ಹಂಸಲೇಖ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ಕೃಷ್ಣರಾಜ್
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಜಾತ್ಯಾತೀತತೆ ಮತ್ತು ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದರು. ಹಾಗೇ ದಲಿತರ ವಿಚಾರವಾಗಿಯೂ ಹಂಸಲೇಖ ಮಾತನಾಡಿದ್ದಾರೆ. ಹೀಗೆ ಮಾತನಾಡುವ ಭರದಲ್ಲಿ ಪೇಜಾವರ ಶ್ರೀಗಳ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಮಾಡಿದ್ದಾರೆ. ಪ್ರಶ್ನೆ ಮಾಡುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗುತ್ತಾರೆ, ಆದರೆ ಅವರ ಮನೆಯಲ್ಲಿ ಮಾಡುವ ಕೋಳಿಸಾರು, ಕುರಿ ರಕ್ತ ಕುಡಿಯಲು ಸಾಧ್ಯವೇ, ಲಿವರ್ ತಿನ್ನುತ್ತಾರ ಎಂದು ಪ್ರಶ್ನಿಸಿದ್ದರು. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಹೀಗಾಗಿ ಸಂಗೀತ ನಿರ್ದೇಶಕ ನಾದ ಬ್ರಹ್ಮ ಪೇಜಾವರ ಶ್ರೀಗಳ ಬಗ್ಗೆ ಹೀಗೆ ಮಾತನಾಡಿದ್ದು ತಪ್ಪು ಎಂದು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೃಷ್ಣರಾಜ್ ಎಂಬುವವರು ದೂರನ್ನು ದಾಖಲಿಸಿದ್ದರು. ಇದೀಗ ಹಂಸಲೇಖ ವಿರುದ್ಧ ನೀಡಿದ್ದ ದೂರನ್ನು ಕೃಷ್ಣರಾಜ್ ಹಿಂಪಡೆದಿದ್ದಾರೆ. ಹಂಸಲೇಖ ಅವರು ಪೇಜಾವರ ಶ್ರೀಗಳಿಗೆ ಅಪಮಾನ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಕೆಲದಿನಗಳ ಹಿಂದೆಯೇ ಹನುಮಂತನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಕೃಷ್ಣರಾಜ್ ಆ ದೂರನ್ನು ಹಿಂಪಡೆದಿದ್ದು "ನಾನು ಬ್ರಾಹ್ಮಣ ಸಂಘದ ದೂರಿಗೆ ಬೆಂಬಲಿಸುತ್ತೇನೆ ಹೀಗಾಗಿ ನನ್ನ ದೂರನ್ನು ಹಿಂಪಡೆದಿದ್ದೇನೆ" ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನು ಹಂಸಲೇಖ ಅವರು ಕೆಲದಿನಗಳ ಹಿಂದೆ ಮೈಸೂರಿನಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮಕ್ಕೆ ತನ್ನ ಪತ್ನಿ ಸಮೇತ ತೆರಳಿದ್ದರು. ಅಲ್ಲಿ ಮಾತನಾಡುವ ಸಂದರ್ಭ ಅಸ್ಪೃಶ್ಯತೆ ಮತ್ತು ಜಾತ್ಯಾತೀತತೆ ಬಗ್ಗೆ ಮಾತನಾಡುವ ಉದ್ದೇಶ ಹಂಸಲೇಖ ಅವರದ್ದಾಗಿತ್ತು. ಹೀಗೆ ಮಾತನಾಡುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಒಬ್ಬ ಮಹಾನ್ ಸಂಗೀತ ನಿರ್ದೇಶಕನಾಗಿ ಹೀಗೆ ಮಾತನಾಡಬಾರದು ಎಂದು ಸಾಕಷ್ಟು ವಿರೋಧಗಳು ವ್ಯಕ್ತವಾದವು. "ಪೇಜಾವರ ಶ್ರೀಗಳು ದಲಿತರ ಮನೆಗೆ ಬಂದಿದ್ದಾರೆ ಎನ್ನುವ ಸುದ್ದಿಯನ್ನು ಇತ್ತೀಚೆಗೆ ನೋಡಿದೆ. ಈ ಸಂದರ್ಭದಲ್ಲಿ ದಲಿತರ ಮನೆಯಲ್ಲಿ ಮಾಡಿದ ಕೋಳಿಸಾರನ್ನು ಸ್ವಾಮಿಗಳು ತಿನ್ನಲು ಆಗುತ್ತಾ? ಹೋಗಲಿ ಕುರಿಯ ರಕ್ತದ ಫ್ರೈ, ಅಥವ ಲಿವರ್ ಕೊಟ್ಟರೆ ಅವರು ತಿನ್ನುತ್ತಾರ? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ?

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಆರ್ ಅಶೋಕ್, ಅಶ್ವತ್ಥನಾರಾಯಣ ಅದನ್ನೆ ಮಾಡುತ್ತಿದ್ದಾರೆ. ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನ ಜೊತೆ ಇರುತ್ತಾನೆ. ಬೆಳಗಾಗುವಷ್ಟರಲ್ಲಿ ವಾಪಸ್ ಆಗಿ ಕಲ್ಲಾಗುತ್ತಾನೆ ಅಂತ ಹೇಳಲಾಗುತ್ತೆ. ಅದರಲ್ಲೇನಿದೆ ದೊಡ್ಡ ವಿಚಾರ? ದಲಿತರನ್ನು ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಕೂರಿಸಿದರೆ ಅದು ದೊಡ್ಡ ವಿಚಾರ. ಇದೆಲ್ಲವೂ ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಬರಬೇಕು. ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ನಮ್ಮ ಮನೆಯ ಲೋಟವನ್ನು ನೀನು ಮುಟ್ಟು ಅದನ್ನು ನಾವು ತೊಳೆಯುತ್ತೇವೆ ಎನ್ನಬೇಕು. ಈಗ ಭಾರತದಲ್ಲಿ ಇಂತಹ ಬೂಟಾಟಿಕೆಗಳು ನಡೆಯುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಂಸಲೇಖ ವಿರುದ್ದ ತೀವ್ರ ಅಸಮಾಧಾನ ಉಂಟಾಗಿತ್ತು. ತದನಂತರದಲ್ಲಿ ಹಂಸಲೇಖ ಅವರು ಸಹ ಬಹಿರಂಗವಾಗಿ ಕ್ಷಮೆ ಕೇಳಿದ್ದರು.


Click it and Unblock the Notifications











