'ಲ್ಯಾಂಡ್ ಲಾರ್ಡ್'ಗೆ 25 ರ ಸಂತಸ ; ಸಂವಿಧಾನ ಸಮಾನತೆಯ ಸಂಭ್ರಮ - ಇದು ಮಾಸ್ತಿ ಬರಹ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇಂತಹ ಕಾಲದಲ್ಲಿ.. ಚಿತ್ರವೊಂದು ಮೂರು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ.
ಇನ್ನೂ ಹೊಸಬರ ಕಥೆ ಕೇಳುವುದಕ್ಕೂ.. ಹೇಳುವುದಕ್ಕೂ ಇದು ಸಮಯ ಅಲ್ಲ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳ ಚಿತ್ರಗಳು ಕೂಡ ಪ್ರೇಕ್ಷಕರ ಬರ ಎದುರಿಸುತ್ತಿವೆ. ಈ ಭಾಷೆ ಅಂತಲ್ಲ. ಬಹುತೇಕ ಎಲ್ಲ ಭಾಷೆಯಲ್ಲಿ ಈ ಕಥೆ ಮತ್ತು ವ್ಯಥೆ ಒಂದೇ ರೀತಿ ಇದೆ. ಚಿತ್ರ ಚೆನ್ನಾಗಿದ್ದರೆ.. ಆ ಚಿತ್ರದ ಕಥೆಯಲ್ಲಿ ಸೆಳೆಯುವ ಅಂಶಗಳಿದ್ದರೆ ಮಾತ್ರ ಈಗ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ತಮಗೆ ಚಿತ್ರ ಇಷ್ಟವಾದರೆ ಆ ಚಿತ್ರವನ್ನು ಹೊತ್ತು ಮೆರೆಸುತ್ತಾರೆ. ಗೆಲುವಿನ ದಡವನ್ನು ಕೂಡ ತಲುಪಿಸುತ್ತಾರೆ. ಉದಾಹರಣೆಗೆ ''ಲ್ಯಾಂಡ್‌ಲಾರ್ಡ್''.

ಹೌದು, ''ಲ್ಯಾಂಡ್ ಲಾರ್ಡ್''.. ಈ ವರ್ಷದ ಮೊದಲ ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ. ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದ್ದ ''ಲ್ಯಾಂಡ್ ಲಾರ್ಡ್'' 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಜನ ಮನ ಗೆದ್ದು ಮುನ್ನುಗ್ಗುತ್ತಿದೆ. ಈ ಹಿನ್ನೆಲೆ ಚಿತ್ರದ ಸಂಭಾಷಣೆಕಾರ ಮತ್ತು ಕನ್ನಡ ಚಿತ್ರರಂಗದ ಆಸ್ತಿ, ಮಾಸ್ತಿ ಸಂಭ್ರಮದ ಅಲೆಯಲ್ಲಿದ್ದಾರೆ. ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪ ನೀಡಿ, ನಿಮ್ಮ ಫಿಲ್ಮಿಬೀಟ್ ಕನ್ನಡ ಮೂಲಕ ನಿಮ್ಮ ಜೊತೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ, ''ಲ್ಯಾಂಡ್ ಲಾರ್ಡ್''ಗೆಲುವಿನ ಬಗ್ಗೆ ಮಾಸ್ತಿ ಫಿಲ್ಮಿಬೀಟ್ ಕನ್ನಡಗೆ ಹೇಳಿದ್ದೇನು..? ಓವರ್ ಟು ಮಾಸ್ತಿ.
ಮಾಸ್ತಿ ಮನದ ಮಾತು ಇಲ್ಲಿದೆ
''ಲ್ಯಾಂಡ್ ಲಾರ್ಡ್'' ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿ ಇನ್ನೂ ಹಲವು ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಖುಷಿಯ ವಿಚಾರ. ''ಲ್ಯಾಂಡ್ ಲಾರ್ಡ್'' ಅನ್ನುವುದು ನಿಜಕ್ಕೂ ಚಲನಚಿತ್ರಕ್ಕೂ ಮೀರಿದ ಒಂದು ಅನುಭವ .
ನಮ್ಮಲ್ಲಿ ಶಿಕ್ಷಣ, ಸಂವಿಧಾನ, ಹಕ್ಕು, ಸಮಾನತೆ ಕುರಿತು ಬಹಳಷ್ಟು ಕತೆಗಳು ಬಂದಿದಾವೆ , ಆದ್ರೆ ಸಿನಿಮಾಗಳಾಗಿ ಬಂದಿರೋದು ವಿರಳ . ನೆಲದ ಕತೆಯನ್ನು, ನೈಜ ಘಟನೆಗಳನ್ನು ಚಿತ್ರ ಕತೆ ಮಾಡೋದು. ಈಗಿನ ಪರಿಸ್ಥಿತಿಯಲ್ಲಿ 80 ರ ದಶಕದ ಹಳ್ಳಿಗಳನ್ನು ವಿನ್ಯಾಸ ಮಾಡೋದು. ಚಿತ್ರ ತಯಾರಿಸೋದು ಸುಲಭದ ಕೆಲಸವಲ್ಲ.
ಶ್ರದ್ದೆ ಸಮಯ ಸಂಯಮದ ಜೊತೆ ಹೇರಳವಾದ ಹಣ ಬೇಕು. ಇದನ್ನ ನಿರ್ದೇಶಕರಾದ ಜಡೇಶ್ ಕೆ ಹಂಪಿ ಮತ್ತು ನಿರ್ಮಾಪಕರಾದ ಸತ್ಯ ಪ್ರಕಾಶ್ ಅವರು ಮಾಡಿದ್ದಾರೆ. ಈ ಚಿತ್ರದಲ್ಲಿ ನುರಿತ ಕಲಾವಿದರ ಜೊತೆ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ ಒಂದು ತಂಡದಲ್ಲಿ ನಾನೂ ಇದ್ದೇನೆ ಅನ್ನೋದು ನನ್ನ ಭಾಗ್ಯ .

ಬರಹಗಾರನಾಗಿ ''ಲ್ಯಾಂಡ್ ಲಾರ್ಡ್'' ಚಿತ್ರ ನನಗೆ ಒಂದು ತರಹದ ಹೆಮ್ಮೆ ಮತ್ತು ವಿಶೇಷ ಎನ್ನಿಸುವ ಗೌರವ. ಅದಕ್ಕೆ ಕಾರಣ.... ಚಿತ್ರ ಬಿಡುಗಡೆ ಆದಾಗಿನಿಂದ ಹಿಡಿದು ಇಲ್ಲಿವರೆಗೆ ಬಹಳಷ್ಟು ಜನ ಬರವಣಿಗೆಯ ಮೂಲಕ ಸಿನಿಮಾವನ್ನು ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ, ಪರಾಮರ್ಷಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂವಾದ ಸಹ ಏರ್ಪಡಿಸಿದ್ದಾರೆ . ಇದು ಈ ಚಿತ್ರದ ಅಸಲಿ ಶಕ್ತಿ ಎಂದೇ ಹೇಳಬೇಕು.
ಈ ಚಿತ್ರ ತೆರೆ ಕಂಡ ನಂತರ ಬಹಳಷ್ಟು ಮಂದಿ ಖುದ್ದಾಗಿ ಫೋನ್ ಮಾಡಿ ಬರವಣಿಗೆಯ ಬಗ್ಗೆ ಮಾತನಾಡಿದ್ದು,ಅವರುಗಳೇ ಸಂಭಾಷಣೆಯ ತುಣುಕುಗಳನ್ನು ಗುರುತಿಸಿ ಅವರವರ ಪೇಜ್ ಗಳಲ್ಲಿ ವಾಲ್ ಗಳಲ್ಲಿ ಬರೆದು ನನ್ನನ್ನು ಟ್ಯಾಗ್ ಮಾಡಿದ್ದು ಕುತೂಹಲ ಅನ್ನಿಸಿತು. 25 ರ ಸಂಭ್ರಮಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು. ಈ ತರದ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗ್ಬೇಕು ಆಗ ಎಷ್ಟೋ ನೆಲದ ಕಥೆಗಳು ದೃಶ್ಯ ರೂಪಕವಾಗಿ ಜನರನ್ನು ತಲುಪುತ್ತವೆ.


Click it and Unblock the Notifications











