ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ ಎಂದ 'ಕುರುಕ್ಷೇತ್ರ'ದ ಭೀಮ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಭೀಮನಾಗಿ ಮಿಂಚಿದ್ದ ನಟ ಡ್ಯಾನಿಶ್ ಅಖ್ತರ್ ಸೈಫ್ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಬಿಹಾರ ಮೂಲದ ನಟ ಡ್ಯಾನಿಶ್ ಹಿಂದಿ ಕಿರುತೆರೆಯ ಜನಪ್ರಿಯ ನಟ. ಹಿಂದಿಯಲ್ಲಿ ಹೆಚ್ಚಾಗಿ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಡ್ಯಾನಿಶ್ ಕುರುಕ್ಷೇತ್ರ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು.
ಕಟ್ಟುಮಸ್ತಾದ ದೇಹ ಹೊಂದಿದ್ದ ನಟ ಡ್ಯಾನಿಶ್ ಭೀಮನ ಪಾತ್ರಕ್ಕೆ ಹೇಳಿದ ಮಾಡಿಸಿದ ಕಲಾವಿದ ಎಂದು ಚಿತ್ರತಂಡ ನಿರ್ಧರಿಸಿ ಚಾಲೆಂಜಿಂಗ್ ಸ್ಟಾರ್ ಎದುರು ಕರೆತಂದರು. ಚಿತ್ರದಲ್ಲಿ ದರ್ಶನ್ ಮುಂದೆ ಡ್ಯಾನಿಶ್ ಅಬ್ಬರಿಸಿ ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು. ಈ ಸಿನಿಮಾ ಬಳಿಕ ಡ್ಯಾನಿಶ್ ಉದ್ಘರ್ಷ ಚಿತ್ರದಲ್ಲಿ ನಟಿಸಿದ್ದರು. ಆದರೆ ಹೇಳುವಷ್ಟು ಹೆಸರು ತಂದುಕೊಟ್ಟಿಲ್ಲ. ಬಳಿಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿಲ್ಲ.
ಸದ್ಯ ಡ್ಯಾನಿಶ್, ಸುದೀಪ್ ನಟನೆಯ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾದಲ್ಲಿ ನಟಿಸಿದ್ದು, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಡ್ಯಾನಿಶ್ ಸಾಮಾಜಿಕ ಜಾಲತಾಣದಲ್ಲಿ 'ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಟ್ವೀಟ್ ಮಾಡಿ ಕನ್ನಡ ಬಹುತೇಕ ಸ್ಟಾರ್ ಗಳಿಗೆ ಟ್ಯಾಗ್ ಮಾಡಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡತನ ಮೆರೆದಿರುವ ಡ್ಯಾನಿಶ್ ಗೆ ಕನ್ನಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡಿ ಎಂದು ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ. ಕನ್ನಡದಿಂದ ಬೇರೆ ಬೇರೆ ಭಾಷೆಗಳಿಗೆ ಹಾರುತ್ತಿರುವ ನಟ-ನಟಿಯರ ನಡುವೆ ಕನ್ನಡಕ್ಕೆ ಬರ್ತೀನಿ ಎಂದು ಹೇಳುತ್ತಿರುವ ನಟನಿಗೆ ಅಭಿಮಾನಿಗಳು ಪ್ರೀತಿಯ ಸ್ವಾಗತ ಕೋರುತ್ತಿದ್ದಾರೆ.

ನಟ ಡ್ಯಾನಿಶ್ ಹಿಂದಿಯಲ್ಲಿ ಆಂಜನೇಯ ಪಾತ್ರದ ಮೂಲಕ ಎಲ್ಲರ ಮನಗೆದ್ದಿದ್ದರು. ಬಳಿಕ ಕನ್ನಡ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದರು. ಅತೀ ಹೆಚ್ಚು ಕನ್ನಡ ಸಿನಿಮಾಗಳನ್ನು ಮಾಡಲು ಬಯಸಿರುವ ಡ್ಯಾನಿಶ್ ಗೆ ಉತ್ತಮ ಪಾತ್ರಗಳು ಸಿಗಲಿ ಎನ್ನುವುದು ಕನ್ನಡ ಅಭಿಮಾನಿಗಳ ಆಶಯ.


Click it and Unblock the Notifications











