಹೊರಳಿದರು. ಅದೇ ಬಾಬು ಮಾಡಿದ 'ಕುರಿಗಳು" ಅಂತಹ ಸಿಲ್ಲಿ (ಅವರೇ ಒಪ್ಪಿಕೊಂಡಂತೆ) ಸಿನಿಮಾವನ್ನು ಕೂಡ ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ. ಈ ರೂಪಾಂತರಗಳ ಬಾಬು ಈಗ ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ. ಕೊತ್ವಾಲ ತಲೆಯಲಿದ್ದಾನೆ.

ಕೊತ್ವಾಲನ ಜೊತೆಗೆ ಕುರಿಗಳು ತರದ್ದೇ ಮತ್ತೊಂದು ಹಾಸ್ಯಚಿತ್ರವನ್ನು ನಿರ್ಮಿಸಲು ಬಾಬು ನಿರ್ಧರಿಸಿದ್ದಾರೆ. ಹೊಸ ಚಿತ್ರ ಕುರಿಗಳು ಭಾಗ- 2 ಅಲ್ಲದಿದ್ದರೂ ಕುರಿಗಳ ಮಂದೆಯೇ ಇಲ್ಲೂ ಪುನರಾವರ್ತನೆಯಾಗುವ ಸಂಭವವಿದೆ. ಇನ್ನು ಬಾಬು ಅವರ ಮೂರನೇ ಚಿತ್ರಕ್ಕೆ ಶಿವರಾಜ್‌ಕುಮಾರ್‌ ಡೇಟ್ಸ್‌ ಸಿಕ್ಕಿದೆ. ಅಲ್ಲಿಗೆ ಬಾಬು ಅವರೀಗ ಪೂರ್ಣ ಪ್ರಮಾಣದ ಉದ್ಯೋಗಿ.

English summary
Babu and Jai Jagadish have 3 new projects at Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada