Kousalya Supraja Rama: ಶಶಾಂಕ್ - ಕೃಷ್ಣ ಹಿಟ್ ಸಿನಿಮಾಗೆ ಬಂತು ತಮಿಳು ರಿಮೇಕ್ ಬೇಡಿಕೆ!
ಕಳೆದ ತಿಂಗಳ ಕೊನೆಯ ಶುಕ್ರವಾರ ಕನ್ನಡದಲ್ಲಿ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಶನ್‌ನ 'ಕೌಸಲ್ಯಾ ಸುಪ್ರಜಾ ರಾಮ' ಹಿಟ್ ಲಿಸ್ಟ್ ಸೇರಿದ್ದು, ಚಿತ್ರ ಯಶಸ್ವಿಯಾಗಿ ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ. ಮಾಡರ್ನ್ ಡೇ ಲವ್ ಸ್ಟೋರಿಗೆ ಮದರ್ ಸೆಂಟಿಮೆಂಟ್ ಟಚ್ ಕೊಟ್ಟಿರುವ ನಿರ್ದೇಶಕ ಶಶಾಂಕ್ ಕುಟುಂಬ ಸಮೇತರಾಗಿ ಸಿನಿ ರಸಿಕರು ಥಿಯೇಟರ್‌ಗೆ ಹಾಜರಾಗುವಂತೆ ಮಾಡಿದ್ದಾರೆ.
ಈ ಪರಿಣಾಮ ಕೌಸಲ್ಯಾ ಸುಪ್ರಜಾ ರಾಮ ಚಿತ್ರ ಪರಭಾಷೆಯ ದೊಡ್ಡ ಸಿನಿಮಾಗಳಾದ ಜೈಲರ್, ಗದರ್ 2 ಹಾಗೂ ಓ ಮೈ ಗಾಡ್ 2 ಅಬ್ಬರದ ನಡುವೆಯೂ ಗೆದ್ದು ನಿಂತಿದೆ. ಹೀಗೆ ರಾಜ್ಯದ ಸಿನಿ ರಸಿಕರ ಮನ ಗೆದ್ದಿರುವ ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ತಮಿಳು ರಿಮೇಕ್ ಹಕ್ಕಿಗೆ ಇದೀಗ ಬೇಡಿಕೆ ಕೇಳಿಬಂದಿದೆ. ಹೌದು, ತಮಿಳಿನ ಸ್ಟಾರ್ ನಟರಲ್ಲಿ ಓರ್ವರಾದ ಶಿವ ಕಾರ್ತಿಕೇಯನ್ ಕೌಸಲ್ಯಾ ಸುಪ್ರಜಾ ರಾಮ ತಮಿಳು ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಚಿತ್ರದ ಒನ್‌ಲೈನ್ ಸ್ಟೋರಿ ಏನು?
ಚಿಕ್ಕ ವಯಸ್ಸಿನಿಂದಲೇ ಅಪ್ಪ ಹೇಳಿಕೊಡುವ ಪುರುಷತ್ವದ ಪಾಠ ಕೇಳಿ ಬೆಳೆಯುವ ನಾಯಕ ಹೇಗೆ ಗಂಡು ಎಂಬ ಅಹಂನಿಂದ ಸಂಬಂಧಗಳ ಮೌಲ್ಯ ತಿಳಿಯದೇ ಹೇಗೆ ಬದುಕುತ್ತಾನೆ, ಲವ್ ಲೈಫ್ ಅನ್ನು ಹೇಗೆ ಹಾಳು ಮಾಡಿಕೊಳ್ತಾನೆ ಹಾಗೂ ಬಳಿಕ ಹೇಗೆ ಅದನ್ನು ಅರಿತು ಬದಲಾಗ್ತಾನೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಚಿತ್ರದ ಕಥೆ ಏನು?
ಒನ್‌ಲೈನ್ ಸ್ಟೋರಿಯಲ್ಲಿ ಹೇಳಿದಂತೆ ನಾಯಕ ರಾಮ್ ತನ್ನ ತಂದೆ ಹೇಳಿಕೊಟ್ಟಂತೆ ಗಂಡು ಎಂಬ ಅಹಂನೊಂದಿಗೆ ಕಾಲೇಜು ಜೀವನದವರೆಗೂ ಬಂದಿರುತ್ತಾನೆ. ಆ ವೇಳೆ ಆಗುವ ನಾಯಕಿ ಶಿವಾನಿ ಪರಿಚಯದಿಂದ ಹುಡುಗಿಯರೆಂದರೆ ಆಗದ ನಾಯಕ ರಾಮ್ ಪ್ರೀತಿಯಲ್ಲಿ ಬೀಳುತ್ತಾನೆ. ಈ ಪ್ರೀತಿಯೂ ಸಹ ನಾಯಕನ ನಾನು ಗಂಡು ಎಂಬ ಅಹಂಕಾರಕ್ಕೆ ಸಿಲುಕಿ ಹಾಳಾಗುತ್ತೆ. ಬಳಿಕ ನಾಯಕ ತನ್ನ ತಂದೆ - ತಾಯಿ ಆರಿಸಿದ ಹುಡುಗಿಯನ್ನೇ ಮದುವೆಯಾಗ್ತಾನೆ. ಹೀಗೆ ಒಲ್ಲದ ಮನಸ್ಸಿನಿಂದ ನಿರ್ದಿಷ್ಟ ಕಾರಣವೊಂದಕ್ಕೆ, ಅಹಂ ಪಕ್ಕಕ್ಕಿಟ್ಟು ಮದುವೆಯಾಗುವ ನಾಯಕನ ಜೀವನ ಸರಿ ಹೋಗುತ್ತಾ ಅಥವಾ ಮತ್ತೆ ತನ್ನ ಅಹಂ ಅನ್ನು ಮುಂದುವರೆಸುತ್ತಾನಾ ಎಂಬುದೇ ಚಿತ್ರದ ಕಥೆ.
ಹೃದಯ ಮುಟ್ಟುವ ಸಂಬಂಧಗಳ ಮೌಲ್ಯದ ಪಾಠ: ನಾಯಕನಿಗೆ ತನ್ನ ತಾಯಿಯ ಕುರಿತು ಆಗುವ ಆತ್ಮಾವಲೋಕನ ಹಾಗೂ ಆ ಸನ್ನಿವೇಶದಲ್ಲಿ ಬರುವ ದೃಶ್ಯಗಳು ಮತ್ತು ಸಂಭಾಷಣೆಗಳು ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಅಂತ್ಯದಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಏನೇ ಸಮಸ್ಯೆ ಬಂದರೂ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಸಂದೇಶ ಸಹ ಸಿನಿ ರಸಿಕರ ಮನ ಗೆದ್ದಿದೆ.
ಒಟ್ಟಿನಲ್ಲಿ ಕೌಸಲ್ಯ ಸುಪ್ರಜ ರಾಮ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಲ್ಲ ಚಿತ್ರವಾಗಿದ್ದು, ಒಂದೊಮ್ಮೆ ಸಿನಿಮಾವನ್ನು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಬಹುದಾಗಿದೆ.


Click it and Unblock the Notifications











