ಉಪ್ಪಿ 'UI' ಚಿತ್ರದ ಐಟಂ ಸಾಂಗ್‌ನಲ್ಲಿ ಸನ್ನಿ ಅಥವಾ ನಿಧಿ? ನಿರ್ಮಾಪಕರು ಹೇಳಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ 'UI' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಹಾಗೂ ಗ್ರಾಫಿಕ್ಸ್ ವರ್ಕ್ ಭರದಿಂದ ಸಾಗುತ್ತಿದೆ. ಬಹಳ ದಿನಗಳ ನಂತರ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಸಹಜವಾಗಿಯೇ 'UI' ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.
ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ 'UI' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಎಡಿಟಿಂಗ್ ಟೇಬಲ್‌ನಲ್ಲಿ ಇರುವ ಸಂಗತಿಯನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಖುದ್ದು ಉಪೇಂದ್ರ ಎಡಿಟಿಂಗ್ ಟೇಬಲ್‌ನಲ್ಲಿ ಕೂತು ಎಡಿಟಿಂಗ್ ಮಾಡಿಸುತ್ತಿದ್ದ ಸಣ್ಣ ವಿಡಿಯೋ ವೈರಲ್ ಆಗಿತ್ತು. ಈ ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚು ಇದ್ದು ಒಟ್ಟೊಟ್ಟಿಗೆ ಆ ಕೆಲಸವೂ ನಡೀತಿದೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಹಾಗೂ ಮೊಕೊ ಬೋಟ್ ಕ್ಯಾಮರಾಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

ಹೀರೊ ಆದ ಬಳಿಕ ಉಪ್ಪಿ ನಿರ್ದೇಶನ ಮಾಡುವುದು ಕಮ್ಮಿ ಆಯಿತು. ಆದರೂ ಆಗೊಮ್ಮೆ ಈಗೊಮ್ಮೆ ಆಕ್ಷನ್ ಕಟ್ ಹೇಳುತ್ತಾರೆ. ಉಪ್ಪಿ-2 ನಂತರ 'UI' ಸಿನಿಮಾ ಕೈಗೆತ್ತಿಕೊಂಡಿದ್ದು ಟೈಟಲ್‌ನಿಂದಲೇ ಕುತೂಹಲ ಕೆರಳಿಸಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಕಥೆ ಏನು ಅನ್ನೋದನ್ನು ಊಹಿಸೋದು ಕಷ್ಟ ಬಿಡಿ. ಸದ್ಯ ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ಚರ್ಚೆ ಶುರುವಾಗಿದೆ.
'UI' ಚಿತ್ರದ ಐಟಂ ಸಾಂಗ್
ಕಮರ್ಷಿಯಲ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಕಾಮನ್ ಎನ್ನುವಂತಾಗಿಬಿಟ್ಟಿದೆ. ಉಪ್ಪಿ ಸಿನಿಮಾಗಳಲ್ಲೂ ಇಂತಹ ಸಾಂಗ್‌ಗಳನ್ನು ನೋಡಿದ್ದೇವೆ. ಆದರೆ ರಿಯಲ್ ಸ್ಟಾರ್ ಅದಕ್ಕೆ ಬೇರೆ ಸ್ವರೂಪವೇ ಇರುತ್ತದೆ. ಲಿರಿಕ್ಸ್, ಮ್ಯೂಸಿಕ್ ಪ್ರತಿ ವಿಚಾರದಲ್ಲೂ ವಿಭಿನ್ನತೆ ಇರುತ್ತದೆ. 'UI' ಅಜನೀಶ್ ಲೋಕನಾಥ್ ಸ್ಪೆಷಲ್ ಟ್ಯೂನ್ ರೆಡಿ ಮಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಸಾಂಗ್ ಶೂಟಿಂಗ್ ನಡೆಯಲಿದೆ.
ಸನ್ನಿ ಅಥವಾ ನಿಧಿ?
'UI' ಸಿನಿಮಾ ಸ್ಪೆಷಲ್ ಸಾಂಗ್ ಏನೋ ಸರಿ. ಆದರೆ ರಿಯಲ್ ಸ್ಟಾರ್ ಪಕ್ಕ ಬಿಂದಾಸ್ ಆಗಿ ಕುಣಿಯೋದು ಯಾರು? ಎನ್ನುವ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಅಥವಾ ನಿಧಿ ಸುಬ್ಬಯ್ಯ ಚಿತ್ರದಲ್ಲಿ ಹೆಜ್ಜೆ ಹಾಕುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

ಕೆ. ಪಿ ಶ್ರೀಕಾಂತ್ ಪ್ರತಿಕ್ರಿಯೆ
ಬಹು ನಿರೀಕ್ಷಿತ 'UI' ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಇರಲಿದೆ. ಆದರೆ ಇನ್ನು ಟ್ಯೂನ್ ಸಿದ್ಧವಾಗಿಲ್ಲ. ಒಮ್ಮೆ ಟ್ಯೂನ್ ಸಿಕ್ಕಿದ ಮೇಲೆ ಯಾರು ಹೆಜ್ಜೆ ಹಾಕಬೇಕು ಎನ್ನುವ ಬಗ್ಗೆ ಉಪ್ಪಿ ಸರ್ ನಿರ್ಧಾರ ಕೈಗೊಳ್ಳುತ್ತಾರೆ. ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಈಗಾಗಲೇ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿದು ಆಗಿದೆ. ಹಾಗಾಗಿ ಬೇರೆಯವರು ಹೆಜ್ಜೆ ಹಾಕುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ಸಾಂಗ್ ಚಿತ್ರೀಕರಣವಾಗುತ್ತದೆ. ಆಗ ಯಾರು ಅನ್ನೋದು ಗೊತ್ತಾಗುತ್ತದೆ" ಎಂದಿದ್ದಾರೆ.
ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್
ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ 'UI' ಚಿತ್ರದ ತಾರಾಗಣದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಥೀಮ್ ಪೋಸ್ಟರ್‌ನಿಂದಲೇ ಉಪ್ಪಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವಂತೆ ಮಾಡಿದ್ದರು. ಇನ್ನು ವಿಭಿನ್ನ ಟೈಟಲ್ ಕೂಡ ಗಮನ ಸೆಳೆದಿತ್ತು. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು ಒಂದು ಸಾಂಗ್ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ವರ್ಷವೇ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











