»   » ಕುಳ್ಳರಲೋಕದಲ್ಲಿ ನಾಲ್ವರೇ ದೊಡ್ಡವರು

ಕುಳ್ಳರಲೋಕದಲ್ಲಿ ನಾಲ್ವರೇ ದೊಡ್ಡವರು

Posted By: Super
Subscribe to Filmibeat Kannada

ದೈತ್ಯಾಕಾರದ ಗಲಿವರ್‌ ಪಾದದ ಉಗುರುಗಳ ನಡುವೆ ಮನುಷ್ಯ ಪ್ರಾಣಿ ಸಿಲುಕಿದೆ. ಅದು ಇರುವೆಯಂತೆ ಕಾಣಿಸುತ್ತದೆ. ಗಲಿವರ್‌ಗೆ ಇದೊಂದು ಚೋದ್ಯದ ಸಂಗತಿ. ಪ್ರೇಕ್ಷಕರ ಕಣ್ಣಿಗೆ ಹಬ್ಬ. ಗಲಿವರ್‌ ಲಿಲ್ಲಿ ಪುಟ್‌ ಕತೆ ಯಾರಿಗೆ ಗೊತ್ತಿಲ್ಲ. ಈಗ ಇಂಥದ್ದೇ ಕಾನ್ಸೆಪ್ಟ್‌ ಇಟ್ಟುಕೊಂಡು ಕನ್ನಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಚಿತ್ರದ ಹೆಸರು ಕುಳ್ಳರಲೋಕ.

ಒಂದು ಸಾವಿರ ಕುಳ್ಳರನ್ನು ಬಳಸಿಕೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿರುವ ದೊಡ್ಡವರು ನಾಲ್ಕೇ ಮಂದಿ. ಕುಳ್ಳರ ಜಗತ್ತಿನ ನೋವು ನಲಿವು, ಪ್ರೇಮ ವಿರಸ, ನಂಬಿಕೆ ಅಪನಂಬಿಕೆ ಇತ್ಯಾದಿಗಳನ್ನು ಬಿಂಬಿಸುವ ಕತೆ ಹೊಂದಿರುವ ಈ ಚಿತ್ರ, ಜಾಗತಿಕ ಚಿತ್ರರಂಗದಲ್ಲೇ ಒಂದು ಹೊಸ ಪ್ರಯೋಗ ಎಂದು ಬಣ್ಣಿಸುತ್ತಾರೆ ನಿರ್ದೇಶಕ ಶರಣ್‌ ದಾವಣಗೆರೆ.

ಈ ಚಿತ್ರಕ್ಕೆ ಕುಳ್ಳರನ್ನು ಕಲೆ ಹಾಕಿದ್ದೇ ಒಂದು ಸಾಹಸದ ಕತೆ. ಚಿತ್ರಕತೆ ಸಿದ್ಧವಾಗೋದಕ್ಕೆ ಒಂದೂವರೆ ವರ್ಷ ಬೇಕಾದರೆ, ಕುಳ್ಳರನ್ನು ಹುಡುಕುವುದಕ್ಕೆ ಎರಡು ತಿಂಗಳು ವ್ಯಯವಾಗಿದೆ. ಆರಂಭದಲ್ಲಿ ಪತ್ರಿಕಾ ಜಾಹೀರಾತನ್ನು ನೀಡಿ ಕುಳ್ಳರನ್ನು ಆಹ್ವಾನಿಸಲಾಗಿತ್ತು. ಸುಮಾರು 750 ಅರ್ಜಿಗಳು ನಿರ್ಮಾಪಕರ ಕಚೇರಿಗೆ ಬಂದು ಬಿದ್ದವು. ಕಾರವಾರ, ಕುಂದಾಪುರ, ದಾಂಡೇಲಿ ಪ್ರದೇಶಗಳಿಂದ ಅತಿ ಹೆಚ್ಚಿನ ಅರ್ಜಿಗಳು ಬಂದವು. ಅವರೆಲ್ಲರೂ ಆಯ್ಕೆಯಾಗಿದ್ದಾರೆ. ಒಂದೇ ಮನೆಯ ಐದು ಕುಳ್ಳರು ತಾರಾಗಣದಲ್ಲಿರುವುದು ವಿಶೇಷ. ಕುಳ್ಳರ ಸರಾಸರಿ ಎತ್ತರ ಎರಡೂವರೆ ಅಡಿಯಿಂದ ಮೂರುವರೆ ಅಡಿ.

ರಾಜಣ್ಣ, ಈಶಣ್ಣ ಮತ್ತು ಶಿರ್ಸಿಯ ಶಾನ್‌ಭಾಗ್‌ ಜತೆಯಾಗಿ ನಿರ್ಮಿಸುತ್ತಿರುವ ಕುಳ್ಳರಲೋಕದಲ್ಲಿ ಹಾಡುಗಳಿವೆ. ಹೊಡೆದಾಟವಿದೆ ಮತ್ತು ಪ್ರೇಮಕತೆಯೂ ಇದೆ. ಕುಳ್ಳರೇ ವಾಸಿಸುತ್ತಿರುವ ಜಗತ್ತೊಂದಕ್ಕೆ ಸಂಶೋಧನಾ ತಂಡವೊಂದು ಬರುತ್ತದೆ. ಅವರ ಮೂಲಕ ಕುಳ್ಳರು ಆಧುನಿಕ ಜಗತ್ತಿನ ಪರಿಚಯ ಮಾಡಿಕೊಳ್ಳುತ್ತಾರೆ. ಸಂಶೋಧನಾ ತಂಡದ ಮುಖ್ಯಸ್ಥ ಪ್ರೊಫೆಸರ್‌ ಪಾತ್ರದಲ್ಲಿ ವಿನೋದ್‌ ಆಳ್ವ ನಟಿಸುತ್ತಾರೆ. ಕುಳ್ಳರ ಎರಡು ಬಣಗಳ ನಡುವಣ ಜಗಳವನ್ನು ಪರಿಹರಿಸುವ ಕೆಲಸವೂ ಅವರದೇ.

ಸಂಪೂರ್ಣ ಹೊಸಬರಿಂದ ತುಂಬಿರುವ ಕುಳ್ಳರಲೋಕದ ಚಿತ್ರೀಕರಣ ಶಿರ್ಸಿ ಸಮೀಪ ನಡೆಯಲಿದೆ. ರಾಜ್ಯದಲ್ಲಿರುವ ಕುಳ್ಳರ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡುವವರು ಶಿರ್ಸಿಗೆ ಹೋಗಬಹುದು. ಕುಳ್ಳರ ಪುಟ್ಟ ಪ್ರಪಂಚದತ್ತ ಇಣುಕಿ ನೋಡಬಹುದು.

English summary
1000 dwarfs to act in a kannada movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada