ಷಡ್ಯಂತ್ರ, ಪಿತೂರಿ; ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್' ಚಿತ್ರ ಪ್ರದರ್ಶನ ಅರ್ಧಕ್ಕೆ ನಿಲ್ಲಿಸಿದ್ರಾ ?
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜೀತಪದ್ದತಿ, ಜಾತಿ ವ್ಯವಸ್ಥೆ, ಊಳಿಗಮಾನ್ಯ ಪದ್ಧತಿ ಸೇರಿ ಹಲವು ವಿಚಾರಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಭರ್ಜರೆ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. ಕನ್ನಡದ 'ಲ್ಯಾಂಡ್‌ಲಾರ್ಡ್' ಸಿನಿಮಾ ಪರಭಾಷಾ ಫಿಲ್ಮ್ ಮೇಕರ್ಸ್ ಗಮನ ಸೆಳೆದಿದೆ.
ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ಉಮಾಶ್ರೀ, ರಚಿತಾ ರಾಮ್ ದೊಡ್ಡ ಘಟಾನುಘಟಿ ಕಲಾವಿದರ ದಂಡು ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಮರ್ಶಕರು ಕೂಡ ಸಿನಿಮಾ ನೋಡಿ ಮೆಚ್ಚಿದ್ದಾರೆ. ಇದೆಲ್ಲದರ ನಡುವೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪೋಸ್ಟ್ ಮಾಡಿರುವುದು ಇದೆ. ಇದೆಲ್ಲದರ ನಡುವೆ ಕಲಬುರ್ಗಿಯಲ್ಲಿ ಷಡ್ಯಂತ್ರ ಮಾಡಿ ಅರ್ಧಕ್ಕೆ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕಲಬುರ್ಗಿಯ ಶೆಟ್ಟಿ ಸಿನಿಮಾಸ್ ಚಿತ್ರಮಂದಿರದಲ್ಲಿ 'ಲ್ಯಾಂಡ್‌ಲಾರ್ಡ್' ಸಿನಿಮಾ ಬಿಡುಗಡೆಯಾಗಿದೆ. ಪ್ರೇಕ್ಷಕರಿಗೆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ(ಫೆಬ್ರವರಿ 1) ಸಿನಿಮಾ ಪ್ರದರ್ಶನ ಇದ್ದಕ್ಕಿದಂತೆ ನಿಂತು ಹೋಗಿದೆ. ಸಿನಿಮಾ ನೋಡಲು ಬಂದಿದ್ದ ಕೆಲವರು ವೀಡಿಯೋ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಷಡ್ಯಂತ್ರ ಮಾಡಿ ಬೇಕೆಂದೇ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ ಎಂದು ಆರೋಪಿದ್ದಾರೆ. ವೀಡಿಯೋ ವೈರಲ್ ಆಗಿ ಕೆಲವರು ಇದೆಲ್ಲಾ ನಿಜ ಎಂದೇ ಭಾವಿಸಿದ್ದಾರೆ. ಆದರೆ ತಾಂತ್ರಿಕ ಕಾರಣದಿಂದ ಸಿನಿಮಾ ಪ್ರದರ್ಶನ ನಿಲ್ಲಿಸುವಂತಾಯ್ತು ಎಂದು ಚಿತ್ರಮಂದಿರದ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.
ಚಿತ್ರಮಂದಿರದಿಂದ ಸ್ಪಷ್ಟನೆ
"ಲ್ಯಾಂಡ್‌ಲಾರ್ಡ್' ಪ್ರದರ್ಶನದ ವೇಳೆ ಸಂಭವಿಸಿದ ತಾತ್ಕಾಲಿಕ ವ್ಯತ್ಯಯದ ಕುರಿತು ಕೆಲವು ತಪ್ಪು ಮಾಹಿತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿಲ್ಲ ಅಥವಾ ರದ್ದುಪಡಿಸಲಾಗಿಲ್ಲ. ಅಚಾನಕ್ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ MCB ಟ್ರಿಪ್ ಆಗಿದ್ದು, ಇದು ಸುರಕ್ಷತಾ ದೃಷ್ಟಿಯಿಂದ ಆಗುವ ಸಾಮಾನ್ಯ ಕ್ರಮವಾಗಿದೆ. ಇಂತಹ ಸಂದರ್ಭದಲ್ಲಿ ಸರ್ವರ್ ಮತ್ತು ಪ್ರೊಜೆಕ್ಟರ್ ಅನ್ನು ಮರುಪ್ರಾರಂಭಿಸಬೇಕಾಗುತ್ತದೆ, ಮತ್ತು ತಾಂತ್ರಿಕ ಕ್ರಮದಂತೆ ಇದಕ್ಕೆ ಸುಮಾರು 15-20 ನಿಮಿಷಗಳು ಬೇಕಾಗುತ್ತದೆ. ಇದರಿಂದಾಗಿ ಸ್ವಲ್ಪ ಸಮಯ ವಿಳಂಬವಾಗಿದ್ದು ನಂತರ ಪ್ರದರ್ಶನವನ್ನು ಸರಾಗವಾಗಿ ಮುಂದುವರಿಸಲಾಯಿತು" ಎಂದು ಶೆಟ್ಟಿ ಸಿನಿಮಾಸ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೇಗಿದೆ ಪ್ರೇಕ್ಷಕರ ರೆಸ್ಪಾನ್ಸ್?
ಇನ್ನು 'ಲ್ಯಾಂಡ್‌ಲಾರ್ಡ್' ಸಿನಿಮಾ ನೋಡಿದವರೆಲ್ಲಾ ಮೆಚ್ಚಿಕೊಂಡಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಮಾತ್ರ ಸಿಗುತ್ತಿಲ್ಲ. ಇತ್ತೀಚೆಗೆ ಶಿವರಾಜ್‌ಕುಮಾರ್ ಸೇರಿ ಕೆಲ ಸಿನಿಮಾ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ದುನಿಯಾ ವಿಜಯ್ ಭರ್ಜರಿ ಪ್ರಚಾರ ಕೂಡ ಮಾಡುತ್ತಿದ್ದಾರೆ. ಆದರೂ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರ್ತಿಲ್ಲ.
10 ದಿನಗಳ ಕಲೆಕ್ಷನ್?
ಮೊದಲ ದಿನದಿಂದಲೂ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೂ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ 'ಲ್ಯಾಂಡ್‌ಲಾರ್ಡ್' ಸಿನಿಮಾ ಫಸ್ಟ್ ವೀಕೆಂಡ್ ಒಳ್ಳೆ ಕಲೆಕ್ಷನ್ ಮಾಡಿತ್ತು. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿಲ್ಲ. www.sacnilk.com ವೆಬ್‌ಸೈಟ್ ವರದಿ ಪ್ರಕಾರ ಸಿನಿಮಾ ಈವರೆಗೆ 5.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.
ವರ್ಷದ ಮೊದಲ ಹಿಟ್
2026ರಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾ ಈವರೆಗೆ ತೆರೆಗೆ ಬಂದಿಲ್ಲ. ಇದ್ದಿದ್ದರಲ್ಲಿ 'ಲ್ಯಾಂಡ್‌ಲಾರ್ಡ್' ಕೊಂಚ ಮಟ್ಟಿಗೆ ಸದ್ದು ಮಾಡ್ತಿದೆ. ದುನಿಯಾ ವಿಜಯ್ ವೃತ್ತಿ ಜೀವನದಲ್ಲಿ ಕೂಡ ಇದು ಒಂದೊಳ್ಳೆ ಸಿನಿಮಾ ಎನಿಸಿಕೊಂಡಿದೆ. ಮುಂದೆ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











