'ಮಿ. ರಾಣಿ' ಟೀಸರ್ ರಿಲೀಸ್; ಹೀರೊಯಿನ್ ಆಗಿ ದೀಪಕ್ ಸುಬ್ರಮಣ್ಯ ಮಿಂಚಿಂಗ್!
'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸ್ಯಾಡಿಸ್ಟ್ ಪಾತ್ರದಲ್ಲಿ ನಟಿಸಿ ದೀಪಕ್ ಸುಬ್ರಮಣ್ಯ ಗಮನ ಸೆಳೆದಿದ್ದಾರೆ. ಎಲ್ಲರ ಮೇಲೂ ಅನುಮಾನ ಪಡುವ ಭಯಾನಕವಾಗಿ ವರ್ತಿಸುವ ಜಯಂತ್ ಪಾತ್ರದಲ್ಲಿ ದೀಪಕ್ ಮೋಡಿ ಮಾಡುತ್ತಿದ್ದಾರೆ. ಇದೀಗ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.
ಇತ್ತೀಚೆಗೆ ದೀಪಕ್ ಸುಬ್ರಮಣ್ಯ ನಟನೆಯ 'ಮಿಸ್ಟರ್ ರಾಣಿ' ಸಿನಿಮಾ ಪೋಸ್ಟರ್ ರಿಲೀಸ್ ಆಗಿ ವೈರಲ್ ಆಗಿತ್ತು. ಹೆಣ್ಣಿನ ವೇಷದಲ್ಲಿ ದೀಪಕ್ ಕಾಣಿಸಿಕೊಂಡಿದ್ದ ಪೋಸ್ಟರ್‌ನಲ್ಲಿ ಅವರನ್ನು ಗುರ್ತಿಸುವುದೇ ಕಷ್ಟ ಎನ್ನುವಂತಾಗಿತ್ತು. ಒಂದೇ ಒಂದು ಪೋಸ್ಟರ್‌ನಿಂದ ಈ ಸಿನಿಮಾ ಸುದ್ದಿ ಮಾಡಿದ್ದು ಸುಳ್ಳಲ್ಲ. ಇದೀಗ ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ.

ಹೀರೊ ಆಗಬೇಕೆಂದು ಚಿತ್ರರಂಗಕ್ಕೆ ಬಂದ ಯುವಕನೊಬ್ಬ ಅನಿವಾರ್ಯ ಕಾರಣಗಳಿಂದ ಹೆಣ್ಣಿನ ವೇಷ ಹಾಕಿ ನಟಿಯಾಗಿ ಗುರ್ತಿಸಿಕೊಳ್ಳುವ ಕಥೆ ಚಿತ್ರದಲ್ಲಿದೆ. ಭಿನ್ನ ವಿಭಿನ್ನ ವೇಷಗಳಲ್ಲಿ ದೀಪಕ್ ಸುಬ್ರಮಣ್ಯ ಮಿಂಚಿದ್ದಾರೆ. ತಮಿಳಿನಲ್ಲಿ 'ಅವ್ವೈ ಷಣ್ಮುಗಿ' ಚಿತ್ರದಲ್ಲಿ ನಟ ಕಮಲ್ ಹಾಸನ್ ಇದೇ ರೀತಿಯ ಪಾತ್ರ ಮಾಡಿದ್ದರು. ಹೆಣ್ಣಿನ ವೇಷ ಧರಿಸಿ ಸಂಕಷ್ಟಕ್ಕೆ ಸಿಲುಕುವ ಕಥೆ ಅದು. 'ಮಿಸ್ಟರ್ ರಾಣಿ' ಚಿತ್ರದಲ್ಲೂ ಅಂಥದ್ದೇ ಕಥೆ ಇರುವುದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ.
ಇಂಜಿನಿಯರಿಂಗ್ ಓದಿಕೊಂಡ ರಾಜ ಎಂಬ ಯುವಕ ಚಿತ್ರರಂಗಕ್ಕೆ ಬಂದು ನಟಿಯಾಗಿ ಗುರ್ತಿಸಿಕೊಳ್ಳುವಂತಾಗುತ್ತದೆ. ಪ್ಯಾನ್ ಇಂಡಿಯಾ ಸ್ಟಾರ್ ರಾಜ ಆಗಬೇಕಿದ್ದವನು ನಟಿ ರಾಣಿ ಆಗಿ ಸಿನಿಮಾಗಳಲ್ಲಿ ನಟಿಸುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಮಧುಚಂದ್ರ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಮಿಸ್ಟರ್ ರಾಣಿ' ಚಿತ್ರಕ್ಕೆ ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಸಂಸ್ಥೆ ಹಣ ಹೂಡಿದೆ. ದೀಪಕ್ ಸುಬ್ರಹ್ಮಣ್ಯ ಜೊತೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪ ಪ್ರಭಾಕರ್, ಆನಂದ್ ನೀನಾಸಂ ಸೇರಿದಂತೆ ಹಲವರು ನಟಿಸಿದ್ದಾರೆ.
ಮೊದಲ ನೋಟದಲ್ಲೇ 'ಮಿಸ್ಟರ್ ರಾಣಿ' ಟೀಸರ್ ಗಮನ ಸೆಳೆದಿದೆ. ದೀಪಕ್ ಸುಬ್ರಮಣ್ಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಜೂಡಾ ಸಂಧಿ ಹಾಗೂ ರಿತ್ವಿಕ್ ಮುರಳೀಧರ್ ಸಂಗೀತ ಈ ಚಿತ್ರಕ್ಕಿದೆ. ರವೀಂದ್ರನಾಥ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ.
'ದಾಸ ಪುರಂದರ' ಧಾರಾವಾಹಿಯಲ್ಲಿ ಶ್ರೀನಿವಾಸ ನಾಯಕ ಪಾತ್ರದಲ್ಲಿ ದೀಪಕ್ ಸುಬ್ರಮಣ್ಯ ನಟಿಸಿದ್ದರು. ಬಳಿಕ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಜಯಂತ್ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿದೆ. 'ಹೊಸ ದಿನಚರಿ' ಎನ್ನುವ ಮತ್ತೊಂದು ಚಿತ್ರದಲ್ಲೂ ಜಯಂತ್ ಹೀರೊ ಆಗಿ ನಟಿಸುತ್ತಿದ್ದಾರೆ. ಕಿರುತೆರೆ ಹಾಗೂ ರಂಗಭೂಮಿಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದೀಗ ಬೆಳ್ಳಿ ಪರದೆಗೆ ಜಿಗಿಯುತ್ತಿದ್ದಾರೆ.


Click it and Unblock the Notifications











