ಸಾಫ್ಟವೇರ್ ಮಂದಿಯ ಗೋಳು ಹೇಳಿದ ಲಹರಿ ವೇಲು
ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಸಾಫ್ಟವೇರ್ ಉದ್ಯೋಗಿಗಳ ಗೋಳನ್ನು ಹಾಡಿನ ರೂಪದಲ್ಲಿ ಹಾಡಿದ್ದಾರೆ. ಈ ಹಾಡಿನ ಟೀಸರ್ ನಿನ್ನೆ (ಸಪ್ಟೆಂಬರ್ 2) ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಈ ಹಾಡು 'ವಿಂಡೋ' ಎಂಬ ಕನ್ನಡ ಚಿತ್ರದಾಗಿದೆ. ಹಾಡನ್ನು ಹಾರ್ಡ್ ವರ್ಕ್ ಮಾಡುವ ಸಾಫ್ಟವೇರ್ ಉದ್ಯೋಗಿಗಳಿಗೆ ಅರ್ಪಿಸಲಾಗಿದೆ. ಸಾಫ್ಟವೇರ್ ಉದ್ಯೋಗಿಗಳ ದಿನನಿತ್ಯದ ಬದುಕನ್ನು ಹಾಡಿನ ರೂಪದಲ್ಲಿ ಹೇಳಲಾಗಿದೆ. ಸಿನಿಮಾ ಕೂಡ ಸಾಫ್ಟವೇರ್ ಉದ್ಯೋಗಿಗಳ ಬಗ್ಗೆಯೇ ಇದೆಯಂತೆ.
ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅವರೇ ಈ ಹಾಡನ್ನು ಬರೆದಿದ್ದಾರೆ. ಕಳೆದ 10 ವರ್ಷದಿಂದ ಲಹರಿ ವೇಲು ಹಾಗೂ ಅಭಿಮಾನ್ ರಾಯ್ ನಡುವೆ ಪರಿಚಯ ಇತ್ತು. ಆಗಾಗ ಸುಮ್ಮನೆ ಕುಳಿತಾಗ ಹಾಡು ಹಾಡುತ್ತಿದ್ದ ವೇಲು ಅವರನ್ನು ಗಮನಿಸಿದ ಅಭಿಮಾನ್ ಅವರ ಬಳಿಯೇ ಚಿತ್ರದ ಹಾಡು ಹಾಡಿಸಿದ್ದಾರೆ.

ಈ ಹಿಂದೆ ಅಭಿಮಾನ್ ಅವರ ''ಇರೋದೊಂದು ಜನ್ಮ.. ಸಹಾಯ ಮಾಡು ತಮ್ಮ..'' ಎಂಬ ಆಲ್ಬಂ ಹಾಡು ಹಾಡಿದ್ದ ಲಹರಿ ವೇಲು ಈಗ ಮೊದಲ ಬಾರಿಗೆ ಸಿನಿಮಾಗೆ ಹಾಡಿದ್ದಾರೆ. ಆ ಹಾಡು ಜನಪದ ಶೈಲಿಯಲ್ಲಿ ಇದ್ದು, ಈ ಹಾಡು ಕಂಫ್ಲೀಟ್ ಮಾರ್ಡನ್ ಆಗಿದೆಯಂತೆ.

'ವಿಂಡೋ' ಸಿನಿಮಾದಲ್ಲಿ ಅಭಿಮಾನ್ ರಾಯ್ ಪುತ್ರ ಸೋನು ತೇಜಸ್ ನಟಿಸಿದ್ದಾರೆ. ಚಿತ್ರದಲ್ಲಿ 3 ವರ್ಷ, 8 ವರ್ಷ ಹಾಗೂ 10 ವರ್ಷದ ಹುಡುಗನ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ರವಿ ಮತ್ತು ಸ್ನೇಹ ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ.


Click it and Unblock the Notifications











