ಎಸಿಪಿ ಚಂದನ್ ಏನು ದೇವರಾ, ದರ್ಶನ್‌ನ ಆಚೆ ನಾನು ಕರ್ಕೊಂಡು ಬರ್ತಿನಿ, ಆದರೆ - ಲಾಯರ್ ಜಗದೀಶ್..!
ಪ್ರಕರಣ ಯಾವುದೇ ಇರಲಿ, ಸಾಮಾಜಿಕ ಜಾಲತಾಣದ ಮೂಲಕ ಆ ಪ್ರಕರಣದ ಕುರಿತು ವಕಾಲತ್ತು ಮಾಡುತ್ತಿದ್ದವರು ಕೆ.ಎನ್. ಜಗದೀಶ್. ವಕೀಲ್ ಸಾಬ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನೂ ಗಳಿಸಿರುವ ಕೆ.ಎನ್. ಜಗದೀಶ್ ಅವರಿಗೆ ಅದ್ಯಾವ ಮರದ ಕೆಳಗೆ ಜ್ಞಾನೋದಯವಾಯಿತೋ ಗೊತ್ತಿಲ್ಲ, ದರ್ಶನ್ ಬಂಧನವಾದಾಗ ಸುಮ್ಮನೆ ಇದ್ದವರು ಕೆಲ ದಿನಗಳ ಹಿಂದೆ ದಿಗ್ಗನೆ ಎದ್ದು ಬಂದು ದರ್ಶನ್ ತಪ್ಪೇ ಮಾಡಿಲ್ಲ ಎಂದರು. ಬೆಂಬಲದ ಧ್ವಜ ಹಾರಿಸಿದರು.
ದರ್ಶನ್ ಅವರನ್ನು ಇಮೀಡಿಯೆಟ್ಟಾಗಿ ಬಿಡಬೇಕೆಂದು ಹತ್ತು ಇಪ್ಪತ್ತು ಜನರ ಜೊತೆ ಧರಣಿ ಕುಂತರು. ದರ್ಶನ್ ಅಭಿಮಾನಿಗಳು ತಮ್ಮ ಜೊತೆ ಕೈ ಜೋಡಿಸದಿರುವುದಕ್ಕೆ ಬಿರಿಯಾನಿ ಹಾಗೂ ಹಣ ನೀಡದೇ ಇದ್ದಿದ್ದಕ್ಕೆ ದರ್ಶನ್ ಫ್ಯಾನ್ಸ್ ಬಂದಿಲ್ಲ ಎಂದು ತಮ್ಮ ಮನದ ನೋವು ಹಂಚಿಕೊಂಡರು. ಆ ನಂತರ ತಮ್ಮ ನೋವನ್ನು ಮರೆತು ನಗು ನಗುತ್ತಾ ಬಿಗ್ ಬಾಸ್ ಮನೆಗೆ ಹೋದರು. ಹೀಗಾಗಿ ಬಿಗ್ ಬಾಸ್ ಮನೆಗೆ ಹೋಗಲು ವಕೀಲ್ ಸಾಬ್ ಇಷ್ಟೆಲ್ಲ ಕಸರತ್ತು ಮಾಡಿದ್ದು ಎಂದು ಜನ ಮಾತನಾಡಿಕೊಂಡರು. ದರ್ಶನ್ ಹೆಸರಿನಲ್ಲಿ ಜಗದೀಶ್ ಪ್ರಚಾರ ಮಾಡಿದರು ಎಂದು ಟ್ರೋಲ್ ಕೂಡ ಮಾಡಿದರು.

ಇಂಥಾ ಜಗದೀಶ್ ಈಗ ಬಿಗ್ ಬಾಸ್ ಮನೆಯಾಚೆ ಬಂದಿದ್ದಾರೆ. ಮನೆಯಲ್ಲಿನ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಹಜವಾಗಿ ದರ್ಶನ್ ಪ್ರಕರಣದ ಕುರಿತು ಕೂಡ ತಮ್ಮ ವಿಚಾರವನ್ನು ಜಗದೀಶ್ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಜಗದೀಶ್ ಅವರ ಈ ನಡೆ ಮತ್ತು ನುಡಿಯಿಂದ ದರ್ಶನ್ ಪರ ವಕೀಲ್ ಸಾಬ್ ವಕಾಲತ್ತು ಮಾಡುತ್ತಾರಾ, ದರ್ಶನ್ ಅವರನ್ನು ಜೈಲಿಂದ ಹೊರ ಕರೆತರುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಉತ್ತರವನ್ನು ಈಗ ಜಗದೀಶ್ ನೀಡಿದ್ದಾರೆ. ದರ್ಶನ್ ಒಬ್ಬ ಶತ ದಡ್ಡ ಎಂದಿದ್ದಾರೆ.
ಹೌದು. ಟಿವಿ 5ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೆ.ಎನ್.ಜಗದೀಶ್ ನಾನು ದರ್ಶನ್ ಪರ ಇಷ್ಟೆಲ್ಲ ವಾದ ಮಾಡಿದರೂ ಅವರ ಕುಟುಂಬದವರು ನನ್ನನ್ನೂ ಸಂಪರ್ಕಿಸಿಲ್ಲ ಈ ಕಾರಣಕ್ಕೆ ಹೊರಗಡೆಯಿಂದನೇ ನಮ್ಮ ಕೈಯಲ್ಲಿ ಕೆಲಸ ನಾವು ಮಾಡಬೇಕಾಗಿದೆ ಎಂದಿದ್ದಾರೆ. ಇನ್ನೂ ಆಕಸ್ಮಾತ್ ಅವರ ಫ್ಯಾಮಿಲಿಯವರು ಯಾರಾದರೂ ಸಂಪರ್ಕ ಮಾಡಿದ್ದರೆ ಅವರನ್ನು ಹೊರ ಕರೆತರಲು ಖಂಡಿತವಾಗಿ ನಾನು ಸಹಾಯ ಮಾಡುತ್ತಿದ್ದೆ ಎಂದಿರುವ ಜಗದೀಶ್ ಆತನ ಪರ ನಾನು ಪ್ರೊಟೆಸ್ಟ್ ಮಾಡಿದೆ, ಕ್ಯಾಂಪೇನ್ ಮಾಡಿದೆ, ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದೆ, ಪೊಲೀಸ್ ತನಿಖೆಯನ್ನು ವಿರೋಧಿಸಿ ಆತ ಕೊಲೆನೇ ಮಾಡಿಲ್ಲ ಎಂದು ಹೇಳಿದ ಏಕೈಕ ವ್ಯಕ್ತಿ ಕನ್ನಡದಲ್ಲಿ ನಾನು ಒಬ್ಬನೇ ಎಂದಿದ್ದಾರೆ. ಇದಕ್ಕಿಂತ ಇನ್ನೇನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಕೈಲಾದಷ್ಟು ನಾನು ಮಾಡಿದ್ದೇನೆ ಮಿಕ್ಕಿದ್ದು ಅವನ ಹಣೆ ಬರಹ ಎಂದು ಹೇಳಿದ್ದಾರೆ.
ಮುಂದುವರೆದು ವಿಜಯಲಕ್ಷ್ಮಿ ಜೊತೆ ಅವನನ್ನು ನೋಡಬೇಕೆಂಬ ಆಸೆ ಇದೆ, ಹೊರಗಡೆ ಬಂದ ಮೇಲೆ ವಿಜಯಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದಿರುವ ಜಗದೀಶ್ ಸಾಯಂಕಾಲ ಆಗ್ತಿದ್ದಂತೆಯೇ ಆ ಗ್ರೇ ಏರಿಯಾಗೆ ಹೋಗಬೇಡ ಅಂತ ಹೇಳು, ಶೆಡ್‌ಗೆ ಹೋಗಬೇಡ ಅಂತ ಹೇಳು, ಮನೆಯಲ್ಲಿರು ಅಂತ ಹೇಳು ಎಂದು ನಕ್ಕಿದ್ದಾರೆ.
ಇನ್ನೂ ದರ್ಶನ್ ನಿರಪರಾಧಿನಾ ಎಂದು ಹೇಳುವುದು ಕಷ್ಟ ಇದೆ. ಯಾಕೆಂದರೆ ಚಾರ್ಜ್‌ಶೀಟ್ ಹಾಕಿದ್ದಾರೆ. ಆದರೆ ಒಂದು ಮಾತ್ರ ನಿಜಾ ದರ್ಶನ್ ಹೊರಗಡೆ ಬರಬೇಕು ಎಂದಿರುವ ಜಗದೀಶ್ ಆಗಿರುವ ಕೊಲೆ ತಪ್ಪಿಸಲು ಆಗಲ್ಲ ಆದರೆ 17 ಜನ ಮಾಡಿರುವ ಕೊಲೆಯಲ್ಲಿ ಯಾರು ಮಾಡಿದ್ದಾರೆ ಅನ್ನೋದು ಎಸಿಪಿ ಚಂದನ್‌ಗೆ ಹೇಗೆ ಗೊತ್ತಾಯ್ತು, ಎಸಿಪಿ ಚಂದನ್ ಏನು ದೇವರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಯಾರದ್ದೋ ವಿರುದ್ಧ ಪ್ರಚಾರ ಮಾಡಿದ ತಪ್ಪಿಗೆ ಸಿಲುಕಿಸಿರುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ.
ಇದೇ ಸಮಯದಲ್ಲಿ ಅಮಾಯಕ ಅಂತೇಳಲು ಹೋಗುವುದಿಲ್ಲ ಆದರೆ ದಡ್ಡ ಅಂತ ಹೇಳಬಲ್ಲೆ, ಚಿತ್ರರಂಗದಲ್ಲಿ ಒಬ್ಬ ದಡ್ಡ, ಒಬ್ಬ ಶತ ದಡ್ಡ ಎಂದು ಹೇಳಿದರೆ ತಪ್ಪಾಗಲಾರದು ಎಂದಿರುವ ಜಗದೀಶ್ ನಾನೇನು ಫ್ಯಾನ್ಸ್‌ಗಳಿಗೆಲ್ಲ ಭಯ ಬೀಳಲು ಹೋಗಲ್ಲ, ಯಾಕೆಂದರೆ ಪ್ರತಿಭಟನೆಗೆ ಬಂದಿದ್ದೇ 18 ಜನ ನಾವೆಲ್ಲ ನೋಡ್ಬಿಟ್ಟಿದೀವಿ ಎಂದು ವ್ಯಂಗ್ಯವಾಡಿದ್ದಾರೆ. ಹೊರಗೆ ಬರಲಿ ವಿಜಯಲಕ್ಷ್ಮಿ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ, ಚಿತ್ರರಂಗಕ್ಕೆ ಆಸ್ತಿಯಾಗಲಿ ಎಂದಿದ್ದಾರೆ.


Click it and Unblock the Notifications











