KRG ಸ್ಟುಡಿಯೋಸ್ ಸಂಸ್ಥೆಗೆ 6ರ ಸಂಭ್ರಮ: TVF ಸಂಸ್ಥೆಯ ಜೊತೆ ಮಹತ್ವದ ಒಪ್ಪಂದ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ವಿತರಣೆಯಲ್ಲೂ KRG ಸ್ಟುಡಿಯೋಸ್ ಮುಂದಿದೆ. ಸದ್ಯ ಈ ಸಂಸ್ಥೆ 6 ವರ್ಷಗಳನ್ನು ಪೂರೈಸಿದೆ. ಇದೇ ಸಂಭ್ರಮದಲ್ಲಿ ಸಿನಿಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ದಕ್ಷಿಣ ಭಾರತದ ಹೆಸರಾಂತ TVF ಮೋಷನ್ ಪಿಕ್ಚರ್ಸ್‌ನೊಂದಿಗೆ ಇದೀಗ KRG ಸ್ಟುಡಿಯೋಸ್ ಈಗ ಕೈ ಜೋಡಿಸಿದೆ.
ಸಂಸ್ಥೆಗೆ 6 ವರ್ಷ ತುಂಬಿದ ಸಂಭ್ರಮದ ಸಲುವಾಗಿ ಈ ಸಹಯೋಗವನ್ನು ಘೋಷಿಸಿದ್ದು ಇನ್ನು ಮುಂದೆ ಎರಡೂ ಸಂಸ್ಥೆಗಳು ವಿಶಿಷ್ಟ ಕಥೆಗಳನ್ನು ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ ಚಿತ್ರಗಳನ್ನು ಸಿನಿ ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ. KRG ಸ್ಟುಡಿಯೋಸ್ ಕಥೆಗಳ ಸೃಜನಾತ್ಮಕ ಬೆಳವಣಿಗೆ, ಅದರ ಕಾರ್ಯಗತಗೊಳಿಸುವಿಕೆ ಮತ್ತು ಎಲ್ಲೆಡೆ ಪ್ರೇಕ್ಷಕರಿಗೆ ಪ್ರಸ್ತುತಿಯಿಂದ ಚಲನಚಿತ್ರ ನಿರ್ಮಾಣದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳಲು ಆಳವಾಗಿ ಬದ್ಧವಾಗಿದೆ. ಹೊಸ ಧ್ವನಿಗಳು, ತಾಜಾ ಮತ್ತು ವೈವಿಧ್ಯಮಯ ಕಥೆ ಹೇಳುವಿಕೆ ಮತ್ತು ಆಳವಾದ, ಅರ್ಥಪೂರ್ಣ ಮೈತ್ರಿಗಳನ್ನು ಪ್ರೋತ್ಸಾಹಿಸುವುದು ಇವರ ಗುರಿಯಾಗಿದೆ.

KRG ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, "6 ವರ್ಷಗಳ ಹಿಂದೆ ನಾವು ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಯ ಚಿತ್ರರಂಗಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಉದ್ದೇಶದಿಂದ ಕೆಆರ್‌ಜಿಯನ್ನು ಆರಂಭಿಸಿದ್ದೇವೆ. ಕಥೆಯ ಬೆಳವಣಿಗೆ, ಉತ್ತಮ ಗುಣಮಟ್ಟದ ನಿರ್ವಹಣಾ ಮತ್ತು ವ್ಯಾಪಕ ವಿತರಣೆಗೆ ಗಮನ ಹರಿಸುತ್ತಾ ಬರ್ತಿದ್ದೇವೆ. ನಮ್ಮ ಪ್ರಯತ್ನವು ಯಾವಾಗಲೂ ವೈವಿಧ್ಯಮಯ ಕಥೆಗಳು ಮತ್ತು ಕಥೆಗಾರರನ್ನು ಪ್ರೋತ್ಸಾಹಿಸುವುದಾಗಿದೆ ಮತ್ತು TVFನೊಂದಿಗೆ ನಮ್ಮ ಸಹಯೋಗವು - ಬಲವಾದ ಮತ್ತು ವಿಶಿಷ್ಟವಾದ ಪಾತ್ರ-ಆಧಾರಿತ ಕಥೆ ಹೇಳುವಿಕೆಯಲ್ಲಿ ಮುಂದುವರಿದಿದೆ. ಇದು ನಮ್ಮ ಹಂಚಿಕೆಯ ದೃಷ್ಟಿಗೆ ಸಾಕ್ಷಿಯಾಗಿದೆ" ಎಂದಿದ್ದಾರೆ.
ಇನ್ನು ಸಹಯೋಗದ ಕುರಿತು TVF ಸಂಸ್ಥಾಪಕರಾದ ಅರುಣಭ್ ಕುಮಾರ್ "ಲೈಟ್ಸ್, ಕ್ಯಾಮೆರಾ, ಎಕ್ಸ್ಪೆರಿಮೆಂಟ್ ಒಟ್ಟಿಗೆ ಭಾರತದಾದ್ಯಂತ ಕಥೆಗಳನ್ನು ಹೇಳುವ ಸ್ಫೂರ್ತಿಯೊಂದಿಗೆ ಮುಂದುವರಿಯುವ ಉದ್ದೇಶದಿಂದ KRG ಜೊತೆ ಕೈ ಜೋಡಿಸಿದ್ದೇವೆ. 'ರತ್ನನ್ ಪ್ರಪಂಚ', 'ಗುರುದೇವ್ ಹೊಯ್ಸಳ'ದಂತಹ ಸೂಪರ್ ಹಿಟ್ ಚಿತ್ರಗಳಿಂದ ಒಳ್ಳೆ ಸಂದೇಶ ಕೊಟ್ಟ ಸ್ಟುಡಿಯೋ ಜೊತೆಗೆ ಪಾಲುದಾರರಾಗಲು ಹೆಮ್ಮೆಯಾಗುತ್ತದೆ. ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಒಳ್ಳೊಳ್ಳೆ ಸಿನಿಮಾ ಮಾಡಲು ಮತ್ತು ಹೆಚ್ಚು ವೈವಿಧ್ಯಮಯ ಕಥೆಗಳನ್ನು ಹೇಳಲು ನಾವು ಸದಾ ಪ್ರಯತ್ನಿಸುತ್ತೇವೆ" ಎಂದಿದ್ದಾರೆ.
TVF ಅಧ್ಯಕ್ಷ ವಿಜಯ್ ಕೋಶಿ ಈ ಕುರಿತು ಮಾತನಾಡಿ, "ನಮ್ಮ ಸಂಸ್ಥೆ ಮೊದಲಿನಿಂದಲೂ ವೀಕ್ಷಕರ ಮನಮುಟ್ಟುವಂತಹ ನೈಜ ಕಥೆಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದೆ. ನಮ್ಮಂತೆಯೇ ಜನರ ಸದಭಿರುಚಿಯನ್ನ ಅರಿತು ಇದುವರೆಗೂ ಒಳ್ಳೆ ಸಂದೇಶ ಇರುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ KRG ಸಂಸ್ಥೆಯ ಜೊತೆ ಕೈ ಜೋಡಿಸಲು ಬಹಳ ಉತ್ಸುಕರಾಗಿದ್ದೇವೆ. ಬೇರೆ ರಾಜ್ಯಗಳಿಂದ ಬಂದಿದ್ದರೂ, ಈ ನಮ್ಮ ಸಿನಿ ಪ್ರೇಮ ಹಾಗೂ ಯಾವುದೋ ಒಂದು ಶಕ್ತಿ ನಮ್ಮನ್ನು ಒಂದುಗೂಡಿಸಿದೆ ಎಂದರೆ ತಪ್ಪಾಗಲ್ಲ" ಎಂದು ವಿವರಿಸಿದ್ದಾರೆ.

ಅಂದಹಾಗೆ 6 ವರ್ಷಗಳಿಂದ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡಿ KRG ಸಂಸ್ಥೆ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಸಂಸ್ಥೆಯನ್ನ ಕಾರ್ತಿಕ್ ಗೌಡ ಹಾಗೂ ತಮ್ಮ ದೀರ್ಘ ಕಾಲದ ಸ್ನೇಹಿತ ಯೋಗಿ ಜಿ. ರಾಜ್ ಹುಟ್ಟುಹಾಕಿದ್ದರು. ವರ್ಷದಿಂದ ವರ್ಷಕ್ಕೆ ಹಿಟ್ ಚಿತ್ರಗಳನ್ನು ಕೊಡುತ್ತಾ ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಿದ್ದಾರೆ. ತಮ್ಮ ಸಿನಿಮಾ, ವೆಬ್ ಸಿರೀಸ್, ವಿಡಿಯೋಗಳಿಂದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ.


Click it and Unblock the Notifications











