ಬಗಲ್ ಮೇ ಹೈ ದುಷ್ಮನ್ ; ಯಶ್ ಕೆರಿಯರ್ ಧ್ವಂಸ ಮಾಡಲು ಬಾಲಿವುಡ್ ಸ್ಕೆಚ್ ? ಹಾಲಿವುಡ್ ಹೊಂಡದಲ್ಲಿ ಸಿಲುಕಿದ ರಾಕಿ ?
''ಮೊಗ್ಗಿನ ಮನಸು'' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು,''ಕೆ.ಜಿ.ಎಫ್'' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು.
ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ ''ಟಾಕ್ಸಿಕ್'' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲ ಏಕಕಾಲದಲ್ಲಿ ಈ ಚಿತ್ರದ ಚಿತ್ರೀಕರಣ ಇಂಗ್ಲೀಷ್ ಭಾಷೆಯಲ್ಲಿ ಕೂಡ ಮಾಡಲಾಗಿದೆ.

ಇನ್ನು, ತೀರಾ ಇತ್ತೀಚೆಗೆ ಯಶ್ ಹಾಲಿವುಡ್‌ನ ವೇದಿಕೆಗಳಲ್ಲಿ ಮಿಂಚಿದ್ದಾರೆ. ತಮ್ಮ ಅತ್ಯಾಪ್ತ ಸ್ನೇಹಿತ, ಕುಚಿಕೂ, ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಕುಂತು ಹರಟೆ ಹೊಡೆದಿದ್ದಾರೆ. ಮಾತನಾಡ್ತಾ.. ಮಾತನಾಡ್ತಾ.. ''ಟಾಕ್ಸಿಕ್'' ಚಿತ್ರದ ಇಡೀ ಕಥೆಯನ್ನೇ ಹೇಳಿದ್ದಾರೆ. ತಮ್ಮ ಇದೇ ಚಿತ್ರದ ಪ್ರಚಾರರ್ಥ ಪ್ರತಿಷ್ಠಿತ ಅಂತರಾಷ್ಟ್ರೀಯ ಮ್ಯಾಗ್‌ಜಿನ್ ''ವೆರೈಟಿ''ಯ ಕವರ್ ಪೇಜ್‌ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಯಶ್ ಅವರ ಈ ಸಂದರ್ಶನದ ತುಣುಕು, ಮತ್ತು ''ವೆರೈಟಿ''ಯ ಕವರ್ ಪೇಜ್ ನೋಡಿ ನಮ್ಮ ಲೋಕಲ್ ಹುಡುಗ ಗ್ಲೋಬಲ್ ಲೆವಲ್‌ನಲ್ಲಿ ಮಿಂಚ್ತಿದ್ದಾನೆ ಎಂದು ಹಲವು ಕನ್ನಡಿಗರು ಎದೆಯುಬ್ಬಿಸಿದ್ದಾರೆ. ಆದರೆ, ಯಶ್‌ಗೆ ಹಿಡಿದಿರುವ ಈ ಗ್ಲೋಬಲ್ ಹುಚ್ಚಿಂದ ಮುಂದೊಂದು ದಿನ ಇವರ ವೃತ್ತಿ ಬದುಕೇ ಧ್ವಂಸ ಆದರೂ ಅಚ್ಚರಿ ಇಲ್ಲ. ಇಂತಹದ್ದೊಂದು ಬಾಂಬ್‌ನ್ನ ಕಮಲ್ ರಶೀದ್ ಖಾನ್ ಅಲಿಯಾಸ್ ಕೆ.ಆರ್.ಕೆ ಸಿಡಿಸಿದ್ದಾರೆ.
ಹೌದು, ಕೆ.ಆರ್.ಕೆ.. ಬಾಲಿವುಡ್‌ನ ನಿರುದ್ಯೋಗಿ. ಸ್ವಯಂ ಘೋಷಿತ ವಿಮರ್ಶಕ. ಸರಿ ಸುಮಾರು ಒಂದೂವರೆ ದಶಕದ ಹಿಂದೆ ''ದೇಶದ್ರೋಹಿ'' ಎಂಬ ಪರಮ ತೋಪು ಚಿತ್ರವನ್ನು ಮಾಡಿದ್ದೇ ಈ ವ್ಯಕ್ತಿಯ ಸಾಧನೆ.
ಅಲ್ಲಿಂದ.. ಇಲ್ಲಿಯವರೆಗೆ.. ಹಿಂದಿ ಉದ್ಯಮದಲ್ಲಿ ನಯಾ ಪೈಸಾ ಕೆಲಸ ಮಾಡದ ಈ ''ಕೆಆರ್‌ಕೆ'' ಹಿಂದಿ ಚಿತ್ರರಂಗದಲ್ಲಿ ಕಂಡ ಕಂಡವರ ಜೊತೆ ಕಾಲ್ ಕೆರೆದುಕೊಂಡು ಜಗಳಕ್ಕೆ ನಿಲ್ಲುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಖುದ್ದು ಬಾಲಿವುಡ್‌ನವರೇ ಈ ವ್ಯಕ್ತಿಯ ಮುಖಕ್ಕೆ ಮಂಗಳಾರತಿ ಮಾಡಿ ಮೂಲೆ ಗುಂಪು ಮಾಡಿದ್ದಾರೆ. ಆದರೂ ಬುದ್ದಿ ಕಲಿಯದ ಕೆ.ಆರ್.ಕೆ ಸದಾ ಸುದ್ದಿಯಾಗುವುದು ವಿವಾದಗಳಿಂದಲೇ.

ಇಂಥಾ ಕೆ.ಆರ್.ಕೆಗೆ ಮೊದಲಿಂದ ಯಶ್ ಕಂಡರೆ ತುಸು ಹೆಚ್ಚೇ ಪ್ರೀತಿ. ''ಕೆಜಿಎಫ್'' ಚಿತ್ರವನ್ನು ಮೊದಲು ತೆಗಳಿ ಆ ನಂತರ ಬಾಯ್ತುಂಬ ಹೊಗಳಿದ್ದ ಕೆ.ಆರ್.ಕೆ ಆ ನಂತರ ''ಟಾಕ್ಸಿಕ್'' ಚಿತ್ರದ ಪೋಸ್ಟರ್ ಮತ್ತು ಶೀರ್ಷಿಕೆಯ ವ್ಯಂಗ್ಯವಾಡಿದ್ದರು.
ಇಷ್ಟೇ ಅಲ್ಲ ಕೆಲ ತಿಂಗಳ ಹಿಂದೆ 600 ಕೋಟಿಯ ''ಟಾಕ್ಸಿಕ್'' ಬಾಕ್ಸಾಫೀಸ್‌ನಲ್ಲಿ ತೋಪೆದ್ದು ಹೋಗುವುದು ಖಚಿತ ಎಂದಿದ್ದರು. ಈಗ ಮತ್ತೊಮ್ಮೆ ಯಶ್ ಬಗ್ಗೆ ಮತ್ತು ''ಟಾಕ್ಸಿಕ್'' ಚಿತ್ರದ ಬಗ್ಗೆ ಕೆ.ಆರ್. ಕೆ ಮಾತನಾಡಿದ್ದಾರೆ. ಯಶ್ ವೃತ್ತಿ ಬದುಕು ಹಳ್ಳ ಹಿಡಿಸಲು ಬೇರೆ ಯಾರು ಬೇಡ, ನಮಿತ್ ಮಲ್ಹೋತ್ರಾ ಒಬ್ಬ ಸಾಕು ಎಂದಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ದಿನಾಂಕ ಮತ್ತೊಮ್ಮೆ ಮುಂದಕ್ಕೋಗಿದೆ. ಈ ಬಾರಿ ಯಾವತ್ತು ಈ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ವಿಚಾರ ಯಾರೆಂದರೆ ಯಾರಿಗೂ ಗೊತ್ತಿಲ್ಲ. ಖುದ್ದು ಯಶ್‌ಗೆ ಕೂಡ ಈ ವಿಚಾರದಲ್ಲಿ ಸ್ಪಷ್ಟತೆ ಇದ್ದಂತೆ ಇಲ್ಲ.
ಯಾಕೆಂದರೆ ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ನಿರ್ಮಾಣ ಮಾಡಿರುವ ''ರಾಮಾಯಣ'' ಈ ದೀಪಾವಳಿಯಂದು ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ರಜಿನಿಕಾಂತ್ ಅವರನ್ನೊಳಗೊಂಡು ಹಲವು ಸ್ಟಾರ್ ಗಳ ಬೇರೆ ಬೇರೆ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗಲಿವೆ.
ಈ ಹಿನ್ನೆಲೆ ''ಟಾಕ್ಸಿಕ್'' ಚಿತ್ರವನ್ನು ಯಶ್ ಯಾವತ್ತು ಬಿಡುಗಡೆ ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿ ಇದ್ದೇ ಇದೆ. ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಿದರು ಮಾಡಬಹುದು. ಆದರೆ ಆ ಸಾಧ್ಯತೆ ಕೂಡ ಕಡಿಮೆ ಇದೆ ಎನ್ನುವ ಮಾತು ಇದೆ. ಯಾಮಾರಿದರೆ ''ಟಾಕ್ಸಿಕ್'' ದರ್ಶನವಾಗುವುದು ಮುಂದಿನ ವರ್ಷಕ್ಕೇನೆ.
ಹೀಗಿರುವಾಗ ನಮಿತ್ ಮಲ್ಹೋತ್ರಾ ಮೊದಲ ಆದ್ಯತೆ ಸದಾ ಬಾಲಿವುಡ್ ಮತ್ತು ರಾಮನ ಪಾತ್ರಧಾರಿ ರಣಬೀರ್ ಕಪೂರ್ ಮೇಲೆಯೇ ಇರುತ್ತದೆ ಹೊರತು ಯಶ್ ಮೇಲಲ್ಲ ಎಂದು ಕೆಆರ್‌ಕೆ ಪರೋಕ್ಷವಾಗಿ ಹೇಳಿದ್ದಾರೆ. ತಮ್ಮ ''ರಾಮಾಯಣ'' ಚಿತ್ರದ ಲಾಭಕ್ಕೆ ಯಶ್ ನಿರ್ಮಾಣದ ''ಟಾಕ್ಸಿಕ್'' ಚಿತ್ರವನ್ನು ಸೈಡಿಗೆ ತಳ್ಳುವಲ್ಲಿ ನಮಿತ್ ಯಶಸ್ವಿಯಾಗಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಕೆ.ಆರ್.ಕೆ ನಿರ್ಮಾಪಕರು ತಮ್ಮ ಬುದ್ದಿವಂತಿಕೆಯಿಂದ ಹೇಗೆ ನಟರನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎನ್ನುವುದಕ್ಕೆ ಯಶ್ ದೊಡ್ಡ ಉದಾಹರಣೆ ಎಂದು ಹೇಳಿದ್ದಾರೆ.
ಯಶ್ ವೃತ್ತಿ ಬದುಕನ್ನು ಸರ್ವನಾಶ ಮಾಡಲು ನಮಿತ್ ಮಲ್ಹೋತ್ರಾ ವ್ಯವಸ್ಥಿತವಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಿರುವ ಕೆ.ಆರ್.ಕೆ, 2027ರಲ್ಲಿ ಹಾಲಿವುಡ್ ಚಿತ್ರವೊಂದನ್ನು ಬಿಡುಗಡೆ ಮಾಡಿದಂತೆ ದೊಡ್ಡ ಮಟ್ಟದಲ್ಲಿ ''ಟಾಕ್ಸಿಕ್'' ಚಿತ್ರದ ಬಿಡುಗಡೆಗೆ ತಾವು ನೆರವು ಆಗುವುದಾಗಿ ಯಶ್‌ಗೆ ನಮಿತ್ ಮಲ್ಹೋತ್ರಾ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಮುಂದುವರೆದು ಯಶ್‌ಗೆ ಹಾಲಿವುಡ್ ಸ್ಟಾರ್ ನ್ನಾಗಿ ಮಾಡುವುದಾಗಿ ಹೇಳಿರುವ ನಮಿತ್ ಮಲ್ಹೋತ್ರಾ ಭಾರತದ ಮಾರುಕಟ್ಟೆಯ ಆಲೋಚನೆ ಬಿಟ್ಹಾಕಿ, ಹಾಲಿವುಡ್ ಕಡೆ ಗಮನ ಕೊಡುವಂತೆ ಸಲಹೆಯನ್ನು ಕೂಡ ನೀಡಿದ್ದಾರೆ ಎಂದು ಕೆ.ಆರ್.ಕೆ ಹೇಳಿದ್ಧಾರೆ.
ಸದ್ಯ ಈ ಟ್ವಿಟ್ ವೈರಲ್ ಆಗಿದ್ದು ''ಟಾಕ್ಸಿಕ್'' ಪದೇ ಪದೇ ಮುಂದೂಡಲಾದ ಹಿನ್ನೆಲೆ ಹತಾಶಗೊಂಡಿರುವ ಅಭಿಮಾನಿಗಳು, ಕೆ.ಆರ್.ಕೆಯ ಈ ಮಾತಿಂದ ಆತಂಕಕ್ಕೀಡಾಗಿದ್ದಾರೆ. ಒಂದು ಚಿತ್ರಕ್ಕೆ ವರ್ಷಾನುಗಟ್ಟಲೆ ಕಾಯ್ದು ಯಶ್ ಸಮಸಯ ವ್ಯರ್ಥ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದು ಕಡೆ ಯಶ್ ಅವರ ಬುದ್ಧಿವಂತಿಕೆಯ ಮೇಲೆ ಅಪಾರವಾದ ನಂಬಿಕೆ ಹೊಂದಿರುವ ಅಭಿಮಾನಿಗಳು, "ಕೆಜಿಎಫ್-2'' ಮೂಲಕ ಇತಿಹಾಸ ಸೃಷ್ಟಿಸಿದ ಯಶ್ ಯಾರದ್ದೋ ಮಾತಿಗೆ ಮರುಳಾಗುವ ವ್ಯಕ್ತಿಯಲ್ಲ, ಅವರದ್ದೇ ಆದ ದೊಡ್ಡ ಪ್ಲಾನ್ ಇರುತ್ತದೆ ಎಂದು ಕೆಆರ್‌ಕೆಗೆ ತಿರುಗೇಟು ನೀಡುತ್ತಿದ್ದಾರೆ.


Click it and Unblock the Notifications