'ಪೈಲ್ವಾನ್' ಟೀಸರ್ ನೋಡಿ ಬೆರಗಾದ ಕುಮಾರ್ ಬಂಗಾರಪ್ಪ
ನಟ ಕಿಚ್ಚ ಸುದೀಪ್ ಅವರ 'ಪೈಲ್ವಾನ್' ಸಿನಿಮಾದ ಟೀಸರ್ ಬಗ್ಗೆ ಬೇರೆ ಬೇರೆ ಭಾಷೆಗಳ ಸ್ಟಾರ್ ಗಳು ಟ್ವೀಟ್ ಮಾಡುತ್ತಿದ್ದಾರೆ. ಈಗ ಒಂದು ಹಂತ ಮೇಲಕ್ಕೆ ಹೋಗಿರುವ 'ಪೈಲ್ವಾನ್' ರಾಜಕಾರಣಿಗಳನ್ನು ಸಹ ತಲುಪಿದೆ.
ನಟ ಹಾಗೂ ಶಾಸಕ ಕುಮಾರ್ ಬಂಗಾರಪ್ಪ 'ಪೈಲ್ವಾನ್' ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಅದ್ಬುತ ಹಾಗೂ ಅದ್ದೂರಿಯಾದ ಟೀಸರ್. ನಿಮ್ಮ ಡೆಡಿಕೇಶನ್ ಗೆ ಬೆಲೆ ಸಿಕ್ಕಿದೆ. ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಸಿನಿಮಾ ಯಶಸ್ವಿಯಾಗಲಿ.'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕುಮಾರ್ ಬಂಗಾರಪ್ಪ ಹಾಗೂ ಸುದೀಪ್ ಒಳ್ಳೆಯ ಒಡನಾಟ ಹೊಂದಿದ್ದು, ಇತ್ತೀಚಿಗಷ್ಟೆ ಸುದೀಪ್ ಜೊತೆಗಿನ ಕುಮಾರ್ ಬಂಗಾರಪ್ಪ ಅವರ ಮಗ ಭೇಟಿ ಮಾಡಿದ್ದರು.
ಅಂದಹಾಗೆ, ನಿನ್ನೆ ಬಿಡುಗಡೆಯಾದ 'ಪೈಲ್ವಾನ್' ಟೀಸರ್ ಇಂದು ಎರಡು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಕೇವಲ 3 ಗಂಟೆ 58 ನಿಮಿಷಕ್ಕೆ ಟೀಸರ್ 1 ಮಿಲಿಯನ್ ದಾಟಿದ ಹೆಗ್ಗಳಿಕೆ ಪಡೆದುಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್, ರಿತೇಶ್ ದೇಶ್ ಮುಖ್, ಕಾಲಿವುಡ್ ನಟ ಧನುಷ್, ಪ್ರಭುದೇವ, ಟಾಲಿವುಡ್ ನಟ ಸಿದ್ಧಾರ್ಥ್ ಹೀಗೆ ಅನೇಕರು ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
'ಹೆಬ್ಬುಲಿ' ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಕಿಚ್ಚನ ಜೋಡಿಯಾಗುವ ಭಾಗ್ಯವನ್ನು ಆಕಾಂಕ್ಷ ಸಿಂಗ್ ಪಡೆದುಕೊಂಡಿದ್ದಾರೆ.


Click it and Unblock the Notifications











