ಅಬ್ಬಬ್ಬಾ.. ಒಂದೇ ವರ್ಷ.. 4 ಸಿನಿಮಾ.. KVN ಪ್ರೊಡಕ್ಷನ್ 2000 ಕೋಟಿ ರೂ. ಯಜ್ಞ!

ಬರ್ತಾ ಬರ್ತಾ ಸಿನಿಮಾ ಲೆಕ್ಕಾಚಾರವೇ ಬದಲಾಗಿ ಹೋಗಿದೆ. ಕೋಟಿಗಳಿಗೆ ಇಲ್ಲಿ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ನೂರು ಕೋಟಿಗಳಲ್ಲಿ ಅಲ್ಲ ಸಾವಿರ ಕೋಟಿಗಳಲ್ಲಿ ಲೆಕ್ಕ ಮಾಡುವಂತಾಗಿದೆ. ಧೈರ್ಯ ಮಾಡಿ ಮುನ್ನುಗ್ಗಿದವರು ಇಲ್ಲಿ ಗೆಲ್ಲುತ್ತಾರೆ.

KVN ಪ್ರೊಡಕ್ಷನ್.. ಹೊಂಬಾಳೆ ಫಿಲ್ಮ್ಸ್ ಬಳಿಕ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ. ಸಣ್ಣ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಈ ಸಂಸ್ಥೆ ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಸಂಚಲನ ಸೃಷ್ಟಿಸಿದೆ. ನೂರಾರು ಕೋಟಿ ಸುರಿದು ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಮುಂದೆ ಮತ್ತಷ್ಟು ಅದ್ಧೂರಿ ಸಿನಿಮಾಗಳನ್ನು ತಯಾರಿಸಲು ಮುಂದಾಗಿದೆ.

KVN Productions is producing four films with a collective box office target of 2 000 crore

ಯಾವುದೇ ಬ್ಲಾಕ್‌ಬಸ್ಟರ್ ಹಿಟ್ ಕೊಡದೇ ಇದ್ದರೂ ಅದ್ಧೂರಿ ಸಿನಿಮಾಗಳನ್ನು ನಿರ್ಮಿಸಲು KVN ಪ್ರೊಡಕ್ಷನ್ ಮುಂದಾಗಿದೆ. 'ಸಖತ್' ಹಾಗೂ 'ಬೈಟು ಲವ್' ಎಂಬ 2 ಸಣ್ಣ ಬಜೆಟ್ ಚಿತ್ರಗಳನ್ನು ಮಾತ್ರ ಈವರೆಗೆ ನಿರ್ಮಾಣ ಮಾಡಿದೆ. ಆದರೆ ಮುಂದೆ ಆ ಸಂಸ್ಥೆಯ ಲೈನಪ್ ಕೇಳಿದರೆ ಅಚ್ಚರಿ ಆಗುತ್ತದೆ. ಇಷ್ಟು ದುಡ್ಡು ಎಲ್ಲಿಂದ ತಂದು ಸುರಿಯುತ್ತಿದ್ದಾರೆ ಎಂದು ಕೆಲವರು ಹುಬ್ಬೇರಿಸಿದ್ದಾರೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಫಿಲ್ಮ್‌ ಮೇಕರ್ಸ್ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್‌ಗಳನ್ನು ದೊಡ್ಡಮಟ್ಟದಲ್ಲಿ ಕಟ್ಟಿಕೊಟ್ಟು ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಸಣ್ಣ ಸಿನಿಮಾಗಳನ್ನು ನೋಡೋಕೆ ಜನ ಚಿತ್ರಮಂದಿರಕ್ಕೆ ಬರ್ತಿಲ್ಲ ಎನ್ನುವ ಆರೋಪವೂ ಇದೆ. ಹಾಗಾಗಿ ಹೊಂಬಾಳೆ ಫಿಲ್ಮ್ಸ್, ಕೆವಿಎನ್ ಪ್ರೊಡಕ್ಷನ್ಸ್ ರೀತಿಯ ದೊಡ್ಡ ಸಂಸ್ಥೆಗಳು ಅದ್ಧೂರಿ ಚಿತ್ರಗಳನ್ನು ನಿರ್ಮಿಸಲು ಮುಂದಾಗಿವೆ.

KVN Productions is producing four films with a collective box office target of 2 000 crore

ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಾಡು ರಿಲೀಸ್ ಆಗಿ ಹಿಟ್ ಆಗಿದೆ. 2ನೇ ಹಾಡು ಹೊರಬರಲು ಮುಹೂರ್ತ ಫಿಕ್ಸ್ ಆಗಿದೆ. 'KD' ಬಳಿಕ ಕೆವಿಎನ್ ಸಂಸ್ಥೆಯ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ನಡುವೆ ತಮಿಳಿನ 'ಜನನಾಯಕನ್' ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ.

'ಟಾಕ್ಸಿಕ್' ಚಿತ್ರ ನಿರ್ಮಾಣಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ನಟ ಯಶ್ ಕೂಡ ಕೈ ಜೋಡಿಸಿದ್ದಾರೆ. ತಮ್ಮ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ಮೂಲಕ ರಾಕಿಂಗ್ ಸ್ಟಾರ್ ಚಿತ್ರನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ.

KVN Productions is producing four films with a collective box office target of 2 000 crore

ಅಂದಾಜು 300 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಟಾಕ್ಸಿಕ್' ಚಿತ್ರ ನಿರ್ಮಾಣ ಆಗುತ್ತಿದೆ. 'KGF'-2 ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆ ಲೆಕ್ಕದಲ್ಲಿ 'ಟಾಕ್ಸಿಕ್' ಸಿನಿಮಾ ಕೂಡ 1500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ಮಿಂಚಿದ್ದಾರೆ. ಇನ್ನುಳಿದಂತೆ ಹುಮಾ ಖುರೇಷಿ, ತಾರಾ ಸುತಾರಿಯಾ, ಅಚ್ಯುತ್ ಕುಮಾರ್, ಸುದೇವ್ ನಾಯರ್, ಅಮಿತ್ ತಿವಾರಿ, ಡೇರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್, ನಟಾಲಿಯಾ ಬರ್ನ್, ಕೈಲ್ ಪಾಲ್ ಹೀಗೆ ಘಟಾನುಘಟಿಗಳೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.

ತಮಿಳು ನಟ ವಿಜಯ್ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದು ಮುಂದಿನ ವರ್ಷದ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. 'ಜನನಾಯಕನ್' ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೇ ಅವರ ಕೊನೆ ಸಿನಿಮಾ ಎನ್ನುವ ಊಹಾಪೋಹ ಶುರುವಾಗಿದೆ. ಹಾಗಾಗಿ ಚಿತ್ರದ ಬಜೆಟ್, ಕಲೆಕ್ಷನ್ ಟಾರ್ಗೆಟ್ ಎಲ್ಲವೂ ನಿರೀಕ್ಷೆಗಿಂತ ಹೆಚ್ಚಾಗಿದೆ.

ತಮಿಳಿನ ಬಹುಬೇಡಿಕೆಯ ನಟ ದಳಪತಿ ವಿಜಯ್. ಬರೀ ತಮಿಳಿನಲ್ಲೇ ಅವರ ಚಿತ್ರಗಳು 200, 300 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. 'ಜನನಾಯಕನ್' ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ಅಂದಾಜಿದೆ. 800 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಚಿತ್ರಕ್ಕಾಗಿ ನಟ ವಿಜಯ್ ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.

ಹೆಚ್. ವಿನೋದ್ ನಿರ್ದೇಶನದ 'ಜನನಾಯಕನ್' ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಶ್ರುತಿ ಹಾಸನ್, ಪ್ರಿಯಾಮಣಿ, ವರಲಕ್ಷ್ಮಿ ಶರತ್‌ಕುಮಾರ್ ಹೀಗೆ ಜನಪ್ರಿಯ ಕಲಾವಿದರು ತಂಡದಲ್ಲಿದ್ದಾರೆ. ಅವರೆಲ್ಲಾ ಕೇಳಿದಷ್ಟು ಸಂಭಾವನೆ ಕೊಡಲಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಮುಂದಿನ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

ಈ 3 ಸಿನಿಮಾಗಳು ಮಾತ್ರವಲ್ಲ ಮತ್ತೆರಡು ಕ್ರೇಜಿ ಪ್ರಾಜೆಕ್ಟ್‌ಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆ ಚಿತ್ರಗಳು ಕೂಡ ಮುಂದಿನ ವರ್ಷವೇ ತೆರೆಗೆ ಬರುವ ಸಾಧ್ಯತೆಯಿದೆ. ಕನ್ನಡದಲ್ಲಿ ದರ್ಶನ್ ನಟನೆಯ 58ನೇ ಸಿನಿಮಾ ಜವಾಬ್ದಾರಿಯನ್ನು ಕೂಡ ಕೆವಿಎನ್ ಸಂಸ್ಥೆ ವಹಿಸಿಕೊಂಡಿದೆ. ಇತ್ತೀಚೆಗೆ ಈ ಬಗ್ಗೆ ಗೊಂದಲ ಮೂಡಿತ್ತು. ಆದರೆ ದರ್ಶನ್ ಹುಟ್ಟುಹಬ್ಬದ ದಿನವೇ ಅದಕ್ಕೆ ತೆರೆ ಬಿದ್ದಿತ್ತು. ಅಂದಹಾಗೆ ಜೋಗಿ ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ವರ್ಷ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಶತಾಯ ಗತಾಯ ತೆರೆಗೆ ಬರಲಿದೆ. ಮುಂದಿನ ವರ್ಷ 'D58' ಸಿನಿಮಾ ಆರಂಭಿಸಿ ವರ್ಷಾಂತ್ಯದ ವೇಳೆಗೆ ಬಿಡುಗಡೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಇದೆಲ್ಲದರ ನಡುವೆ ತಮಿಳು 'ಕೈದಿ'-2 ಚಿತ್ರವನ್ನು ಕೂಡ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುವ ಸಾಧ್ಯತೆಯಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಕೈದಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಾರ್ತಿ ಹೀರೊ ಆಗಿ ಅಬ್ಬರಿಸಿ ಗೆದ್ದಿದ್ದರು.

'ಕೈದಿ' ಚಿತ್ರದ ಸೀಕ್ವೆಲ್ ಬರಬೇಕಿದೆ. ಈ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಇದು ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿರುವ ಕಥೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರಕ್ಕಿರುವ ಕ್ರೇಜ್ ನೋಡಿದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದು 500 ಕೋಟಿ ರೂ. ಕಲೆಕ್ಷನ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ನಿರ್ದೇಶಕ ಲೋಕೇಶ್ ಬಹಳ ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ರಿಲೀಸ್ ಮಾಡುವ ಆಸಾಮಿ. ಸದ್ಯ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಮುಗಿಸಿರುವ ಅವರು ಶೀಘ್ರದಲ್ಲೇ 'ಕೈದಿ'-2 ಆರಂಭಿಸಿ ಮುಂದಿನ ವರ್ಷವೇ ರಿಲೀಸ್ ಮಾಡ್ತಾರಾ ಕಾದು ನೋಡಬೇಕಿದೆ.

ಒಟ್ಟಾರೆ ಮುಂದಿನ ವರ್ಷ ಕೆವಿಎನ್ ಸಂಸ್ಥೆ ನಿರ್ಮಾಣದ 4 ಚಿತ್ರಗಳು ತೆರೆಗೆ ಬರುವ ಸಾಧ್ಯತೆಯಿದೆ. ಈ ಚಿತ್ರಗಳ ಮೇಲೆ ಒಟ್ಟು ಅಂದಾಜು 600ರಿಂದ 700 ಕೋಟಿ ರೂ. ಹಣ ಹೂಡುವ ಸಾಧ್ಯತೆಯಿದೆ. ಇನ್ನು ಒಟ್ಟಾರೆ 2000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಇನ್ನು ಈಗಾಗಲೇ ಸಾಕಷ್ಟು ಚಿತ್ರಗಳನ್ನು ವಿತರಣೆ ಮಾಡಿ ಈ ಸಂಸ್ಥೆ ಗೆದ್ದಿದೆ. ಮುಂದೆ ಸಾಕಷ್ಟು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಲೆಕ್ಕಾಚಾರದಲ್ಲಿದೆ.

More from Filmibeat

English summary
KVN Productions is redefining cinema with grand projects like Dhruva Sarja's 'KD,' Yash's 'Toxic,' Vijay's 'Jannayakan,' and more;
Read more about: kvn productions toxic kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X