»   » ಸುಶ್ರಾವ್ಯ ಕಂಠ ಸದ್ಯದಲ್ಲೇ ಕನ್ನಡ ಚಿತ್ರಗೀತೆಗಳಲ್ಲಿ

ಸುಶ್ರಾವ್ಯ ಕಂಠ ಸದ್ಯದಲ್ಲೇ ಕನ್ನಡ ಚಿತ್ರಗೀತೆಗಳಲ್ಲಿ

Posted By: Staff
Subscribe to Filmibeat Kannada

ಇತ್ತೀಚಿನ ವರ್ಷದ ರಂಗೀಲಾ ಚಿತ್ರದಲ್ಲೂ ತಮ್ಮ ಮಾಧುರ್ಯಮಯ ಕಂಠ ಸಿರಿಯಿಂದ ಪಡ್ಡೆ ಹುಡುಗರೂ ಹುಚ್ಚೆದ್ದು ಕುಣಿಯುವಂತೆ ಹಾಡಿದ ಆಶಾ ಬೋಂಸ್ಲೆ ಅವರನ್ನು ಬೆಂಗಳೂರಿಗೇ ಕರೆಸಿ, ಕನ್ನಡ ಸಿನಿಮಾಕ್ಕೆ ಹಾಡು ಹಾಡಿಸುವ ಪ್ರಯತ್ನ ಸಾಗಿದೆ.

ಈ ಹಿಂದೆ ಮಹಮದ್‌ ರಫಿ, ಮನ್ನಾಡೆ, ಲತಾ ಮಂಗೇಶ್ಕರ್‌, ಕಿಶೋರ್‌ಕುಮಾರ್‌, ಅನುರಾಧ ಪೊಡ್ವಾಲ್‌, ಉಷಾ ಉತ್ತುಪ್‌ ಮೊದಲಾದ ಬಾಲಿವುಡ್‌ನ ಹೆಸರಾಂತ ಸಂಗೀತಗಾರರಿಂದ ಕನ್ನಡ ಚಿತ್ರಗಳಿಗೆ ಗೀತೆಗಳನ್ನು ಹಾಡಿಸುವ ಪ್ರಯತ್ನ ನಡೆದಿತ್ತು.

ಒಂದೇ ಬಳ್ಳಿಯ ಹೂಗಳು ಚಿತ್ರದಲ್ಲಿ ಕೆ.ಎಸ್‌.ಅಶ್ವತ್ಥ್‌ ನಟಿಸಿದ್ದ ದೃಶ್ಯದಲ್ಲಿ ನೀ ಎಲ್ಲಿ ನಡೆವೆ ದೂರ... ಎಂಬ ಗೀತೆಗೆ ಮಹಮದ್‌ ರಫಿ, ಕಲಾವತಿ ಚಿತ್ರದಲ್ಲಿ ಕುಹು ಕುಹು .. ಎನ್ನುತ ಹಾಡಿದೆ ಕಿನ್ನರ ಕಂಠದ ಕೋಗಿಲೆಯೇನೇ ಕುಹು ಕುಹು ಗೀತೆಗೆ ಮನ್ನಾಡೆ, ಆಡೂ ಆಟ ಆಡು, ಆಡಿ ನೋಡು... ರಾಜಾ ಬೇಕೆ? ರಾಣಿ ಬೇಕೆ? ಎಂಬ ಗೀತೆಯನ್ನು ಕಿಶೋರ್‌ ಕುಮಾರ್‌, ಬೆಳ್ಳನೆ ಬೆಳಗಾಯಿತು ಎಂಬ ಗೀತೆಯನ್ನು ಭಾರತ ರತ್ನ ಗೌರವಕ್ಕೆ ಪಾತ್ರವಾಗಿರುವ ಲತಾ ಮಂಗೇಶ್ಕರ್‌ ಹಾಡಿದ್ದರು.

ಈಗ ಮತ್ತೊಮ್ಮೆ ಲತಾ ಹಾಗೂ ಆಶಾ ಸಹೋದರಿಯರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ಸಾಗಿದೆ. ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶಿಸುತ್ತಿರುವ ಪರ್ವ ಚಿತ್ರದ ಗೀತೆಯನ್ನು ಲತಾ ಮಂಗೇಶ್ಕರ್‌ ಅವರಿಂದ ಹಾಡಿಸಲೇ ಬೇಕೆಂದು ದೇಸಾಯಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖಾ ಛಲ ತೊಟ್ಟಿದ್ದಾರಂತೆ. ಈ ಸಂಬಂಧ ಲತಾದೀದಿ ಜತೆ ಮಾತುಕತೆಗಳೂ ನಡೆದಿವೆ.

ದೇಸಾಯರು ಲತಾ ಅವರನ್ನು ಕರೆಸಿ ಹಾಡಿಸುವಾಗ ನಾವೇಕೆ ಸುಮ್ಮನಿಸಬೇಕು ಎಂದು ಹೊರಟಿರುವ ಸಂಗೀತ ನಿರ್ದೇಶಕ ಸಾಧು ಕೋಕಿಲಾ, ಇನ್ನೂ ಹೆಸರಿಡದ ಉಪೇಂದ್ರ ಅಭಿನಯದ ಧನರಾಜ್‌ರ ಚಿತ್ರದಲ್ಲಿ ಆಶಾ ಬೋಂಸ್ಲೆ ಅವರಿಂದ ಗೀತೆಯಾಂದನ್ನು ಹಾಡಿಸುವ ತಯಾರಿ ನಡೆಸಿದ್ದಾರಂತೆ. ಒಟ್ಟಿನಲ್ಲಿ ಇದೊಂದು ಒಳ್ಳೆ ಪೈಪೋಟಿ. ಹೇಳಿ ಕೇಳಿ ಚೈತ್ರ ಮಾಸದಲ್ಲಿ ಗಾನ ಕೋಗಿಲೆಗಳ ದನಿಯಲ್ಲಿ ಕನ್ನಡ ಹಾಡುಗಳನ್ನು ಕೇಳುವ ಯೋಗ ಕನ್ನಡಿಗರಿಗೆ ಲಭಿಸಲಿ.

English summary
Bollywood playback singers and kannada cinema
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada