ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ಜೊತೆ ಹೊಸ ಸಿನಿಮಾ ಘೋಷಿಸಿದ ಕೆವಿಎನ್ ಪ್ರೊಡಕ್ಷನ್ಸ್
ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸದ್ದು ಮಾಡ್ತಿದೆ. ಇತ್ತೀಚೆಗೆ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಹೊಸ ಹೊಸ ಸಿನಿಮಾಗಳನ್ನು ಸಂಸ್ಥೆ ಕೈಗೆತ್ತಿಕೊಳ್ತಿದೆ.
ಡಾ. ರಾಜ್‌ಕುಮಾರ್ 97ನೇ ಜಯಂತೋತ್ಸವದ ಸಂಭ್ರಮದಲ್ಲಿ ಶಿವಣ್ಣ ಹೀರೊ ಆಗಿ ಹೊಸ ಸಿನಿಮಾ ಘೋಷಣೆ ಆಗಿದೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸುತ್ತಿದ್ದಾರೆ. ಟೈಟಲ್ ಸಮೇತ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಇತ್ತೀಚೆಗೆ ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶಿವಣ್ಣ ಸಿನಿಮಾ ಘೋಷಣೆ ಆಗಿತ್ತು. ಇದೀಗ ಮತ್ತೊಂದು ಸಿನಿಮಾ ಕನ್ಫರ್ಮ್ ಆಗಿದೆ.

ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟ ಶಿವರಾಜ್‌ಕುಮಾರ್. ಸದಾ ನಾಲ್ಕೈದು ಸಿನಿಮಾಗಳು ಸೆಂಚುರಿ ಸ್ಟಾರ್ ಕೈಯಲ್ಲಿ ಇರುತ್ತವೆ. ಕನ್ನಡ ಮಾತ್ರವಲ್ಲದೇ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಶಿವಣ್ಣ ನಟಿಸೋಕೆ ಆರಂಭಿಸಿದ್ದಾರೆ. ಪವನ್ ಒಡೆಯರ್ ಜೊತೆ ಸಿನಿಮಾ ಮಾಡುವ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಟೈಟಲ್ ಕೂಡ ಘೋಷಣೆ ಆಗಿದೆ.
"ಅಣ್ಣಾವ್ರ ಹುಟ್ಟುಹಬ್ಬದ ದಿನ ದೊಡ್ಡೋರು ಬಂದ್ರು" ಎಂದು ಬರೆದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ 'ಬೇಲ್' ಎಂಬ ಟೈಟಲ್ ಫಿಕ್ಸ್ ಆಗಿದೆ. ಮಳೆಯಲ್ಲಿ ಛತ್ರಿ ಹಿಡಿದು ಖಡಕ್ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಪೋಸ್ಟರ್ ಗಮನ ಸೆಳೆಯುವಂತಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಖಚಿತವಾಗಿದೆ.
ಕೆವಿಎನ್ ಸಂಸ್ಥೆ ನಿರ್ಮಾಣದ 'ಕೆಡಿ' ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಮೇ ಮೊದಲ ವಾರದಲ್ಲಿ ತಮಿಳಿನ 'ಜನನಾಯಗನ್' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಜೂನ್ 4ಕ್ಕೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಲಿದೆ. 'ಬೇಲ್' ಸಿನಿಮಾ ಬಗ್ಗೆ ಪವನ್ ಒಡೆಯರ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು7 ದಿನಗಳ ಕಾಲ ಚಿತ್ರೀಕರಣ ಮಾಡಬೇಕಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡ್ತೀವಿ ಎಂದು ಪವನ್ ತಿಳಿಸಿದ್ದಾರೆ. "ಚಿತ್ರದಲ್ಲಿ ಶಿವಣ್ಣನ ಜೊತೆ ಲೂಸ್ ಮಾದ ಯೋಗಿ, ಸಂಜನಾ ಆನಂದ್, ತಮಿಳು ನಟಿ ಸಂಗೀತಾ, ಮಲಯಾಳಂ ನಟ ಜಯರಾಂ ಸೇರಿ ದೊಡ್ಡ ತಾರಾಗಣವಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ" ಎಂದು ಮಾಹಿತಿ ನೀಡಿದ್ದಾರೆ.
ಹಿಮಾಚಲ್ ಪ್ರದೇಶದಲ್ಲಿ ನಾಲ್ಕೈದು ದಿನ ಚಿತ್ರೀಕರಣ ಮಾಡಬೇಕಿದೆ. ಅದಕ್ಕಾಗಿ ಸಿದ್ಧತೆ ನಡೀತಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಬಿಡುಗಡೆ ದಿನಾಂಕದ ಸಮೇತ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆಕ್ಷನ್ ಜೊತೆಗೆ ಸಾಕಷ್ಟು ಕಾಮಿಡಿ ಕೂಡ 'ಬೇಲ್' ಚಿತ್ರದಲ್ಲಿದೆ ಇರಲಿದೆ. ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂದು ಪವನ್ ಒಡೆಯರ್ ವಿವರಿಸಿದ್ದಾರೆ.
ಸದ್ಯ ಶಿವಣ್ಣ ತೆಲುಗಿನ 'ಪೆದ್ದಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆ 'ಜೈಲರ್-2' ಚಿತ್ರದಲ್ಲಿ ಮತ್ತೆ ನರಸಿಂಹನಾಗಿ ಅಬ್ಬರಿಸಿದ್ದಾರೆ. ತೆಲುಗಿನ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ 'ಡ್ಯಾಡ್', '666 ಆಪರೇಷನ್ ಡ್ರೀಮ್ ಥಿಯೇಟರ್', 'ಎ ಫಾರ್ ಆನಂದ್' ಹೀಗೆ ಸೆಂಚುರಿ ಸ್ಟಾರ್ ನಟನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೇ ಸಾಲಿಗೆ 'ಬೇಲ್' ಸಿನಿಮಾ ಸೇರಿಕೊಂಡಿದೆ.
'ರೇಮೊ' ಬಳಿಕ ಪವನ್ ಯಾವುದೇ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. ಈ ನಡುವೆ 'ಡೊಳ್ಳು' ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಬಿಡುಗಡೆ ಮಾಡಿದ್ದರು. ಬಾಲಿವುಡ್‌ನಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಅಪ್‌ಡೇಟ್ ಸಿಗಲಿದೆ. ಇದೆಲ್ಲದರ ನಡುವೆ 'ಬೇಲ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications