ಇತ್ತ KCC.. ಅತ್ತ CCL ಕ್ರಿಕೆಟ್..ನಡುವೆ ದರ್ಶನ್ ಗಲ್ಲಿ ಕ್ರಿಕೆಟ್: ಬೌಂಡರಿಗಾಗಿ ಹಠ ಹಿಡಿದ ದಾಸ
ಒಂದ್ಕಡೆ ಸ್ಯಾಂಡಲ್‌ವುಡ್ ತಾರೆಯರ ಕೆಸಿಸಿ ಕ್ರಿಕೆಟ್ ಟೂರ್ನಿ, ಮತ್ತೊಂದ್ಕಡೆ ವಿವಿಧ ಚಿತ್ರರಂಗದ ತಾರೆಯರ ಸಿಸಿಎಲ್ ಕ್ರಿಕೆಟ್ ಕಲರವ. ಆದರೆ ನಟ ದರ್ಶನ್ ಮಾತ್ರ ಗಲ್ಲಿ ಕ್ರಿಕೆಟ್‌ನಲ್ಲಿ ತಲ್ಲೀನರಾಗಿದ್ದಾರೆ. ಮಡಿಕೇರಿಯಲ್ಲಿ ಸ್ನೇಹಿತರ ಜೊತೆ ಕಾಲ ಕಳೆಯುತ್ತಿರುವ ದರ್ಶನ್ ಕ್ರಿಕೆಟ್ ಆಡುತ್ತಾ ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.
'ಕ್ರಾಂತಿ' ಸಿನಿಮಾ ಪ್ರಮೋಷನ್, ರಿಲೀಸ್, ಬರ್ತ್‌ಡೇ ಅಂತೆಲ್ಲಾ ಬ್ಯುಸಿಯಾಗಿದ್ದ ದರ್ಶನ್ ಈಗ ಬಿಡುವು ಮಾಡಿಕೊಂಡು ಮಡಿಕೇರಿಗೆ ಹೋಗಿದ್ದಾರೆ. ಅಲ್ಲಿನ ಸ್ನೇಹಿತರ ಜೊತೆ ಜಾಲಿಯಾಗಿ ಎಂಜಾಯ್ ಮಾಡ್ತಿದ್ದಾರೆ. ಈ ಹಿಂದೆ ಕೂಡ ಅದೇ ಜಾಗದಲ್ಲಿ ದರ್ಶನ್ ಕ್ರಿಕೆಟ್ ಆಡಿದ್ದ ವಿಡಿಯೋ ವೈರಲ್ ಆಗಿತ್ತು. ಗಲ್ಲಿ ಹುಡುಗರಂತೆ ದರ್ಶನ್ ಬೌಂಡರಿ, ಔಟ್ ಅಂತೆಲ್ಲಾ ಹಠ ಹಿಡಿಯುತ್ತಾ ಕ್ರಿಕೆಟ್ ಆಡಿದ್ದಾರೆ. ಆ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಒಂದು ಎಸೆತವನ್ನು ದರ್ಶನ್ ಲಾಂಗ್ ಹಾಫ್‌ನತ್ತ ಬೀಸಿದ್ದಾರೆ. ಅಲ್ಲಿದ್ದ ಫೀಲ್ಡರ್ ಕೈಗೆ ಬಾಲ್ ತಗುಲಿ ಪಕ್ಕಕ್ಕೆ ಹೋಗಿದೆ. ಕೂಡಲೇ ದರ್ಶನ್ ಓಡಿ ಹೋಗಿ ಅದು ಫೋರ್.. ಫೋರ್ ಎಂದು ವಾದಿಸಿದ್ದಾರೆ. ಬೌಂಡರಿ ಲೈನ್ ಹೊರಗೆ ನಿಂತಿದ್ದೆ ನೀನು ಎಂದು ಹೇಳಿದ್ದಾರೆ. ಕೊನೆಗೂ ಸ್ನೇಹಿತರು ಕೂಡ ಒಪ್ಪಿಕೊಂಡಿದ್ದಾರೆ. ಕೆಲ ಹೊತ್ತು ಬ್ಯಾಟಿಂಗ್ ಮಾಡಿದ ನಟ ದರ್ಶನ್ ನಂತರ ಬೌಲಿಂಗ್ ಮಾಡಿದ್ದಾರೆ. ಒಟ್ನಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಾ ಮಜಾ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ನಡೆದ KCC ಸೀಸನ್ 3 ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದೆ. ಡಾಲಿ ಧನಂಜಯ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ. 6 ತಂಡಗಳಾಗಿ ಸ್ಯಾಂಡಲ್‌ವುಡ್ ಕಲಾವಿದರು ಟೂರ್ನಿಯಲ್ಲಿ ಭಾಗವಹಿಸಿದ್ದರು. ಶುಕ್ರವಾರ, ಶನಿವಾರ ಪಂದ್ಯಗಳು ನಡೆದವು. ದರ್ಶನ್, ಯಶ್ ಬಿಟ್ಟು ಸ್ಟಾರ್ ನಟರೆಲ್ಲಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿ ಖುಷಿಪಟ್ಟಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಡಿ ಬಾಸ್ ಡಿಬಾಸ್ ಎಂದು ಕೂಗಿದ ವಿಡಿಯೋ ವೈರಲ್ ಆಗಿತ್ತು.
ಸುದೀಪ್, ಉಪೇಂದ್ರ, ಶಿವರಾಜ್‌ಕುಮಾರ್, ಧನಂಜಯ, ಗಣೇಶ್, ಧ್ರುವ ಸರ್ಜಾ 6 ತಂಡಗಳ ನೇತೃತ್ವ ವಹಿಸಿಕೊಂಡಿದ್ದರು. ನಟ ದರ್ಶನ್ ಕೆಸಿಸಿ ಟೂರ್ನಿಯಲ್ಲಿ ಆಡದೇ ಇದ್ದರೂ ಅಭಿಮಾನಿಗಳು ಸ್ಟೇಡಿಯಂನಲ್ಲಿ ಡಿಬಾಸ್‌ಗೆ ಜೈಕಾರ ಹಾಕಿ ಸಂಭ್ರಮಿಸಿದರು. ಕೆಲ ದರ್ಶನ್ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನೋಡಲು ಬಂದಿದ್ದರು. ಆದರೆ ತಮ್ಮ ನೆಚ್ಚಿನ ಡಿಬಾಸ್ ಆಡುತ್ತಿಲ್ಲ ಎಂದು ತಿಳಿದು ಬೇಸರಗೊಂಡರು.

ಗಣರಾಜ್ಯೋತ್ಸವ ದಿನ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಸಿನಿಮಾ ಕಲೆಕ್ಷನ್ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸಕ್ಸಸ್ ಮೀಟ್‌ನಲ್ಲಿ ಅದಕ್ಕೆ ತಿರುಗೇಟು ನೀಡಿದ್ದರು. ಇನ್ನು ಸಿನಿಮಾ ರಿಲೀಸ್ ಆಗಿ 28 ದಿನಕ್ಕೆ ಓಟಿಟಿಗೆ ಬಂದಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೂ ಕೂಡ ಕೆಲವೆಡೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆದಿದೆ.
'ಕ್ರಾಂತಿ' ನಂತರ ದರ್ಶನ್ ಮೂರ್ನಾಲ್ಕು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ನಟಸುತ್ತಿದ್ದಾರೆ. ಈ ಚಿತ್ರದಲ್ಲಿ 70ರ ದಶಕದ ನೈಜ ಘಟನೆಯನ್ನು ಹೇಳಲಾಗುತ್ತಿದೆ. ದರ್ಶನ್ ಲುಂಗಿ ಉಟ್ಟು ಕತ್ತಿ ಹಿಡಿದು 'ಕಾಟೇರ' ಆಗಿ ದರ್ಶನ ಕೊಟ್ಟಿದ್ದಾರೆ. ರಾಧನಾ ರಾಮ್ ನಾಯಕಿಯಾಗಿ ಚಿತ್ರದಲ್ಲಿ ನಟಿಸ್ತಿದ್ದು, ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.


Click it and Unblock the Notifications











