»   » ಕಂಪಿತ ಜನರಿಗೆ ಲಗಾನಿನ ಸಿಂಚನ : ಕೃಪೆ- ಅಮೀರ್‌ ಖಾನ್‌

ಕಂಪಿತ ಜನರಿಗೆ ಲಗಾನಿನ ಸಿಂಚನ : ಕೃಪೆ- ಅಮೀರ್‌ ಖಾನ್‌

Posted By: Staff
Subscribe to Filmibeat Kannada

ಭುಜ್‌ : ಕಂಪನದ ಹೊಡೆತಕ್ಕೆ ಸಿಕ್ಕ ಗುಜರಾತ್‌ನ ಭುಜ್‌ ಜಿಲ್ಲೆಯ ಜನರಿಗೆ ಕೊಟ್ಟ ಮಾತನ್ನು ಬಾಲಿವುಡ್‌ ನಟ ಹಾಗೂ ಹೊಸ ನಿರ್ಮಾಪಕ ಅಮೀರ್‌ಖಾನ್‌ ಉಳಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ದುಡ್ಡು ಕೊಡುತ್ತೇನೆಂದು ಅವರೇನೂ ಮಾತು ಕೊಟ್ಟಿರಲಿಲ್ಲ. ಆದರೆ ತಾವು ನಿರ್ಮಿಸಿ, ನಟಿಸಿರುವ ಚಿತ್ರ ಲಗಾನ್‌, ಜಗತ್ತಿನಾದ್ಯಂತ ತೆರೆಗೆ ಬರುವ ಮುನ್ನ ಇಲ್ಲಿನ ಜನರಿಗೆ ಅದನ್ನು ತೋರಿಸುವುದಾಗಿ ಹೇಳಿದ್ದರು. ಅದನ್ನು ಪೂರೈಸಿದ್ದಾರೆ ಅಷ್ಟೆ.

ಲಗಾನ್‌ ಚಿತ್ರವನ್ನು ಚಿತ್ರೀಕರಿಸಿದ್ದು ಭುಜ್‌ ಜಿಲ್ಲೆಯಲ್ಲೇ. ಹೀಗಾಗಿ ಚಿತ್ರದಲ್ಲಿ ಅಲ್ಲಿನ ಜನರ ಪಾಲೂ ಹಿರಿದು. ಈ ಕಾರಣಕ್ಕಾಗಿ ಚಿತ್ರವನ್ನು ಮೊದಲು ನೋಡುವ ಭಾಗ್ಯ ಭುಜ್‌ ಜನರದ್ದಾಗಬೇಕು ಎಂಬ ನಿರ್ಧಾರ ಮಾಡಿದೆ ಎನ್ನುತ್ತಾರೆ ಅಮೀರ್‌ ಖಾನ್‌. 600ಕ್ಕೂ ಹೆಚ್ಚು ಜನ ಸಿನಿಮಾವನ್ನು ನೋಡಿದರು. ನಾನು ಕೊಟ್ಟ ಮಾತನ್ನು ಉಳಿಸಿಕೊಂಡದ್ದಕ್ಕೆ ಜನರಿಗೆ ತುಂಬಾ ಖುಷಿಯಾಗಿದೆ ಎಂದು ಅಮೀರ್‌ ಹೇಳುವಾಗ ಅವರ ಮೊಗದಲ್ಲಿ ನಗು ಇಣುಕುತ್ತಿತ್ತು.

ಭೂಕಂಪ ಚಿತ್ರದ ವಸ್ತುವಲ್ಲ : ಕಳೆದ ಜನವರಿಯಲ್ಲಿ ಭೂಕಂಪದ ಕುತ್ತಿಗೆ ನಲುಗಿದ ಭುಜ್‌ ಜಿಲ್ಲೆಯ ತಳಮಳವೇನೂ ಚಿತ್ರದ ವಸ್ತುವಲ್ಲ. ಚಿತ್ರಕತೆ 100 ವರ್ಷಗಳ ಹಳೆಯ ವಸಾಹತುಶಾಹಿ ಅಧಿಕಾರ ಕುರಿತದ್ದು. ಹಳ್ಳಿಯ ಸೊಗಡು ಚಿತ್ರದ ಹೊಸತನ. ತಮ್ಮೂರನ್ನು ಚಿತ್ರದಲ್ಲಿ ನೋಡಿದ ಭುಜ್‌ ಜನ ಚಪ್ಪಾಳೆಗಳ ಮಳೆಗರೆದರು. ಮುಫತ್‌ ಮನರಂಜನೆಗೆ ಹಿರಿಹಿರಿ ಹಿಗ್ಗಿದರು.

ಬಹುತ್‌ ಅಚ್ಚಾ ಹೈ ಅಂದರಂತೆ ಪ್ರಧಾನಿ : ಲಗಾನ್‌ ಚಿತ್ರ ಅಮೀರ್‌ ನಿರ್ಮಾಣದ ಮೊದಲ ಚಿತ್ರ. ಪ್ರಚಾರಕ್ಕಾಗಿ ಅಮೀರ್‌ ಸಾಕಷ್ಟು ಹಣ ಸುರಿಯುತ್ತಿದ್ದಾರೆ. ಜೊತೆಗೆ ಪ್ರಚಾರಕ್ಕೆ ಅವರು ಬಳಸುತ್ತಿರುವ ತಂತ್ರಗಳಲ್ಲೂ ಹೊಸತನ ಇದೆ. ತಮ್ಮ ಬಲ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಪ್ರಧಾನಿ ವಾಜಪೇಯಿ ಅವರಿಗೆ ಅಮೀರ್‌ ದೆಹಲಿಯಲ್ಲಿ ತಮ್ಮ ಚಿತ್ರ ತೋರಿಸಿದರು. ಅದನ್ನು ಕಂಡ ಪ್ರಧಾನಿ ಆನಂದ ತುಂದಿಲರಾಗಿ ಬಹುತ್‌ ಅಚ್ಚಾ ಹೈ ಅಂದರಂತೆ. ಆಶುತೋಷ್‌ ಗೌರೀಕರ್‌ ನಿರ್ದೇಶನವನ್ನು ಬಾಯಿತುಂಬಾ ಹೊಗಳಿದರಂತೆ. ಸಂಭಾಷಣೆಗೆ ಪದೇಪದೇ ಚಪ್ಪಾಳೆ ತಟ್ಟಿ ಶಹಭಾಸ್‌ ಅಂದರಂತೆ. ಎ.ಆರ್‌.ರೆಹಮಾನ್‌ ಟ್ಯೂನಿನ ಹಾಡುಗಳನ್ನು ಕೇಳಿ ತಲೆಯಾಡಿಸಿದರಂತೆ.

ಸೊರಗಿಹೋಗಿರುವ ಬಾಲಿವುಡ್‌ ಈಗ ಮರುಭೂಮಿಯಂತಾಗಿದೆ ಎನ್ನಬಹುದು. 2001ರಲ್ಲಿ ತೆರೆಕಂಡ ಚಿತ್ರಗಳ ಪೈಕಿ 'ಮುಝೆ ಕುಚ್‌ ಕೆಹನಾ ಹೈ" ಮಾತ್ರ ಇದರಲ್ಲಿ ಓಯಸಿಸ್‌. ಈಗ ಬತ್ತಿದ ಬಾಲಿವುಡ್‌ ಎದೆಗೆ ಮಳೆ ತರುವ ನಿರೀಕ್ಷೆಯನ್ನು ಲಗಾನ್‌ ಹುಟ್ಟಿಸಿದೆ. ತಮ್ಮ ಪ್ರಚಾರ ತಂತ್ರಗಳ ಮೂಲಕ ಅಮೀರ್‌ ಕೂಡ ಭರವಸೆ ಹುಟ್ಟುಹಾಕುತ್ತಿದ್ದಾರೆ. ಆಲ್‌ ದಿ ಬೆಸ್ಟ್‌ ಅಮೀರ್‌.(ಐಎಎನ್‌ಎಸ್‌)

English summary
Aamir khans debut production Lagaan is all set to hit the theatres. Hats off to his mode of propaganda

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada