twitter
    For Quick Alerts
    ALLOW NOTIFICATIONS  
    For Daily Alerts

    ನಿಷ್ಠುರ ನಿರ್ದಾಕ್ಷಿಣ್ಯ ಮಾತು. ನೇರ ನಡೆ.

    By Super
    |

    Aamir Khan
    ರಾಮ್‌ಗೋಪಾಲ್‌ ವರ್ಮಾ ಅವರನ್ನು ಒಬ್ಬ ನಿರ್ದೇಶಕ ಅಥವಾ ವ್ಯಕ್ತಿಯಾಗಿ ಇನ್ನು ಮುಂದೆ ನಾನು ನಂಬುವುದಿಲ್ಲ.
    ದುಡ್ಡು ಇಸಿದುಕೊಂಡು ಸುಮ್ಮನಾಗುವ ಉಡಾಫೆ ನಿರ್ದೇಶಕ ಮಹೇಶ್‌ ಭಟ್‌.

    ನಾನು ಈವರೆಗೆ ಸುಮಾರು 20 ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಮಹೇಶ್‌ ಭಟ್‌ ಬಿಟ್ಟು ಉಳಿದವರು ನನ್ನ ಸಲಹೆಗಳಿಗೆ ಬೆನ್ನು ತಟ್ಟಿದ್ದಾರೆ.
    ನನ್ನ ಸಮಕಾಲೀನ ನಟರ್ಯಾರೂ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವ ರಿಸ್ಕನ್ನು ಮೈಮೇಲೆ ಎಳೆದುಕೊಂಡಿಲ್ಲ. ಆ ಕೆಲಸಕ್ಕೆ ಕೈಹಾಕಿರುವುದು ನಾನೊಬ್ಬನೇ ಎಂಬ ಹೆಮ್ಮೆ ನನ್ನದು.

    ಅಮೀರ್‌ ಖಾನ್‌ ಮಾತುಗಳೇ ಹೀಗೆ... ಕಟ್ಟಾ ನಿಷ್ಠುರ. ಕಡ್ಡಿ ಮುರಿದಂತೆ. ನಡತೆ ವಸ್ತುನಿಷ್ಠ. ಶಿಸ್ತು ಭರಪೂರ. ನಲವತ್ತಕ್ಕಿಂತ 3 ವರ್ಷ ಕಡಿಮೆ ವಯಸ್ಸು. ಇಬ್ಬರು ಮಕ್ಕಳ ತಂದೆ. ದಿಗ್ಗಜಾತಿ ದಿಗ್ಗಜ ನಿರ್ದೇಶಕರಿಗೂ ಧಿಕ್ಕಾರ ಹೇಳಿ ಸೆಟ್‌ನಿಂದ ಹೊರ ನಡೆದುಬಿಡುವಷ್ಟು ನಿರ್ದಾಕ್ಷಿಣ್ಯ ವ್ಯಕ್ತಿತ್ವ. ತನ್ನ ಪ್ರೀತಿಯ ಅಪ್ಪ ತಾಹಿರ್‌ ಹುಸೇನ್‌, ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ಎರಡನೇ ಮದುವೆಯಾದಾಗ ಅಮೀರ್‌ ಸುಮ್ಮನಿದ್ದರು. ಆದರೆ ಆಕೆಯನ್ನು ನಾಯಕಿ ಮಾಡಲು ತನ್ನ ಹೆಸರನ್ನು ಬಳಸಿಕೊಂಡು ಚಂದಾ ಎತ್ತತೊಡಗಿದಾಗ, ಅಪ್ಪನ ವ್ಯವಹಾರದೊಂದಿಗೆ ಸಂಬಂಧ ಕಳಚಿಕೊಂಡೆ ಎಂದು ಸುದ್ದಿಗೋಷ್ಠಿಯಲ್ಲಿ ಹಿಂದೂಮುಂದೂ ನೋಡದೆ ಬಯಲು ಮಾಡಿಬಿಟ್ಟರು!

    ಸಿನಿಮಾ ಸಂಖ್ಯೆಗಳ ದೃಷ್ಟಿಯಲ್ಲಿ ಅಮೀರ್‌ ಅನುಭವಕ್ಕೆ ಇನ್ನೂ ಹರೆಯ. ಹದಿಮೂರು ವರ್ಷಗಳಲ್ಲಿ ಮೂವತ್ತು ಚಿಲ್ಲರೆ ಸಿನಿಮಾಗಳು. ಆದರೆ ಆತನ ಯಶಸ್ಸಿನ ಗುಟ್ಟು ಪಾತ್ರಗಳ ಆಯ್ಕೆಯ ನಿಟ್ಟಿನಲ್ಲಿದೆ. ಪಡ್ಡೆ ಪ್ರೇಮಿ, ಕಾಲೇಜು ಹುಡುಗ, ಟ್ಯಾಕ್ಸಿ ಡ್ರೆೃವರ್‌, ಪೊಲೀಸ್‌ ಆಫೀಸರ್‌, ಮವಾಲಿ, ಬ್ಲ್ಯಾಕ್‌ ಟಿಕೇಟು ಮಾರುವವ, ಹಾಡುಗಾರ, ಲಗಾನಿನ ಆತ್ಮವಿಶ್ವಾಸಿ ಭುವನ, ಗಲ್ಲ- ತುಟಿಯ ನಡುವೆ ಚಿಕ್ಕದಾಗಿ ಗಡ್ಡ ಬಿಟ್ಟು, ಪುರಲೆ ಕೂದಲು ಮಾಡಿಕೊಂಡ ಎಲೈಟ್‌ ಪದವೀಧರ ಪ್ರೇಮಿ.. ಹೀಗೆ. ಬಾಜಿ ಚಿತ್ರದಲ್ಲಿ ಹುಡುಗಿ ವೇಷ ಹಾಕಿದ್ದೂ ಆಯಿತು. ತಾವೇ ಹೇಳಿಕೊಂಡಿರುವಂತೆ, ಅಮೀರ್‌ ತಮ್ಮ ಪಾತ್ರದ ಪರಕಾಯ ಪ್ರವೇಶ ಮಾಡುತ್ತಾರೆ. ಅದನ್ನು ಪ್ರೇಕ್ಷಕ ಕೂಡ ಒಪ್ಪಿಕೊಂಡಿದ್ದಾನೆ.

    ಸಿನಿಮಾ ಸೆಟ್‌ಗಳಲ್ಲಿ ಅಮೀರ್‌ ಹ್ಯಾಗೆ ಗೊತ್ತೆ?

    ಚಿತ್ರ- ಗುಲಾಂ : ಮುಂಬಯಿಯ ರೈಲ್ವೆಸ್ಟೇಷನ್‌. ರೈಲ್ವೆ ಹಳಿಯ ಪಕ್ಕ ಎರಡು ಕಡ್ಡಿಗಳು. ಅವುಗಳ ನಡುವೆ ಸುಮಾರು ನೂರು ನೂರೈವತ್ತು ಮೀಟರುಗಳ ಅಂತರ. ಒಂದು ಕಡ್ಡಿ ನೆಟ್ಟ ಜಾಗೆಯಿಂದ ಇನ್ನೊಂದರವರೆಗೆ ಅಮೀರ್‌ ಓಡಬೇಕು. ಅದೇನೂ ಕಷ್ಟವಲ್ಲ. ಆದರೆ ಇದಿರಿನಿಂದ ಎಕ್ಸ್‌ಪ್ರೆಸ್‌ ರೈಲು ಕಂಡ ನಂತರವೇ ಓಟ ಶುರುವಾಗಬೇಕು. ಬರೇ ಒಂದೂವರೆ ನಿಮಿಷ ಟೈಮು. ಕಡ್ಡಿ ಮುಟ್ಟದಿದ್ದಲ್ಲಿ ರೈಲಿಗೆ ಬಲಿ. ಇದು ಚಿತ್ರದ ಛಾಲೆಂಜ್‌. ಡ್ಯೂಪ್‌ ಬೇಡವೆಂದ ಅಮೀರ್‌ ಖುದ್ದು ಈ ಸಾಹಸ ಮಾಡಿದರು. ಶಾಟ್‌ ಓಕೆ. ಸ್ವಲ್ಪ ಎಡವಟ್ಟಾಗಿದ್ದರೂ ಅಮೀರ್‌ ಔಟ್‌ !

    ಚಿತ್ರ- ಸರ್ಫರೋಷ್‌: ತನ್ನ ಪಾತ್ರ ಪೊಲೀಸ್‌ ಅಧಿಕಾರಿಯದ್ದು ಎಂಬುದನ್ನು ತಿಳಿದ ಅಮೀರ್‌, ಸೀದಾ ಪೊಲೀಸ್‌ ತರಪೇತಿ ಕ್ಯಾಂಪ್‌ನಲ್ಲಿ ವಾರ ಕಾಲ ಠಿಕಾಣಿ. ಪೊಲೀಸ್‌ ಅಧಿಕಾರಿ ಹೇಗೆ ನಡೆಯುತ್ತಾರೆ? ಅವರ ಮಾತಿನ ವರಸೆ ಹೇಗೆ? ಎಲ್ಲದರ ಕಲಿಕೆ. ನಂತರ ಸಿನಿಮಾ ಗೆದ್ದದ್ದೂ ಅಮೀರ್‌ ಖಡಕ್‌ ಧೋರಣೆಯ ಪಾತ್ರದಿಂದಲೇ.

    ಚಿತ್ರ- ರಂಗೀಲಾ : ನಿರ್ಮಾಪಕರು ತರಿಸಿಕೊಟ್ಟ ಹೊಸ ಬಟ್ಟೆಯನ್ನು ಒಲ್ಲೆ ಎಂದ ಅಮೀರ್‌, ತೀರಾ ಹಳೆಯ- ಚೆನ್ನಾಗಿ ಕೊಳೆಯಾದ ಜೀನ್ಸ್‌ ಹಾಗೂ ಷರ್ಟನ್ನು ತೊಟ್ಟರು. ನೀಟಾಗಿ ಶೇವ್‌ ಮಾಡೋದನ್ನ ಮರೆತರು. ಅಮೀರ್‌, ಪಕ್ಕಾ 'ಮುನ್ನಾ' ಆದದ್ದು ಹೀಗೆ. ಇಲ್ಲೂ ಅಮೀರ್‌ಗೆ ವಿಜಯ.

    ಇವು ನಮೂನೆಗಳು. ಸಿನಿಮಾದ ಕತೆ ಬಲಪಡಿಸಲು ನಿರ್ದೇಶಕರುಗಳಿಗೇ ಸಲಹೆ ಕೊಟ್ಟು, ಅಮೀರ್‌ ಸೈ ಎನಿಸಿಕೊಂಡದ್ದೂ ಉಂಟು. ಎಲ್ಲಾ ಅನುಭವಗಳ ಮೊಗೆದು ಕೊನೆಗೆ ಭುವನನಾಗಿ ನಿಂತು, ಆಸ್ಕರ್‌ ಮನೆಯ ಕದ ತಟ್ಟಿ, ಭುವನವನ್ನೇ ಬಾಲಿವುಡ್‌ನತ್ತ ತಿರುಗಿಸಿದ ಹೆಮ್ಮೆ ಅಮೀರ್‌ದು.

    ಅಮೀರ್‌ ಸಿನಿಮಾಗಳು ಯಾಕೆ ಹಿಟ್‌ ಆಗುತ್ತವೆ?

    ರಾಜೇಶ್‌ ಖನ್ನಾ ಸಿನಿಮಾಗಳ ಸಕ್ಸಸ್‌ ಹಿಂದೆ ಕಿಶೋರ್‌ ಕುಮಾರ್‌ ತುಂಟ ಕಂಠವಿತ್ತು. ರಾಜೇಶ್‌ ಖನ್ನಾ ಒಬ್ಬ ಯಶಸ್ವಿ ನಾಯಕನಾಗಿದ್ದೇ ಕಿಶೋರ್‌ ಹಾಡುಗಳಿಂದ ಅಂತಲೂ ಕೆಲವರು ವಾದ ಇಟ್ಟಿದ್ದರು. ಅಮೀರ್‌ ವಿಷಯದಲ್ಲಿ ಇದನ್ನು ನೋಡುವುದಾದರೆ ಉದಿತ್‌ ನಾರಾಯಣ್‌ ಅವರನ್ನು ತರಬೇಕಾಗುತ್ತದೆ.

    ಪಾಪಾ ಕೆಹ್‌ತೇ ಹೈ ಬಡಾ ನಾಮ್‌ ಕರೇಗಾ, ಖಂಬೆ ಜೈಸಿ ಖಡೀ ಹೈ ಲಡ್‌ಕೀ ಹೈ ಯಾ ಛಡೀ ಹೈ, ಪೆಹೆಲಾ ನಶಾ ಪೆಹೆಲಾ ಹುಮಾ, ಕ್ಯಾ ಕರೆ ಕ್ಯಾ ನಾ ಕರೇಂ ಎ ಕೈಸೆ ಮುಷ್ಕಿಲ್‌ ಹಾಯ್‌, ರಾಜಾ ಕೋ ರಾಣೀಸೆ ಪ್ಯಾರ್‌ ಹೋಗಯಾ, ಪರ್ದೇಸಿ ಪರ್ದೇಸಿ ಜಾನಾ ನಹೀಂ, ಓ ಮಿಥುವಾ ಸುನ್‌ ಮಿಥುವಾ..., ಜಾನೆ ಕ್ಯೂಂ ಲೋಗ್‌ ಪ್ಯಾರ್‌ ಕರ್‌ತೇ ಹೈ..... ಹೀಗೆ. ಅಮೀರ್‌ ಮೊದಲ ಸಿನಿಮಾ 'ಖಯಾಮತ್‌ಸೇ ಖಯಾಮತ್‌ ತಕ್‌'ನಿಂದ ಹಿಡಿದು ಲಗಾನ್‌ ನಂತರ ತೆರೆಕಂಡ 'ದಿಲ್‌ ಚಾಹ್ತಾ ಹೈ'ವರೆಗೆ ಅಮೀರ್‌ ಸಿನಿಮಾದ ಯಶಸ್ವಿ ಹಾಡುಗಳಲ್ಲಿ ಉದಿತ್‌ ಕಂಠವಿದೆ. ನಡುನಡುವೆ ಕುಮಾರ್‌ ಸಾನು ಹಾಡುಗಳೂ ಯಶಸ್ವಿಯಾದದ್ದೂ ಉಂಟು. ಆದರೆ ಅಮೀರ್‌ಗೆ ಸೂಟ್‌ ಆಗುವ ಕಂಠ ಉದಿತ್‌ ಅವರದ್ದೇ.

    ಉದಿತ್‌ ಹಾಗೂ ಅಮೀರ್‌ ಇಬ್ಬರೂ ಒಟ್ಟೊಟ್ಟಿಗೆ ಬೆಳೆದರು. ಆದರೆ ರಾಜೇಶ್‌ ಖನ್ನಾ ರೀತಿಯ ಹಣೆಪಟ್ಟಿ ಅಮೀರ್‌ಗೆ ಅಂಟಲಿಲ್ಲ. ಅಮೀರ್‌ ಸಿನಿಮಾಗಳಲ್ಲಿ ಸೊಗಸಾದ ಹಾಡುಗಳ ಜೊತೆಗೆ ಆತನ ನಟನೆಯ ಛಾಪಿದೆ. ಏಕತಾನತೆಯಿಂದ ಹೊರಬರುವ ತಾಲೀಮಿದೆ. ಸಲ್ಮಾನ್‌ ಖಾನ್‌ ಸತತವಾಗಿ ಮೈ ತೋರಿಸಲು ಹೋಗಿ ಸೋತರು. ಗೋವಿಂದ ಒಂದೇ ಥರ ಕುಣಿದದ್ದ ನೋಡಿ ಜನ ಸುಸ್ತಾದರು. ಅಕ್ಷಯ್‌ ಕುಮಾರ್‌ ಡಿಶುಂ ಡಿಶುಂನಿಂದ ಬೇಜಾರಾದರು. ಶಾರುಖ್‌ ಖಾನ್‌ ಬಗ್ಗೆ ಕೂಡ ಓವರ್‌ ಆ್ಯಂಕ್ಟಿಂಗ್‌ ಮಾಡ್ತಾರೆ ಎಂಬ ಮಾತು ಕೇಳಿಬಂತು. ಚೂಸಿ ಅಮೀರ್‌ ಇವೆಲ್ಲವನ್ನೂ ಮೀರಿದ್ದಕ್ಕೆ ಅವರ ಪಾತ್ರಗಳ ಆಯ್ಕೆಯೇ ಕಾರಣ. ಪಾಪ್ಯುಲಾರಟಿ ಕಾಯ್ದುಕೊಳ್ಳಲು ಅಮೀರ್‌ ಮೀಡಿಯಾ ಗಾಸಿಪ್‌ಗಳ ಮೊರೆ ಹೋಗಲಿಲ್ಲ.

    ಕಳೆದ 6 ವರ್ಷ, 11 ಚಿತ್ರ, 8 ಹಿಟ್‌

    1995ರ ನಂತರವಂತೂ ಅಮೀರ್‌ ಪಕ್ಕಾ ವೃತ್ತಿಪರ ಆಗಿರುವುದು ವೇದ್ಯವಾಗುತ್ತದೆ. ಅಂದಿನಿಂದ ಇವತ್ತಿನವರೆಗೆ ತೆರೆ ಕಂಡಿರುವ ಅಮೀರ್‌ ನಾಯಕತ್ವದ ಚಿತ್ರಗಳು ಹನ್ನೊಂದು. ಈ ಪೈಕಿ ಬಾಕ್ಸ್‌ ಆಫೀಸ್‌ನಲ್ಲಿ ಸೋತಿದ್ದು ಮೂರು. ಅಮೀರ್‌ ಅಭಿನಯದ ಚಿತ್ರಗಳ ಕ್ರಿಟಿಕ್ಸ್‌ ನೋಡಿದಲ್ಲಿ , ಈತನಿಗ 100% ಮಾರ್ಕ್ಸ್‌ . ಅಂದರೆ ಹನ್ನೊಂದರ ಪೈಕಿ ಮೂರು ಚಿತ್ರ ಸೋತರೂ ಎಲ್ಲದರಲ್ಲೂ ಅಮೀರ್‌ಗೆ ಗೆಲುವು. ಅದರಲ್ಲೂ ರಾಜಾ ಹಿಂದೂಸ್ಥಾನಿ ಚಿತ್ರ ಜಾಳುಜಾಳು. ಅದರ ಕಥೆಯಲ್ಲಿ ಹೊಸತನವೇನೂ ಇರಲಿಲ್ಲ. ಟ್ಯಾಕ್ಸಿ ಡ್ರೆೃವರ್‌ ಪ್ರೇಮ ಪ್ರಕರಣ ನಮಗೆ ಹೊಸತೇನೂ ಅಲ್ಲವಲ್ಲ. ಆದರೂ ಅದು ಗೆದ್ದಿತು : ಅಮೀರ್‌ ಹಾಗೂ ಕರಿಷ್ಮಾ ಜೋಡಿಯ ಸೆಳಕಿನಿಂದ. ಇಬ್ಬರ ನಟನೆಯಿಂದ.

    ನಿಮಗಿದು ಗೊತ್ತೆ?
    ಲಗಾನ್‌ ನಿರ್ದೇಶಕ ಆಶುತೋಷ್‌ ಗೌರೀಕರ್‌ ಕಿರುತೆರೆಗೆ ತೀರಾ ಹಳಬ. ಅಲ್ಲಿ ನಿರ್ದೇಶನ ಹಾಗೂ ನಟನೆ- ಎರಡರಲ್ಲೂ ಸೋತವರು. ಅಮೀರ್‌ಗೆ ಆಪ್ತ. ವರ್ಷಗಳ ಹಿಂದೆಯೇ ಲಗಾನ್‌ ಸಿನಿಮಾ ಕತೆಯನ್ನು ಅಮೀರ್‌ಗೆ ಗೌರೀಕರ್‌ ಹೇಳಿದ್ದರು. ಆಗ ಅಮೀರ್‌ ಸುಮ್ಮನೆ ನಕ್ಕಿದ್ದರು. 'ಇದನ್ನು ಸಿನಿಮಾ ಮಾಡೋಕೆ ಆಗುತ್ತದಾ', ಗೌರೀಕರನ್ನು ಲೇವಡಿ ಮಾಡಿದ್ದರು.

    ಸಾಕಷ್ಟು ಹೋಂವರ್ಕ್‌ ಮಾಡಿದ ಗೌರೀಕರ್‌ ಪಟ್ಟು ಹಿಡಿದರು. ಅಮೀರ್‌ ಮನವೊಲಿಸಿದರು. ಒಂದು ವೆಂಚರ್‌ ಸಿನಿಮಾ ರಿಸ್ಕಿಗೆ ಎದೆಗೊಡಲು ಅಮೀರ್‌ ಮನಸ್ಸು ಮಾಡೇ ಬಿಟ್ಟರು. ಇದಕ್ಕೆ ನಡೆದ ಗ್ರೌಂಡ್‌ ವರ್ಕ್‌, ರಿಸರ್ಚ್‌ ಅಷ್ಟಿಷ್ಟಲ್ಲ. ಮೂವತ್ತು ಸಿನಿಮಾಗಳ ಅನುಭವದ ಮೇಲೇ ನಂಬಿಕೆಯಿಟ್ಟು ಅಮೀರ್‌ 25 ಕೋಟಿ ರುಪಾಯಿ ಸುರಿದರು. ಲಗಾನ್‌ ಸಿದ್ಧವಾಯಿತು.

    ಇದು ಬರೀ ಸಿನಿಮಾ ಆಗಲಿಲ್ಲ. ಆದದ್ದು ಆತ್ಮಸಾಕ್ಷಿಯನ್ನು ಎಬ್ಬಿಸುವಷ್ಟು ಶಕ್ತ ಕ್ರಿಕೆಟ್‌. ಭುವನ ಭುವನವ ಗೆದ್ದ. ಆಸ್ಕರ್‌ ಮೆಟ್ಟಿಲು ಹತ್ತಿದ.

    ಲಗಾನ್‌ ಆಸ್ಕರ್‌ಗೆ ಲಾಯಕ್ಕೋ ನಾಲಾಯಕ್ಕೋ ಎಂಬ ಚರ್ಚೆಯೇನೇ ಇರಲಿ. ಅಮೀರ್‌ ಒಬ್ಬ ವೃತ್ತಿಪರ ಅನ್ನುವುದೇ ಪ್ರೇಕ್ಷಕನ ವಿಮರ್ಶೆ. ಸಿನಿಮಾದವರು ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಅನ್ನಲಾದೀತೆ? ಕರ್ಮ ಸರಿಯಿರಬೇಕು. ಫಲವೂ ಬೇಕು. ಕರ್ಮ ಯಾಗವಾದಾಗ, ಲಗಾನ್‌ ನಿರ್ಮಿತವಾಯಿತು. ಅದಕ್ಕೆ ಸಿಕ್ಕ ಫಲ ಮಾತ್ರ ನಿರೀಕ್ಷೆಗೂ ಮಿಗಿಲು. ಬ್ರೇವೋ ಅಮೀರ್‌.

    English summary
    The catalysts behind the success of Aamir Khan
    Sunday, August 11, 2013, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X