ನಿಖಿಲ್ ಕುಮಾರ್ ಬಿಟ್ಟು ಡಬ್ಬಿಂಗ್ ಮುಗಿಸಿದ 'ಕುರುಕ್ಷೇತ್ರ'
ವೃಷಭಾದ್ರಿ ಪ್ರೋಡನ್ಸ್ ಲಾಂಚನದಡಿಯಲ್ಲಿ ಶಾಸಕ ಮುನಿರತ್ನ ನಿರ್ಮಿಸುತ್ತಿರುವ ಕನ್ನಡ ಚಿತ್ರರಂಗದಲ್ಲೆ ಶ್ರೀಮಂತ ಪೌರಾಣಿಕ ಚಿತ್ರ ಎಂದು ಬಿಂಬಿತವಾಗಿರುವ "ಮುನಿರತ್ನ ಕುರುಕ್ಷೇತ್ರ" 3ಡಿ ಚಿತ್ರದ ಡಬ್ಬಿಂಗ್ ಕಾರ್ಯವು ಇತ್ತೀಚೆಗೆ ಆಕಾಶ್ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.
ಆದ್ರೆ, ನಿಖಿಲ್ ಕುಮಾರಸ್ವಾಮಿರವರ ಪಾತ್ರಕ್ಕೆ ಡಬ್ಬಿಂಗ್ ಮಾತ್ರ ಇನ್ನು ಆಗಿಲ್ಲ ಎಂದು ಸ್ವತಃ ಚಿತ್ರತಂಡವೇ ಸ್ಪಷ್ಟಪಡಿಸಿದೆ. ಸದ್ಯ ನಿಖಿಲ್ ಕುಮಾರ್ ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.
'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ 'ಅಭಿಮನ್ಯು' ಪಾತ್ರ ನಿಭಾಯಿಸಿದ್ದು, ಇನ್ನು ಯಾಕೆ ಡಬ್ಬಿಂಗ್ ಮಾಡಿಲ್ಲ ಎಂಬ ಕುತೂಹಲ ಕಾಡುತ್ತಿದೆ. ಈಗಾಗಲೇ ರವಿಚಂದ್ರನ್ ಅವರ ಕೃಷ್ಣ ಪಾತ್ರಕ್ಕೆ ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ಕಂಠದಾನ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಿಖಿಲ್ ಪಾತ್ರಕ್ಕೂ ಬೇರೆ ಕಲಾವಿದರಿಂದ ಕಂಠದಾನ ಮಾಡಿಸುವ ಉದ್ದೇಶದಿಂದ ವಿಳಂಭವಾಗಿರಬಹುದಾ.? ಕಾದುನೋಡಬೇಕಿದೆ.

ಇನ್ನುಳಿದಂತೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಜುಲೈ ತಿಂಗಳು ಅದ್ಧೂರಿಯಾಗಿ ನಡೆಯಲಿದೆ ಎಂದು ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ. ಚಿತ್ರಕ್ಕೆ ಮುನಿರತ್ನ ಕಥೆ, ಜಿ.ಕೆ. ಭಾರವಿ ಸಂಭಾಷಣೆ, ಜಯನ್ ವಿನ್ಸೆಂಟ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಶಿವಶಂಕರ್, ಕಲೈ ನೃತ್ಯ, ಕಿರಣ್ ಕುಮಾರ್ ಕಲೆ, ಕಣಲ್ ಕಣ್ಣನ್, ಕಿಂಗ್ ಸಾಲೋಮನ್, ವಿನೋದ್, ಶಿವ ಸಾಹಸ, ಜೋನಿಹರ್ಷ ಸಂಕಲನವಿದ್ದು, ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.

ತಾರಾಗಣದಲ್ಲಿ ದರ್ಶನ್ (ದುರ್ಯೋಧನ) ಅರ್ಜುನ್ ಸರ್ಜಾ (ಕರ್ಣ) ಅಂಬರೀಶ್ (ಭೀಷ್ಮ) ರವಿಚಂದ್ರನ್ (ಕೃಷ್ಣ) ಶಶಿಕುಮಾರ್ (ಧರ್ಮರಾಯ) ಡ್ಯಾನಿಶ್ ಅಖ್ತರ್ (ಭೀಮ) ಸೋನುಸೂದ್ (ಅರ್ಜುನ) ಯಶಸ್ ಸೂರ್ಯ (ನಕುಲ) ಚಂದನ್ (ಸಹದೇವ) ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು) ರವಿಶಂಕರ್ (ಶಕುನಿ) ಭಾರತಿ (ಕುಂತಿ) ಸ್ನೇಹಾ (ದ್ರೌಪದಿ) ರಾಕ್‍ಲೈನ್ ವೆಂಕಟೇಶ್ (ಶಲ್ಯ) ರಮೇಶ್‍ಭಟ್ (ವಿದುರ) ಶ್ರೀನಿವಾಸಮೂರ್ತಿ (ದ್ರೋಣಾಚಾರ್ಯ) ಶ್ರೀನಾಥ್ (ದೃತರಾಷ್ಟ್ರ) ರವಿಚೇತನ್ (ದುಶ್ಯಾಸನ) ಅವಿನಾಶ್ (ಗಂಗಾಧರರಾಜ) ಪವಿತ್ರ ಲೋಕೇಶ್ (ಸುಭದ್ರಾ) ಹರಿಪ್ರಿಯಾ ಮುಂತಾದವರಿದ್ದಾರೆ.


Click it and Unblock the Notifications











