ಅಪ್ಪು ಹುಟ್ಟುಹಬ್ಬಕ್ಕೆ ಕ್ರಾಂತಿ ಚಿತ್ರತಂಡದ ಸದಸ್ಯರು ವಿಶ್ ಮಾಡಿದ್ದು ಹೀಗೆ

ನಿನ್ನೆ ( ಮಾರ್ಚ್ 17 ) ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ 48ನೇ ಹುಟ್ಟುಹಬ್ಬ. ಪುನೀತ್ ರಾಜ್‌ಕುಮಾರ್ ನಿಧನದ ನಂತರ ಜರುಗಿದ ಎರಡನೇ ಹುಟ್ಟುಹಬ್ಬದ ಕಾರ್ಯಕ್ರಮ ಇದಾಗಿದ್ದು, ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಅವರ ಜನ್ಮದಿನದಂದು ಕನ್ನಡ ಚಿತ್ರರಂಗದ ಕಲಾವಿದರು ನೆನಪಿಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಜತೆಗೆ ತಾವು ಇದ್ದ ಫೋಟೊಗಳನ್ನು ಹಂಚಿಕೊಂಡಿರುವ ಚಿತ್ರರಂಗದ ಸದಸ್ಯರು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡು ಟ್ವೀಟ್ ಮಾಡಿ ಬೇಸರವನ್ನು ಹೊರಹಾಕಿದ್ದಾರೆ. ಇನ್ನು ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರ ಕ್ರಾಂತಿ ತಂಡದ ಸದಸ್ಯರು ಸಹ ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಹೌದು, ಕ್ರಾಂತಿ ಚಿತ್ರತಂಡದ ಸದಸ್ಯರಾದ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ನಟಿ ರಚಿತಾ ರಾಮ್ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಶುಭಕೋರಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಪುನೀತ್ ರಾಜ್‌ಕುಮಾರ್ ಅವರ ಬಾಲ್ಯದ ಫೋಟೊವನ್ನು ಟ್ವೀಟ್ ಮಾಡಿದ್ದು, ದೊಡ್ಡ ಹೃದಯ ಇರುವ ಅದ್ಭುತ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಕ್ರಾಂತಿ ಚಿತ್ರತಂಡದ ನಿರ್ಮಾಪಕಿ ಶೈಲಜಾ ನಾಗ್ ಸಹ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಅವರನ್ನು ನೆನೆದಿದ್ದು ರಾಜಕುಮಾರ ಚಿತ್ರದ ಫೋಟೊವೊಂದನ್ನು ಹಂಚಿಕೊಂಡು ಪುನೀತ್ ರಾಜ್ ಕುಮಾರ್ ಸರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕ್ರಾಂತಿ ಚಿತ್ರತಂಡದ ಈ ಇಬ್ಬರು ಸದಸ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಹುಟ್ಟುಹಬ್ಬದ ದಿನದಂದು ನೆನೆದಿದ್ದಾರೆ. ಇನ್ನು ಪುನೀತ್ ರಾಜ್‌ಕುಮಾರ್ ಕುರಿತಾಗಿ ಕ್ರಾಂತಿ ಚಿತ್ರತಂಡ ಹಲವು ವಿವಾದಗಳಿಗೆ ಒಳಗಾಗಿತ್ತು. ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡನ್ನು ಬಿಡುಗಡೆ ಮಾಡುವಾಗ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಕಿತ್ತಾಟ ಉಂಟಾಗಿದ್ದು ನಿಮಗೆಲ್ಲಾ ತಿಳಿದೇ ಇದೆ. ಆಗಿನಿಂದ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ವೈಮಸ್ಸು ಮುಂದುವರೆಯುತ್ತಲೇ ಬಂದಿದೆ.
ಸದ್ಯ ಕ್ರಾಂತಿ ಚಿತ್ರತಂಡದ ಈ ಇಬ್ಬರು ಸದಸ್ಯರು ಹಾಗೂ ಚಿತ್ರದ ಪ್ರೊಡಕ್ಷನ್ ಹೌಸ್ ಮೀಡಿಯಾ ಹೌಸ್ ಬ್ಯಾನರ್‌ನ ಟ್ವಿಟರ್ ಖಾತೆಯಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಟ್ವೀಟ್ ಮಾಡಲಾಗಿದೆ. ಮೊನ್ನೆಯಷ್ಟೆ ( ಮಾರ್ಚ್ 16 ) ಕ್ರಾಂತಿ ಚಿತ್ರತಂಡ 50 ದಿನಗಳನ್ನು ಪೂರೈಸಿದೆ. ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರ ಅನುಪಮಾ, ದಾವಣಗೆರೆಯ ಅಶೋಕ ಚಿತ್ರಮಂದಿರ ಹಾಗೂ ಬೆಳಗಾವಿಯ ಚಿತ್ರಮಂದಿರಗಳಲ್ಲಿ ಕ್ರಾಂತಿ ಚಿತ್ರ ಐವತ್ತು ದಿನಗಳನ್ನು ಪೂರೈಸಿದೆ.


Click it and Unblock the Notifications











