'ಜನ ನಾಯಗನ್', 'ಟಾಕ್ಸಿಕ್' ತಡವಾಗಿ ನಿರ್ಮಾಪಕ KVN ವೆಂಕಟ್ ಕೊನಂಕಿ ಬೇಸತ್ತು ಹೋದ್ರಾ?
ಸಿನಿಮಾ ನಿರ್ಮಾಣ ಎನ್ನುವುದು ಸವಾಲಿನ ಕೆಲಸ. ಇತ್ತೀಚಿನ ವರ್ಷಗಳಲ್ಲಿ ಕೋಟ್ಯಂತರ ಬಂಡವಾಳ ಹೂಡಿ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂದುಕೊಂಡ ಸಮಯಕ್ಕೆ ಸಿನಿಮಾ ತೆರೆಗೆ ಬರದೇ ಇದ್ದರೆ ನಿರ್ಮಾಪಕರ ಕಷ್ಟ ಹೇಳತೀರದು. ಕೋಟಿ ಕೋಟಿ ಸಾಲ ತಂದು ಸಿನಿಮಾ ಮಾಡಿ ಬಿಡುಗಡೆ ತಡವಾಗಿ ಬಡ್ಡಿ ಕಟ್ಟುತ್ತಾ ಕೂರಬೇಕಾಗುತ್ತದೆ. ಅದ್ಯಾಕೋ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸಿನಿಮಾಗಳು ಪದೇ ಪದೆ ತಡವಾಗುತ್ತಿವೆ.
ಸಂಕ್ರಾಂತಿಗೆ ಬರಬೇಕಿದ್ದ 'ಜನ ನಾಯಗನ್' ಇವತ್ತಿಗೂ ಬಿಡುಗಡೆ ಆಗಿಲ್ಲ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ ಕೆವಿಎನ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಜೆಟ್ 500 ಕೋಟಿ ರೂ. ದಾಟಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ರಾಕಿಂಗ್ ಸ್ಟಾರ್ ಕೂಡ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಎರಡು ವರ್ಷಗಳಿಂದ ಈ ಸಿನಿಮಾ ತಡವಾಗುತ್ತಲೇ ಇದೆ. ಇತ್ತೀಚೆಗೆ ಬಿಡುಗಡೆಯಾದ 'ಕೆಡಿ' ಸಿನಿಮಾ ಕೂಡ ತಡವಾಗಿಯೇ ತೆರೆಗೆ ಬಂದಿತ್ತು. ಒಟ್ಟಾರೆ ಕೆವಿಎನ್ ಸಂಸ್ಥೆ ನಿರ್ಮಾಣದ ಚಿತ್ರಗಳು ನಿಧಾನ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಬೇರೆ ನಿರ್ಮಾಪಕರಿಗೆ ನಿರ್ಮಾಪಕ ವೆಂಕಟ್ ಕೊನಂಕಿ ಬೇಗ ಸಿನಿಮಾ ಮುಗಿಸಿ ಬಿಡುಗಡೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ.

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನೆಯ ಹೊಸ ಸಿನಿಮಾ ಘೋಷಣೆಯಾಗಿದೆ. ಕೆವಿಎನ್ ಸಂಸ್ಥೆ ಚಿತ್ರದ ಬೆನ್ನಿಗೆ ನಿಂತಿದೆ. ರಾಶಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಹಾಗೂ ನವೀನ್ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡ್ತಿದ್ದು ಕೆವಿಎನ್ ಸಂಸ್ಥೆ ಅರ್ಪಣೆ ಮಾಡುತ್ತಿದೆ. ಈ ಬಗ್ಗೆ ಸ್ಪೆಷಲ್ ವೀಡಿಯೋ ಮೂಲಕ ಮಾಹಿತಿ ನೀಡಲಾಗಿದೆ. ಜೂನ್ 21ರಂದು ಗಿಲ್ಲಿ ಹುಟ್ಟುಹಬ್ಬದ ದಿನವೇ ಇನ್ನು ಹೆಸರಿಡದ ಸಿನಿಮಾ ಶುರುವಾಗಲಿದೆ. ಚಂದ್ರಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಕಚೇರಿಗೆ ತೆರಳಿ ಗಿಲ್ಲಿ ಸಿನಿಮಾ ಬಗ್ಗೆ ಕೆವಿಎನ್ ನಿರ್ಮಾಪಕ ವೆಂಕಟ್ ಕೊನಂಕಿ ಜೊತೆ ಮಾತುಕತೆ ನಡೆಸಿರುವುದನ್ನು ನೋಡಬಹುದು. "ನಾನು ಈಗಾಗಲೇ ಸಿನಿಮಾ ಕಥೆ ಕೇಳಿದ್ದೀನಿ, ಚೆನ್ನಾಗಿದೆ. ನಿಮಗೆ ಸೂಕ್ತವಾಗಿದೆ. ಪ್ರತಿಭೆ ಇರುವರರಿಗೆ ಕೆವಿಎನ್ ಸಂಸ್ಥೆ ಬೆಂಬಲ ಸದಾ ಇರುತ್ತೆ. ಅಂದುಕೊಂಡ ಬಜೆಟ್‌ನಲ್ಲಿ ಅಂದುಕೊಂಡ ಸಮಯಕ್ಕೆ ಸರಿಯಾಗಿ ಸಿನಿಮಾ ಮಾಡಿ ಮುಗಿಸಿ" ಎಂದು ತಂಡಕ್ಕೆ ಸಲಹೆ ನೀಡಿದ್ದಾರೆ. ತಮ್ಮ ಸಿನಿಮಾಗಳು ಪದೇ ಪದೆ ತಡವಾಗುತ್ತಿರುವುದರಿಂದ ವೆಂಕಟ್ ಹೀಗೆ ಸಲಹೆ ನೀಡಿದ್ರಾ ಎನ್ನುವ ಅನುಮಾನ ಮೂಡುತ್ತಿದೆ.
ನಿಜಕ್ಕೂ ಕೋಟಿ ಕೋಟಿ ಸುರಿದು ಸಿನಿಮಾ ಮಾಡುವ ನಿರ್ಮಾಪಕರಿಗೆ ಗಟ್ಟಿ ಗುಂಡಿಗೆ ಬೇಕು. ಅಷ್ಟೆಲ್ಲಾ ಕಸರತ್ತು ಮಾಡಿ ನಿರ್ಮಿಸಿದ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಗೆದ್ದರೆ ಬಚಾವ್.. ಸೋತ್ರೆ ನಿರ್ಮಾಪಕರನ್ನು ಕೇಳುವವರು ಇರುವುದಿಲ್ಲ. ಸೋಲು ಗೆಲುವು ಪಕ್ಕಕ್ಕಿಟ್ಟರೆ ಬೇರೆ ಬೇರೆ ಕಾರಣಗಳಿಂದ ಸಿನಿಮಾ ತಡವಾಗಿ ನಿರ್ಮಾಪಕರಿಗೆ ಹೊರೆಯಾಗಬಾರದು. ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಯಬೇಕು. ಪ್ರೇಮ್ 'ಕೆಡಿ' ಸಿನಿಮಾ ತೆರೆಗೆ ತರಲು 4 ವರ್ಷ ತೆಗೆದುಕೊಂಡಿದ್ದರು. ಭಾರೀ ಬಜೆಟ್ ಹಾಕಲಾಗಿತ್ತು. ಸಿನಿಮಾ ಫಲಿತಾಂಶ ಏನಾಯ್ತು ಎನ್ನುವುದು ಗೊತ್ತೇಯಿದೆ.
'ಜನ ನಾಯಗನ್', 'ಟಾಕ್ಸಿಕ್' ಸಿನಿಮಾಗಳು ತಡವಾಗಿ ನಷ್ಟವಾಗುತ್ತಿದ್ದರೂ ವೆಂಕಟ್ ಕೊನಂಕಿ ಯಾವುದಕ್ಕೂ ಹೆದರುತ್ತಿಲ್ಲ. ಮತ್ತೆ ಮತ್ತೆ ಸಿನಿಮಾ ನಿರ್ಮಾಣ ಮಾಡುತ್ತಲೇ ಇದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್ ಸಿನಿಮಾ ಶುರು ಮಾಡಿದ್ದಾರೆ. ಮಲಯಾಳಂನಲ್ಲಿ 'ಬಾಲನ್' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಚಿತ್ರಕ್ಕೆ ಸಂಸ್ಥೆ ಬಂಡವಾಳ ಹೂಡುತ್ತಿದೆ. ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸಲು ವೆಂಕಟ್ ಕೊನಂಕಿ ಮನಸ್ಸು ಮಾಡಿದ್ದಾರೆ.


Click it and Unblock the Notifications