2023ರ ಜನವರಿಯಲ್ಲಿ ರಿಲೀಸ್ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಿದು!
ಕಳೆದ ವರ್ಷ ಸಾಲು ಸಾಲು ಚಿತ್ರಗಳು ನೂರು ಕೋಟಿ ಕ್ಲಬ್ ಸೇರುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದವು. ಹೀಗೆ ಕಲೆಕ್ಷನ್ ವಿಚಾರದಲ್ಲಿ ಸುವರ್ಣ ವರ್ಷವನ್ನು ಕಂಡ ಭಾರತ ಸಿನಿಮಾ ಕ್ಷೇತ್ರ 20230ರಲ್ಲಿಯೂ ಸಹ ಅಂತಹ ಕಲೆಕ್ಷನ್ ನಡೆಯಲಿದೆ ಎಂಬ ಮುನ್ಸೂಚನೆಯನ್ನು ಮೊದಲ ತಿಂಗಳಿನಲ್ಲಿಯೇ ನೀಡಿದೆ. ಹೌದು, ಈ ವರ್ಷದ ಜನವರಿ ತಿಂಗಳಿನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡ ತೆಲುಗು ಹಾಗೂ ತಮಿಳಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಒಳ್ಳೆಯ ಆರಂಭವನ್ನು ಕಟ್ಟುಕೊಟ್ಟಿವೆ.
ಇದರ ಬೆನ್ನಲ್ಲೇ ಬಿಡುಗಡೆಗೊಂಡ ಹಿಂದಿಯ ಪಠಾಣ್ ಚಿತ್ರವೂ ಸಹ ಮೊದಲ ದಿನವೇ ದಾಖಲೆಯ 106 ಕೋಟಿ ಗಳಿಕೆ ಮಾಡುವ ಮೂಲಕ ಅಬ್ಬರಿಸಿದೆ. ಇನ್ನು ಪಠಾಣ್ ಚಿತ್ರ ಬಿಡುಗಡೆಗೊಂಡ ಮಾರನೇ ದಿನ ಬಿಡುಗಡೆಗೊಂಡ ಕನ್ನಡದ ಚಾಲೆಂಜಿಂಗ್ ಸ್ಟಾರ್ ನಟನೆಯ ಕ್ರಾಂತಿ ಚಿತ್ರವೂ ಸಹ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿದೆ.
ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ದರ್ಶನ್ ನಟನೆಯ ಕ್ರಾಂತಿ ಮಾತ್ರವಲ್ಲದೇ ಶಾರುಖ್ ಖಾನ್ ನಟನೆಯ ಪಠಾಣ್, ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳೂ ಸಹ ಬಿಡುಗಡೆ ದಿನ ಭರ್ಜರಿ ಕಲೆಕ್ಷನ್ ಮಾಡಿ ಒಳ್ಳೆಯ
ಆರಂಭವನ್ನು ಪಡೆದುಕೊಂಡಿವೆ. ಸದ್ಯ 2023ರ ಮೊದಲ ತಿಂಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ತಿಂಗಳು ಬಿಡುಗಡೆಯಾದ ಎಲ್ಲಾ ಚಿತ್ರಗಳ ಪೈಕಿ ರಾಜ್ಯದಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಯಾವುದು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬಿಡುಗಡೆ ದಿನ ಅತಿಹೆಚ್ಚು ಗಳಿಸಿದ ಚಿತ್ರ ಕ್ರಾಂತಿ
ಇನ್ನು ಈ ವರ್ಷದ ಸಂಕ್ರಾಂತಿ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ವಿಜಯ್ ನಟನೆಯ ವಾರಿಸು ಚಿತ್ರ ರಿಲೀಸ್ ದಿನ ಕರ್ನಾಟಕದಲ್ಲಿ 5.65 ಕೋಟಿ ಗಳಿಕೆ ಮಾಡುವುದರ ಮೂಲಕ ರಾಜ್ಯದಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನಿಸಿಕೊಂಡಿತು. ಬಳಿಕ ಬಿಡುಗಡೆಗೊಂಡ ಶಾರುಖ್ ಖಾನ್ ನಟನೆಯ ಪಠಾಣ್ 6.5 ಕೋಟಿ ಕಲೆಕ್ಷನ್ ಮಾಡುವ ಮೂಲಕ ವಾರಿಸು ಚಿತ್ರವನ್ನು ಹಿಂದಿಕ್ಕಿ ಈ ವರ್ಷ ರಾಜ್ಯದಲ್ಲಿ ರಿಲೀಸ್ ದಿನ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಆದರೆ ಮಾರನೇ ದಿನ ಬಿಡುಗಡೆಗೊಂಡ ಕ್ರಾಂತಿ ಚಿತ್ರ 12.85 ಕೋಟಿ ರೂಪಾಯಿಗಳನ್ನು ಮೊದಲ ದಿನ ಗಳಿಸುವ ಮೂಲಕ ಈ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ರಿಲೀಸ್ ದಿನ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿತು.

ಅತಿಹೆಚ್ಚು ಗಳಿಸಿದ ಚಿತ್ರಗಳ ಟಾಪ್ 6 ಪಟ್ಟಿ
ಈ ವರ್ಷದ ಜನವರಿ ತಿಂಗಳಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಮೊದಲ ದಿನ ಅತಿಹೆಚ್ಚು ಗಳಿಸಿದ ಚಿತ್ರಗಳ ಟಾಪ್ 6 ಪಟ್ಟಿ ಹೀಗಿದೆ..
1. ಕ್ರಾಂತಿ - 12.85 ಕೋಟಿ ರೂಪಾಯಿ
2. ಪಠಾಣ್ - 6.5 ಕೋಟಿ ರೂಪಾಯಿ
3. ವಾರಿಸು - 5.65 ಕೋಟಿ ರೂಪಾಯಿ
4. ತುನಿವು - 4.77 ಕೋಟಿ ರೂಪಾಯಿ
5. ವೀರಸಿಂಹ ರೆಡ್ಡಿ - 2.87 ಕೋಟಿ ರೂಪಾಯಿ
6. ವಾಲ್ತೇರು ವೀರಯ್ಯ - 2.34 ಕೋಟಿ ರೂಪಾಯಿ

ವಾರಾಂತ್ಯದ ಕಲೆಕ್ಷನ್‌ನಲ್ಲೂ ಕ್ರಾಂತಿ ಮುಂದು
ಇನ್ನು ಕರ್ನಾಟಕ ವಾರಾಂತ್ಯದ ಕಲೆಕ್ಷನ್‌ನಲ್ಲಿ ಒಂದು ದಿನದ ಅಂತರದಲ್ಲಿ ಬಿಡುಗಡೆಯಾದ ಕ್ರಾಂತಿ ಹಾಗೂ ಪಠಾಣ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕ್ರಾಂತಿ ಚಿತ್ರ ಮೊದಲ ವಾರಾಂತ್ಯಕ್ಕೆ 25 ಕೋಟಿ ರೂಪಾಯಿ ಗಳಿಕೆ ಮಾಡಿದರೆ, ಪಠಾಣ್ ಮೊದಲ ವಾರಾಂತ್ಯಕ್ಕೆ ಕರ್ನಾಟಕದಲ್ಲಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ವಾರಾಂತ್ಯದ ಕಲೆಕ್ಷನ್‌ನಲ್ಲಿಯೂ ಸಹ ಕ್ರಾಂತಿ ಚಿತ್ರವೇ ಮುನ್ನಡೆ ಕಾಯ್ದುಕೊಂಡಿದೆ.


Click it and Unblock the Notifications











